ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಕಲಿ ಚಿನ್ನ ಮಾರಿ ₹ 13 ಲಕ್ಷ ವಂಚನೆ

Last Updated 10 ಮಾರ್ಚ್ 2023, 20:25 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಚಿನ್ನವನ್ನು ಅಸಲಿ ಎಂದು ಬಿಂಬಿಸಿ ₹ 13 ಲಕ್ಷ ಪಡೆದು ವಂಚಿಸಿದ್ದ ಆರೋಪಿ ಗುಂಜಿ ಶಿವಶಂಕರ್ ರಾವ್ ಅಲಿಯಾಸ್ ಗೋಲ್ಡ್ ಶಿವ (39) ಎಂಬುವವರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶ ಪಲ್ನಾಡು ಜಿಲ್ಲೆಯ ಶಿವಶಂಕರ್ ರಾವ್, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಕೆಂಗೇರಿ ಬಳಿಯ ಎಚ್‌. ಗೊಲ್ಲಹಳ್ಳಿಯಲ್ಲಿ ವಾಸವಿದ್ದ. ಗಿರಿನಗರದ ನ್ಯೂ ಮಂಗಳೂರು ಸ್ಟೋರ್ ಮಳಿಗೆ ಮಾಲೀಕ ನಿಖಿತ್ ನೀಡಿದ್ದ ದೂರು ಆಧರಿಸಿ ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಫೆ. 5ರಂದು ಮಳಿಗೆಗೆ ಹೋಗಿದ್ದ ಆರೋಪಿ, ‘ಚಿನ್ನದ ಗಟ್ಟಿ ಮಾರಬೇಕು. ಖರೀದಿ ಬೆಲೆ ತಿಳಿಸಿ’ ಎಂದು ದೂರುದಾರರಿಗೆ ಹೇಳಿದ್ದ. ಗಟ್ಟಿ ಪರೀಕ್ಷಿಸಿದಾಗ ಅಸಲಿ ಚಿನ್ನವೆಂಬುದು ಗೊತ್ತಾಗಿತ್ತು. ₹ 13 ಲಕ್ಷ ನೀಡುವುದಾಗಿ ದೂರುದಾರ ಹೇಳಿದ್ದರು. ಗಟ್ಟಿ ವಾಪಸು ಪಡೆದುಕೊಂಡು ಹೋಗಿದ್ದ ಆರೋಪಿ, ಫೆ. 21ರಂದು ಪುನಃ ಮಳಿಗೆಗೆ ಬಂದಿದ್ದ. ಗಟ್ಟಿ ಕೊಟ್ಟು ₹ 13 ಲಕ್ಷ ತೆಗೆದುಕೊಂಡು ಹೋಗಿದ್ದ’ ಎಂದು ತಿಳಿಸಿದರು.

‘ಒಂದು ಬಾರಿ ಗಟ್ಟಿ ಪರೀಕ್ಷೆ ನಡೆಸಿದ್ದ ದೂರುದಾರ, ಅಸಲಿ ಚಿನ್ನವಿರಬಹುದೆಂದು ತಿಳಿದು ಪುನಃ ಪರೀಕ್ಷೆ ಮಾಡಿರಲಿಲ್ಲ. ಇತ್ತೀಚೆಗೆ ಗ್ರಾಹಕರೊಬ್ಬರಿಗೆ ಗಟ್ಟಿ ಮಾರುವ ವೇಳೆ, ನಕಲಿ ಚಿನ್ನವೆಂಬುದು ಗೊತ್ತಾಗಿತ್ತು. ಮಾರ್ಚ್ 8ರಂದು ಠಾಣೆಗೆ ದೂರು ನೀಡಿದ್ದರು’ ಎಂದು ಹೇಳಿದರು.

‘ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಹಾಗೂ ತಾಂತ್ರಿಕ ಪುರಾವೆ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ₹ 8 ಲಕ್ಷ ನಗದು, ದ್ವಿಚಕ್ರ ವಾಹನ, ಸುತ್ತಿಗೆ ಹಾಗೂ ಮಚ್ಚು ಜಪ್ತಿ ಮಾಡಲಾಗಿದೆ. ಆರಂಭದಲ್ಲಿ ಅಸಲಿ ಚಿನ್ನ ತೋರಿಸಿ, ಎರಡನೇ ಬಾರಿ ನಕಲಿ ಚಿನ್ನ ಮಾರಿ ವಂಚಿಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.

‘ಮೇಲ್ಭಾಗದಲ್ಲಿ ಅಸಲಿ ಚಿನ್ನ ಹಾಗೂ ಒಳ ಭಾಗದಲ್ಲಿ ನಕಲಿ ಚಿನ್ನವಿಟ್ಟು ಆರೋಪಿಯೇ ಗಟ್ಟಿ ಸಿದ್ಧಪಡಿಸಿದ್ದ. ಇದೇ ರೀತಿಯಲ್ಲಿ ಹಲವರಿಗೆ ವಂಚಿಸಿರುವ ಮಾಹಿತಿ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT