ಮಂಗಳವಾರ, ಸೆಪ್ಟೆಂಬರ್ 21, 2021
21 °C

ಕೂಡ್ಲಿಗಿ: ಗಿಡ ಉಳಿಸಿ, ಬೆಳೆಸುವ ಯುವ ಪಡೆ

ಎ.ಎಂ. ಸೋಮಶೇಖರ್‌ Updated:

ಅಕ್ಷರ ಗಾತ್ರ : | |

Prajavani

ಕೂಡ್ಲಿಗಿ: ರಸ್ತೆ ಬದಿಯಲ್ಲಿನ ಗಿಡಗಳನ್ನು ಉಳಿಸಿ, ಅವುಗಳನ್ನು ಪೋಷಿಸಿ, ಬೆಳೆಸುವ ಕಾರ್ಯವನ್ನು ಪಟ್ಟಣದ ಯುವಕ ತಂಡವೊಂದು ಸದ್ದಿಲ್ಲದೆ ಮಾಡುತ್ತಿದೆ.

‘ಮೈದಾನ ಗೆಳೆಯರ ಬಳಗ’ದ ಯುವಕರು ಸ್ಥಳೀಯ ಜೆಸಿಐ ಸದಸ್ಯರೊಂದಿಗೆ ಸೇರಿಕೊಂಡು ಪಟ್ಟಣದ ಗುಡೇಕೋಟೆ ರಸ್ತೆ ಅಕ್ಕಪಕ್ಕದಲ್ಲಿನ ಗಿಡಗಳು, ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲಿ ಆರಣ್ಯ ಇಲಾಖೆಯಿಂದ ನೆಟ್ಟಿರುವ ಗಿಡಗಳನ್ನು ಉಳಿಸಿ, ಪೋಷಿಸುತ್ತಿದ್ದಾರೆ. ಕೆಲವೊಂದು ಕಡೆ ನೆಟ್ಟ ಗಿಡಗಳು ಒಣಗಿದ್ದರೆ ಅವುಗಳ ಜಾಗದಲ್ಲಿ ಬೇರೊಂದು ಗಿಡವನ್ನು ನೆಡುತ್ತಾರೆ.

ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಗಿಡಗಳ ಒಣಗದಂತೆ ಪ್ರತಿ ಭಾನುವಾರ ನೀರುಣಿಸುತ್ತಾರೆ. ಸಣ್ಣ ಸಣ್ಣ ಗಿಡಗಳಿದ್ದರೆ ಅವುಗಳಿಗೆ ಪಾತಿ ಮಾಡಿ, ಮುಳ್ಳು ಕಂಟಿ ಕಟ್ಟಿ ಮೇಕೆ, ಬಿಡಾಡಿ ದನಗಳು ತಿನ್ನದಂತೆ ರಕ್ಷಣೆ ಮಾಡುತ್ತಿದ್ದಾರೆ. ಗಾಳಿ, ಮಳೆಗೆ ಬಿದ್ದ ಗಿಡ, ಮರಗಳನ್ನು ಎತ್ತಿ ನಿಲ್ಲಿಸಿ ಅವುಗಳು ಮತ್ತೆ ಬೆಳೆಯುವಂತೆ ಮಾಡುತ್ತಿದ್ದಾರೆ. ಇವರ ಕೆಲಸದಿಂದ ಡಾ. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಐದಾರು ವರ್ಷಗಳ ಹಿಂದೆ ಅರಣ್ಯ ಇಲಾಖೆಯಿಂದ ನೆಟ್ಟಂತಹ ಗಿಡಗಳು ಸೊಂಪಾಗಿ ಬೆಳೆದು ಮರಗಳಾಗಿ ಜನರಿಗೆ ನೆರಳು ನೀಡುತ್ತಿವೆ.

ಇವರ ಕಾರ್ಯವನ್ನು ಮೆಚ್ಚಿಕೊಂಡ ಡಿವೈಎಸ್ಪಿ ಹರೀಶ್ ರೆಡ್ದಿ, ಸಿಪಿಐ ವಸಂತ, ಆಸೋದೆ, ವಲಯ ಆರಣ್ಯ ಅಧಿಕರಿಗಳಾದ ರೇಣುಕಮ್ಮ, ಬಿ.ಎಸ್. ಜಗದೀಶ್ ಹಾಗೂ ಸಿಬ್ಬಂದಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇವರ ಬೆಂಬಲಕ್ಕೆ ನಿಂತಿದ್ದಾರೆ. ಅಗತ್ಯ ಪ್ರೋತ್ಸಾಹ ನೀಡುತ್ತಿದ್ದಾರೆ.

ಹಕ್ಕಿಗಳಿಗೂ ನೀರು: ಸ್ವಯಂ ತಯಾರಿಸಿದ ಡಬ್ಬಿಗಳನ್ನು ಪಟ್ಟಣದಲ್ಲಿ ಪಕ್ಷಿಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಜಾಗಳಲ್ಲಿ ಕಟ್ಟಿ ಅವುಗಳಲ್ಲಿ ಕಾಳು, ನೀರನ್ನು ಹಾಕಿ ಇಡುವ ಮೂಲಕ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ನೀಗಿಸುವ ಕಾರ್ಯವನ್ನೂ ಕೈಗೊಂಡಿದ್ದಾರೆ.

ಗೆಳೆಯರ ಬಳಗದಲ್ಲಿ ಉಪನ್ಯಾಸಕರು, ಶಿಕ್ಷಕರು, ಪೊಲೀಸರು, ವ್ಯಾಪಾರಸ್ಥರು, ಯುವಕರು, ಸಾಮಾಜಿಕ ಕಾರ್ಯಕರ್ತರು, ಪರಿಸರ ಪ್ರೇಮಿಗಳು, ಪಕ್ಷಿ ಪ್ರಿಯರಾದ ಅಬೂಬಕರ್, ರಜತ್, ಶ್ರೀಧರ ರಾಯ್ಕರ್, ರಿಜ್ವಾನ್, ವಿರೇಶ್, ಕೊಟ್ರೇಶ್, ಅಜ್ಜಯ್ಯ, ಪ್ರಕಾಶ್, ಕೆ.ನಾಗರಾಜ, ಲಕ್ಕಪ್ಪ, ಮಹಾಂತೇಶ್, ವಿಜಯಕುಮಾರ್ ಕೊಟ್ರೇಶ್, ಶ್ರೀಕಾಂತ್ ತಳವಾರ್, ರೆಹಮಾನ್, ಚನ್ನಬಸವನಗೌಡ, ಸಾರಥಿ ಹನುಮಂತಪ್ಪ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು