ಶನಿವಾರ, ಸೆಪ್ಟೆಂಬರ್ 19, 2020
21 °C

ಶರಾವತಿ, ಕಲ್ಲೊಡ್ಡು ಯೋಜನೆಗೆ ಬೇಳೂರು ಗೋಪಾಲಕೃಷ್ಣ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಬೆಂಗಳೂರಿಗೆ ಶರಾವತಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಹಾಗೂ ಜಿಲ್ಲೆಯ ಕಲ್ಲೊಡ್ಡು ಯೋಜನೆ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಿಸಿದರು.

ಜುಲೈ 10ರಂದು ವಿವಿಧ ಸಂಘಟನೆಗಳು ಕರೆದಿರುವ ಶಿವಮೊಗ್ಗ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲಾಗುವುದು. ಕಲ್ಲೊಡ್ಡಿ ಯೋಜನೆ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಾಗಿ 5 ದಶಕಗಳ ಹಿಂದೆ ಸಾವಿರಾರು ಕುಟುಂಬಗಳು ಸಂತ್ರಸ್ತರಾಗಿದ್ದರು. ಇಂದಿಗೂ ಅವರಿಗೆ ಪೂರ್ಣ ಪ್ರಮಾಣದಲ್ಲಿ ನೆಲೆ ಕಲ್ಪಿಸಲು ಸಾಧ್ಯವಾಗಿಲ್ಲ. ಈಗ ಮತ್ತೊಂದು ಸಂಕಷ್ಟ ಜಿಲ್ಲೆಗೆ ಎದುರಾಗಿದೆ.
ಮತ್ತೊಂದೆಡೆ ಮಳೆ ಇಲ್ಲದೇ ಮಲೆನಾಡು ಬಯಲು ಸೀಮೆಯಾಗುತ್ತಿದೆ. ಕುಡಿಯುವ ನೀರಿಗೂ ಆಹಾಕಾರ ಎದುರಾಗಿದೆ. ಜಲಾಶಯಗಳು ಬರಿದಾಗಿವೆ. ಲಿಂಗನಮಕ್ಕಿ ನೀರು ವಿದ್ಯುತ್ ಉತ್ಪಾದನೆಗೇ ಸಾಕಾಗುತ್ತಿಲ್ಲ. ನಾಡಿಗೆ ಬೆಳಕು ಕೊಟ್ಟು ಕತ್ತಲಲ್ಲಿ ಬದುಕುತ್ತಿರುವ ಜನರ ಬವಣೆ ಮುಗಿದಿಲ್ಲ. ಹೀಗಿರುವಾಗ ಬೆಂಗಳೂರಿಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ ಎಂದರು.

ಯಾವುದೇ ಯೋಜನೆಗಳನ್ನು ರೂಪಿಸುವುದು ತಪ್ಪಲ್ಲ. ಜನ ವಿರೋಧ ಇದ್ದರೆ ಸರ್ಕಾರ ಪರಿಶೀಲಿಸಬೇಕು. ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಶರಾವತಿ ಯೋಜನೆ ಕೈಬಿಡಬೇಕು. ಬಿಜೆಪಿ ಇದರ ಲಾಭ ಪಡೆದುಕೊಳ್ಳಲು ಅವಕಾಶ ನೀಡುವುದಿಲ್ಲ. ಆ ಪಕ್ಷದ ಮುಖಂಡರಿಗೆ ಯೋಜನೆ ವಿರೋಧಿಸುವ ಯೋಗ್ಯತೆಯೂ ಇಲ್ಲ ಎಂದು ಛೇಡಿಸಿದರು.

ಶರಾವತಿ ಯೋಜನೆ ವಿರುದ್ಧ ಜನರು ಬೀದಿಗಿಳಿದು ಹೋರಾಟ ನಡೆಸಿದಂತೆ ಸಾಗರದ ಕಲ್ಲೊಡ್ಡಿನಿಂದ ಶಿಕಾರಿಪುರಕ್ಕೆ ನೀರು ತೆಗೆದುಕೊಂಡು ಹೋಗುವ ಯೋಜನೆಯನ್ನೂ ವಿರೋಧಿಸಬೇಕು. ಬಿಜೆಪಿಯ ಕುತಂತ್ರದಿಂದ ಈ ಯೋಜನೆ ಜಾರಿಯಾದರೆ ಸಾಗರದ ಹತ್ತಾರು ಹಳ್ಳಿಗಳು ಮುಳುಗಡೆಯಾಗಲಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಸುಳ್ಳು ಹೇಳುವುದೇ ಅಪ್ಪ–ಮಗನ ಕೆಲಸ:

ಭದ್ರಾವತಿಯ ವಿಐಎಸ್ಎಲ್ ಮತ್ತು ಎಂಪಿಎಂ ಉಳಿಸುವುದಾಗಿ ಹೇಳಿ ಮತ ಪಡೆದು ಲೋಕಸಭೆ ಪ್ರವೇಶಿಸಿದ ಬಿ.ವೈ.ರಾಘವೇಂದ್ರ ಈಗ ಉತ್ತರ ಹೇಳಬೇಕು. ವಿಐಎಸ್ಎಲ್ ಖಾಸಗೀಕರಣಕ್ಕೆ ಜಾಗತಿಕ ಟೆಂಡರ್ ಕರೆದಿದ್ದಾರೆ. ಅಪ್ಪ-–ಮಗನಿಗೆ ಸುಳ್ಳು ಹೇಳುವುದೆ ಕೆಲಸ. ತುಮರಿ ಸೇತುವೆ ವಿಚಾರದಲ್ಲೂ ಸುಳ್ಳುಗಳ ಸರಮಾಲೆ ಹೆಣೆಯುತ್ತಿದ್ದಾರೆ. ಇನ್ನಾದರು ಅವರನ್ನು ನಂಬಿಕೊಳ್ಳದೆ ವಿಐಎಸ್ಎಲ್ ಉಳಿವಿಗೆ ಪಕ್ಷಾತೀತ ಹೋರಾಟದ ರೂಪಿಸಬೇಕು ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಹುಲ್ತಿಕೊಪ್ಪ ಶ್ರೀಧರ್, ಸೋಮಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು