ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಬಿಜೆಪಿ ಕೈಗೊಂಬೆ: ಭೇಳೂರು ಆರೋಪ

Last Updated 6 ಮೇ 2019, 13:01 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಬಿಜೆಪಿ ಶಾಸಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಒತ್ತಡಕ್ಕೆ ಮಣಿದು ಹೊಸನಗರ ತಾಲ್ಲೂಕು ಮಣಸಟ್ಟೆ ಮರಳು ಪರವಾನಗಿ ರದ್ದುಮಾಡಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಮರಳು ತುಂಬಲು ಅನುಮತಿ ದೊರಕಿದ ಮೇಲೆ ಜನ ಸಾಮಾನ್ಯರಿಗೆ ಅಗ್ಗದ ದರದಲ್ಲಿ ಮರಳು ದೊರಕುತ್ತಿದೆ. ಈಗ ಒತ್ತಡಕ್ಕೆ ಮಣಿದು ಗುತ್ತಿಗೆ ಅನುಮತಿ ರದ್ದು ಮಾಡಿದ ಕಾರಣ ಮತ್ತೆ ಮರಳಿನ ಕೊರತೆ ಎದುರಾಗಲಿದೆ. ಜಿಲ್ಲಾಧಿಕಾರಿ ನಿರ್ಧಾರ ಖಂಡಿಸಿ ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಬಿಜೆಪಿ ಶಾಸಕರ ಜತೆ ಶಾಮೀಲಾಗಿರುವ ಜಿಲ್ಲಾಧಿಕಾರಿ ಎತ್ತಂಗಡಿಗೆ ಒತ್ತಾಯಿಸಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮರಳು ದಂಧೆ ಕೆಲವರಿಗೆ ಚುನಾವಣಾ ರಾಜಕೀಯದ ಮೂಲ ಧನವಾಗಿದೆ. ಪ್ರತಿ ಲೋಡ್‌ ಮರಳಿಗೆ ₨ 10 ಸಾವಿರ ನೀಡಲು ಕೋರಿಕೆ ಇಡುತ್ತಾರೆ. ದಿನಕ್ಕೆ 400 ಲಾರಿ ಲೋಡ್ ಸಾಗಣೆ ಮಾಡಲಾಗುತ್ತದೆ. ಹಣ ಕೊಡಲು ಒಪ್ಪದಿದ್ದರೆ ಸುಳ್ಳು ದೂರು ನೀಡುತ್ತಾರೆ. ಅಕ್ರಮ ನಡೆಯುತ್ತಿದೆ ಎಂದು ಪ್ರತಿಭಟನೆ ನಡೆಸುತ್ತಾರೆ. ಇಂಥವರ ಮಾತು ಕೇಳಿ ಜಿಲ್ಲಾಧಿಕಾರಿ ಗುತ್ತಿಗೆ ಅನುಮತಿ ರದ್ದು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಮರಳು ಕ್ವಾರಿಗೆ ಸಿಸಿಟಿವಿ ಅಳವಡಿಸುವುದು. ಲಾರಿಗಳಿಗೆ ಜಿಪಿಎಸ್ ಹಾಕುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕೆಲಸ. ಸಮಸ್ಯೆಗಳು ಇದ್ದರೆ ದಂಡವಿಧಿಸಬಹುದು. ಸರಿಯಾಗಿ ಕಲಸ ಮಾಡುವಂತೆ ನೋಟಿಸ್‌ ನೀಡಬಹುದು. ಆದರೆ, ಜಿಲ್ಲಾಧಿಕಾರಿ ಇದ್ಯಾವುದನ್ನೂ ಮಾಡದೆ ಬಿಜೆಪಿ ಮುಖಂಡರ ಮಾತು ಕೇಳಿಕೊಂಡು, ಸ್ಥಳ ಪರಿಶೀಲನೆ ನಡೆಸದೇ ಕ್ರಮ ಕೈಗೊಂಡಿದ್ದಾರೆ ಎಂದು ದೂರಿದರು.

ಮರಳು ವಿಚಾರದಲ್ಲಿ ಪ್ರತಿಭಟನೆ ನಡೆಸುವ ಸಾಗರ, ತೀರ್ಥಹಳ್ಳಿ ಶಾಸಕರು ಮಂಗನಕಾಯಿಲೆಯಿಂದ 22 ಜನರು ಮೃತಪಟ್ಟರೂ ಏಕೆ ಪ್ರತಿಭಟನೆ ನಡೆಸಲಿಲ್ಲ? ಕಾರ್ಮಿಕರ ಸಂಕಷ್ಟದ ಬಗ್ಗೆ ಗಮನ ಹರಿಸಲಿಲ್ಲ. ಈಗ ಭ್ರಷ್ಟಾಚಾರದ ಹಣಕ್ಕೆ ಕನಿಷ್ಠಮಟ್ಟಕ್ಕೆ ಇಳಿದಿದ್ದಾರೆ. ಇಂತಹ ಕನಿಷ್ಠ ಶಾಸಕರನ್ನು ಹಿಂದೆ ನೋಡಿರಲಿಲ್ಲ. ಶಾಸಕರ ನೆಂಟರು, ಬೀಗರೆಲ್ಲ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಉಳಿದವರಿಂದಲೂ ತಮಗೆ ಪಾಲು ಸಿಗುತ್ತಿಲ್ಲವೆಂದುಪ್ರತಿಭಟನೆಗೆ ಇಳಿದಿದ್ದಾರೆ
ಎಂದು ಛೇಡಿಸಿದರು.

ಲೋಕಸಭಾ ಚುನಾವಣೆ ಬೆನ್ನಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂದಾಗಿರುವ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ನೀತಿ ಸಂಹಿತೆಯಿಂದಾಗಿ ಯಾವ ಕೆಲಸಗಳೂ ಆಗುತ್ತಿಲ್ಲ. ಈ ವಿಚಾರದಲ್ಲಿ ರಾಷ್ಟ್ರಪತಿ ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಜನರು ಮೈತ್ರಿ ಅಭ್ಯರ್ಥಿ ಬೆಂಬಲಿಸಿದ್ದಾರೆ. ಸೋಲುವ ಸುಳಿವು ದೊರೆತ ಕಾರಣ ಯಡಿಯೂರಪ್ಪ ಮಗನ ಗೆಲುವಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಕನಿಷ್ಠ 18 ಸಾವಿರದಿಂದ 20 ಸಾವಿರ ಅಂತರದಲ್ಲಿ ಬಿಜೆಪಿ ಸೋಲು ಕಾಣಲಿದೆ ಎಂದು ಭವಿಷ್ಯ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ಚಿನ್ನಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT