ಶುಕ್ರವಾರ, ಜೂನ್ 25, 2021
21 °C

ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಪ್ರತಿಕಾಯಗಳ ಸೃಷ್ಟಿ ಉತ್ತಮವಾಗಿದ್ದು, ಅವರಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿದೆ ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ.

ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಸ್‌ಜೆಐಸಿಆರ್) ಕೋವಿಶೀಲ್ಡ್‌ ಲಸಿಕೆ ಪಡೆದಿದ್ದ 140 ಆರೋಗ್ಯ ಕಾರ್ಯಕರ್ತರಿಗೆ ಈ ಪರೀಕ್ಷೆ ನಡೆಸಲಾಗಿದೆ. ಪ್ರತಿಕಾಯಗಳ ಸ್ಪಂದನೆ ಮತ್ತು ರೋಗನಿರೋಧಕ ಶಕ್ತಿಯನ್ನು ತಿಳಿಯಲು ’ಎಲಿಸಾ‘ ಪರೀಕ್ಷೆ ನಡೆಸಲಾಗಿತ್ತು. 140 ಜನರ ಪೈಕಿ 109 ಕಾರ್ಯಕರ್ತರಲ್ಲಿ ಉತ್ತಮ ರೋಗನಿರೋಧಕ ಶಕ್ತಿ ವೃದ್ಧಿಯಾಗಿರುವುದು ಪರೀಕ್ಷೆಯಿಂದ ತಿಳಿದು ಬಂದಿದೆ. ಅಂದರೆ, ಶೇ 78 ಮಂದಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದೆ.

ಇವರೆಲ್ಲರೂ ಕೋವಿಶೀಲ್ಡ್‌ನ ಮೊದಲ ಡೋಸ್‌ ಪಡೆದ ಒಂದು ತಿಂಗಳ ನಂತರ ಪರೀಕ್ಷೆ ನಡೆಸಲಾಗಿದೆ. ಒಂದು ತಿಂಗಳು ಬಿಟ್ಟು ಇವರಿಗೆ ಮತ್ತೆ ಎಲಿಸಾ ಪರೀಕ್ಷೆ ನಡೆಸಲಿದ್ದು, ಇವರೊಂದಿಗೆ ಇನ್ನೂ 200 ಜನರು ಪರೀಕ್ಷೆಗೆ ಒಳಗಾಗಲಿದ್ದಾರೆ.

’ಕೋವಿಶೀಲ್ಡ್‌ನ ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ಪಡೆಯುವ ಅವಧಿಯನ್ನು ಸರ್ಕಾರ 6ರಿಂದ 8 ವಾರ ಇದ್ದದ್ದನ್ನು, 12ರಿಂದ 16 ವಾರಕ್ಕೆ ವಿಸ್ತರಿಸಿದಾಗ ನಮಗೆ ಸ್ವಲ್ಪ ಆತಂಕವಾಯಿತು. ಪರೀಕ್ಷೆಗೆ ಒಳಗಾಗಿದ್ದ ಈ ಆರೋಗ್ಯ ಕಾರ್ಯಕರ್ತರು ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್‌ ಪಡೆದಿದ್ದರು. ಅವಧಿ ವಿಸ್ತರಣೆ ನಂತರ, ಇವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿದೆಯೋ, ಇಲ್ಲವೋ ಎಂಬ ಅನುಮಾನವಿತ್ತು. ಆದರೆ, ನಾಲ್ಕು ವಾರಗಳ ಅವಧಿಯಲ್ಲಿಯೇ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುವುದು ಪರೀಕ್ಷೆಯಿಂದ ಸಾಬೀತಾಗಿದ್ದು, ತೃಪ್ತಿ ತಂದಿದೆ‘ ಎಂದು ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ’ಪ್ರಜಾವಾಣಿ‘ಗೆ ತಿಳಿಸಿದರು.

’ದೇಹದಲ್ಲಿ ಶೇ 30ರಷ್ಟು ಪ್ರತಿಕಾಯಗಳು ಸೃಷ್ಟಿಯಾದರೂ ಅದನ್ನು ನಾವು ಉತ್ತಮ ರೋಗನಿರೋಧಕ ಪ್ರತಿಕ್ರಿಯೆ ಎಂದು ಪರಿಗಣಿಸಬಹುದು. ನಮ್ಮ ಆರೋಗ್ಯ ಕಾರ್ಯಕರ್ತರ ಪೈಕಿ ಶೇ 50 ಮಂದಿಯಲ್ಲಿ ಶೇ 30ರಿಂದ ಶೇ 60ರಷ್ಟು ಪ್ರತಿಕಾಯಗಳು ಸೃಷ್ಟಿಯಾಗಿವೆ‘ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು