ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಮಳೆಗಾಲದಲ್ಲಿ 10 ಲಕ್ಷ ಸಸಿ ಉಚಿತ ವಿತರಣೆ: ಬಿಬಿಎಂಪಿ ಆಯುಕ್ತ ಭರವಸೆ

ಮೊಳೆ ಮುಕ್ತ ಮರ ಅಭಿಯಾನದಲ್ಲಿ ಭರವಸೆ
Last Updated 21 ಮಾರ್ಚ್ 2021, 20:35 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯಾನ ನಗರಿ ಎಂಬ ಹೆಗ್ಗಳಿಕೆ ಮುಂದುವರಿಯಬೇಕಾದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚು ಹೆಚ್ಚು ಸಸಿಗಳನ್ನು ಬೆಳೆಸಬೇಕು. ಮುಂದಿನ ಮಳೆಗಾಲದಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಿಕೊಳ್ಳಲು ಯುವಜನತೆ ಸಜ್ಜಾಗಿ. ಪಾಲಿಕೆ ನಿಮಗೆ ಅಷ್ಟೂ ಸಸಿಗಳನ್ನು‌ ಉಚಿತವಾಗಿ ಒದಗಿಸಲಿದೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಬೆಂಗಳೂರು ಹುಡುಗರು’ ತಂಡವು ಅಂತರರಾಷ್ಟ್ರೀಯ ಅರಣ್ಯ ದಿನದ ಅಂಗವಾಗಿ ಹಾಗೂ ‘ಮೊಳೆ ಮುಕ್ತ ಮರ– ಬೆಂಗಳೂರು’ ಅಭಿಯಾನದ ಜಾಗೃತಿಗಾಗಿ ಬಿಬಿಎಂಪಿ ಸಹಭಾಗಿತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ನಡಿಗೆ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

‘ಕಬ್ಬನ್ ಉದ್ಯಾನದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನನ್ನ ಮಕ್ಕಳಿಗೆ ಶಾಲಾ ವತಿಯಿಂದ ಎರಡು ಸಸಿಗಳನ್ನು ನೀಡಿದ್ದರು. ಅವುಗಳನ್ನು ನಮ್ಮ ಮನೆಯ ಮುಂಭಾಗದಲ್ಲಿ ನೆಟ್ಟಿದ್ದರು. ಅವುಗಳೀಗ ಹೆಮ್ಮರವಾಗಿ ಬೆಳೆದಿವೆ. ನಾವೇ ಬೆಳೆಸಿದ ಮರಗಳು ಎಂಬ ಭಾವನೆ ಸ್ವಾಭಾವಿಕವಾಗಿ ಬರುತ್ತದೆ. ಯುವಜನರು ಮನಸ್ಸು ಮಾಡಿದರೆ ಯಾವುದೇ ಕೆಲಸವೂ ಅಸಾಧ್ಯವಲ್ಲ’ ಎಂದು ಹುರಿದುಂಬಿಸಿದರು.

ನಾಗರಿಕರು ಸಂಘಟನೆಗಳು ತಂಡಗಳನ್ನು ರೂಪಿಸಿಕೊಂಡು ಮರಗಳಿಗೆ ಭಿತ್ತಿಪತ್ರ ಅಂಟಿಸಲು ಹೊಡೆದಿರುವ ಮೊಳೆ, ಸ್ಟ್ಯಾಪ್ಲರ್ ಪಿನ್ ತೆರವುಗೊಳಿಸುತ್ತಿರುವುದು ಶ್ಲಾಘನೀಯ. ಜನರಿಂದ ಸ್ವಯಂ ರೂಪುಗೊಳ್ಳುವ ಕಾರ್ಯಕ್ರಮ ಯಾವತ್ತೂ ಯಶಸ್ವಿಯಾಗುತ್ತದೆ ಎಂದರು.

ರೈಲ್ವೆಯ ಎಡಿಜಿಪಿ ಭಾಸ್ಕರ್ ರಾವ್, ‘ಮರಗಳಿಗೆ ಹೊಡೆದಿರುವ ಮೊಳೆಗಳನ್ನು ತೆಗೆದು ನಗರ ಸುಂದರವಾಗಿರಲು ಮುಂದಾದ ಯುವಜನರ ಯೋಚನೆಗೆ ಮಾರುಹೋದೆ’ ಎಂದರು.

‘ಬೆಂಗಳೂರು ಹುಡುಗರು’ ತಂಡದ ವಿನೋದ್, ‘ವಸಂತನಗರ ವಾರ್ಡ್‌ನಲ್ಲಿ ನಾಲ್ವರು ಸ್ನೇಹಿತರು ಸೇರಿ ಆರಂಭಿಸಿದ ಈ ಅಭಿಯಾನ ನಗರದಾದ್ಯಂತ ವ್ಯಾಪಿಸಿದೆ. ಮರಗಳಿಗೆ ಹಾನಿ ಉಂಟುಮಾಡಿರುವವರ ವಿರುದ್ಧ ಸುಮಾರು 12 ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ. ಕರ್ನಾಟಕ ಸಿವಿಲ್ ಡಿಫೆನ್ಸ್, ದೆಹಲಿ ಕೇಂದ್ರ ಸಂಸ್ಥೆಯ ಹಿಂದೂಸ್ತಾನಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ನಗರದ ಪ್ರತಿನಿಧಿಗಳು, ವೀಲ್ ಚೇರ್ ಅಸೋಸಿಯೇಷನ್, ಪರಿವರ್ತನ ಟ್ರಸ್ಟ್, ಸಿಟಿಜನ್ ಟಾಸ್ಕ್ ಫೋರ್ಸ್‌ ಸೇರಿ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿವೆ’ ಎಂದರು.

ಬಾಲಭವನದಿಂದ ಪ್ರಾರಂಭವಾದ ಜಾಥಾ ಮ್ಯೂಸಿಯಂ ರಸ್ತೆ, ವಿಠಲ ಮಲ್ಯ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ‌ ಮೂಲಕ ಪಾಲಿಕೆ ಕೇಂದ್ರ ಕಚೇರಿ ಆವರಣ ತಲುಪಿತು. ಮಕ್ಕಳು, ವಿಶೇಷ ಸಾಮರ್ಥ್ಯದವರು, ಯುವಕ– ಯುವತಿಯರು ಸೇರಿದಂತೆ 600ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT