ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.5 ಲಕ್ಷ ಜನಸಂಖ್ಯೆ; ಬರೀ 2 ಸಾವಿರ ಅರ್ಜಿ!

15 ಹಳ್ಳಿಗಳಿಗೆ ತಲುಪಿದೆ ಕಾವೇರಿ ನೀರು ಪೂರೈಕೆ ಪೈಪ್‌ಲೈನ್‌
Last Updated 30 ಜುಲೈ 2018, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ತೆಕ್ಕೆಯಲ್ಲಿರುವ 15 ಹಳ್ಳಿಗಳಿಗೆ ಜಲಮಂಡಳಿ ಈಗಾಗಲೇ ಕಾವೇರಿ ನೀರಿನ ಪೂರೈಕೆ ವ್ಯವಸ್ಥೆ ಮಾಡಿದೆ. ಆದರೆ, ಈ ಹಳ್ಳಿಗಳಲ್ಲಿ ಒಟ್ಟಾರೆ 1.5 ಲಕ್ಷ ಜನ ವಾಸವಾಗಿದ್ದು, ನೀರಿನ ಸಂಪರ್ಕಕ್ಕೆ ಬಂದಿರುವುದು ಬರೀ ಎರಡು ಸಾವಿರ ಅರ್ಜಿ!

110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನುಕೈಗೆತ್ತಿಕೊಂಡಿರುವ ಜಲಮಂಡಳಿ, ಮೊದಲ ಹಂತದ ಕಾಮಗಾರಿ ಮುಗಿಸುವ ಹಂತದಲ್ಲಿದೆ.

ಹೇರೋಹಳ್ಳಿ, ವಲ್ಲಭನಗರ, ಸೊನ್ನೇನಹಳ್ಳಿ, ಹೊರಮಾವು, ಸಿದ್ಧಾಪುರ, ದಾಸರಹಳ್ಳಿ, ಚಳ್ಳಕೆರೆ, ಕೂಡ್ಲು, ನಾಗನಾಥಪುರ, ಪರಪ್ಪನ ಅಗ್ರಹಾರ, ಗಣಕಲ್ಲು, ಉತ್ತರಹಳ್ಳಿ, ತುಂಬರಹಳ್ಳಿ, ಬೇಗೂರು, ಹರಳೂರು ಪ್ರದೇಶಗಳಿಗೆ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ನೀರಿನ ಸಂಪರ್ಕ ಪಡೆಯಲು ಅಧಿಸೂಚನೆ ಹೊರಡಿಸಿದರೂ ಉತ್ಸಾಹದಾಯಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘25 ಸಾವಿರ ಜನರಾದರೂ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ಠೇವಣಿ ಕಟ್ಟಿದರೆ ಬೇಗ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬಹುದು. ನೀರು ಸರಬರಾಜು ಮಾಡಲು ಪೈಪ್‌ಲೈನ್‌ ವ್ಯವಸ್ಥೆ ಸಿದ್ಧಗೊಂಡಿದೆ. ದುಡ್ಡು ಕಟ್ಟಿ ಅನುಕೂಲ ಪಡೆದುಕೊಳ್ಳಿ ಎಂದು ಮನೆ ಮನೆಗೆ ಹೋಗಿ ಹೇಳಲಾಗಿದೆ. ಕೆಲವು ಕಡೆ ಭಿತ್ತಿಪತ್ರಗಳನ್ನೂ ಅಂಟಿಸಿದ್ದೇವೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಹೇಳಿದರು.

ನೀರಿನ ತತ್ವಾರ: ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ವಿಸ್ತೀರ್ಣ 226 ಚದರ ಕಿ.ಮೀ ಆಗಿತ್ತು. 2007ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರೂಪುಗೊಂಡಿದೆ. ಏಳು ನಗರಸಭೆಗಳು, ಒಂದು ಪುರಸಭೆ ಹಾಗೂ 110 ಗ್ರಾಮಗಳು ಸೇರ್ಪಡೆಯಾಗಿ ಬಿಬಿಎಂಪಿ ವಿಸ್ತೀರ್ಣ 800 ಚದರ ಕಿ.ಮೀ.ಗೆ ಹೆಚ್ಚಿದೆ. ಕಾವೇರಿ ನಾಲ್ಕನೇ ಹಂತ ಹಾಗೂ ಎರಡನೇ ಘಟ್ಟದ ಯೋಜನೆಯ ಮೂಲಕ ಆರು ನಗರಸಭೆಗಳು ಹಾಗೂ ಒಂದು ಪುರಸಭೆಗೆ 50 ಕೋಟಿ ಲೀಟರ್‌ ನೀರು ಪೂರೈಕೆ ಮಾಡಲಾಗುತ್ತಿದೆ.

110 ಹಳ್ಳಿಗಳಿಗೆ ಕೊಳವೆಬಾವಿಗಳು ನೀರಿನ ಮೂಲ­ಗಳಾಗಿದ್ದವು. ಈ ಭಾಗಗಳಲ್ಲಿ ಈಚಿನ ವರ್ಷಗಳಲ್ಲಿ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಇಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಅಲ್ಲದೆ ಕೊಳವೆಬಾವಿಗಳ ನೀರು ಕಲುಷಿತಗೊಂಡಿದೆ ಎಂದು ಗಣಿ ಹಾಗೂ ಭೂವಿಜ್ಞಾನ ಇಲಾಖೆ ಎರಡು ವರ್ಷಗಳ ಹಿಂದೆ ವರದಿ ಸಲ್ಲಿಸಿತ್ತು. ಕಾವೇರಿ ನದಿಯಿಂದ ಕುಡಿಯುವ ನೀರು ಒದಗಿಸಬೇಕು ಎಂದು ಸ್ಥಳೀಯರು
ಆಗ್ರಹಿಸಿದ್ದರು.

ಈ ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ರಾಜ್ಯ ಸರ್ಕಾರ 2010ರ ಡಿಸೆಂಬರ್‌ನಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. ಜಲಮೂಲದ ಬಗ್ಗೆ ಗೊಂದಲ ಉಂಟಾಗಿತ್ತು. ಲಿಂಗನಮಕ್ಕಿ, ಮೇಕೆದಾಟು ಸೇರಿದಂತೆ ಬೇರೆ ಬೇರೆ ಮೂಲಗಳಿಂದ ನೀರು ಪೂರೈಕೆ ಮಾಡಲು ಪ್ರಸ್ತಾವಸಿದ್ಧಪಡಿಸಲಾಗಿತ್ತು.

ಈ ಯೋಜನೆಗೆ ಮಂಜೂರಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ 2011­ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ನಿಶ್ಚಿತ ಜಲಮೂಲ ಗುರುತಿಸಿ ಮತ್ತೆ ಪ್ರಸ್ತಾವ ಸಲ್ಲಿಸಿ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಹೀಗಾಗಿ ಸ್ವಲ್ಪ ಕಾಲ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಕಾವೇರಿ ನದಿಯಿಂದ ನಗರಕ್ಕೆ ಹೆಚ್ಚುವರಿಯಾಗಿ 10 ಟಿಎಂಸಿ ನೀರು ಒದಗಿಸಲು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ನಂತರ ಯೋಜನೆತ್ವರಿತಗತಿಯಲ್ಲಿ ಸಾಗಿದ್ದು, ಈಗ ಮೊದಲ ಹಂತ ಮುಕ್ತಾಯದ ಹಂತದಲ್ಲಿದೆ.

***

ಬಿಬಿಎಂಪಿಯಿಂದ ಉಚಿತ ನೀರು

‘ಬೋರ್‌ವೆಲ್‌ಗಳ ಮೂಲಕ ಬಿಬಿಎಂಪಿಯವರು ಉಚಿತವಾಗಿ ನೀರು ಕೊಡುತ್ತಿದ್ದಾರೆ. ಮನೆ ಮನೆಗೆ ಹೋಗಿ ಕೇಳಿಕೊಂಡರೂ ಕಾವೇರಿ ನೀರು ಪಡೆದುಕೊಳ್ಳಲು ಜನ ಒಪ್ಪುತ್ತಿಲ್ಲ. ಉಚಿತವಾಗಿ ನೀರು ಸಿಗುವಾಗ ದುಡ್ಡು ಯಾರು ಕಟ್ಟುತ್ತಾರೆ ಎನ್ನುವುದು ಅವರ ಅಭಿಪ್ರಾಯ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗಂಗಲಕ್ಷ್ಮಮ್ಮ ಹೇಳಿದರು.

‘ಶಿಕ್ಷಿತರು, ಬುದ್ಧಿವಂತರು ಮಾತ್ರ ಇದಕ್ಕೆ ಒಪ್ಪುತ್ತಾರೆ. ಅವರಿಗೆ ಗೊತ್ತು. ಇದು ಶಾಶ್ವತ ಪರಿಹಾರ ಅಲ್ಲ. ಬೇಸಿಗೆಯಲ್ಲಿ ಈ ನೀರಿನ ಅವಶ್ಯಕತೆ ಇದೆ. ಆದರೆ ಅದನ್ನು ಜನ ಅರ್ಥಮಾಡಿಕೊಳ್ಳುತ್ತಿಲ್ಲ’ ಎಂದು ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದರು.

***

ಪ್ರಾಯೋಗಿಕವಾಗಿ ನೀರು

ಉತ್ತರಹಳ್ಳಿಯ 70 ಮನೆಗಳು ಸೇರಿದಂತೆ 7 ಹಳ್ಳಿಗಳ ಒಟ್ಟು 688 ಮನೆಗಳಿಗೆ ಈಗಾಗಲೇ ನೀರು ಬಿಡಲಾಗುತ್ತಿದೆ. ಅವರು ದುಡ್ಡು ಕೊಟ್ಟು ಸಂಪರ್ಕ ಪಡೆದುಕೊಂಡಿದ್ದಾರೆ.

***

ಎಷ್ಟು ಹಣ ಕಟ್ಟಬೇಕು?

ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳಲು 1,200 ಚದರ ಅಡಿ ಮನೆಗೆ ಕನಿಷ್ಠ ₹ 8,350 ಕಟ್ಟಬೇಕು. ಹೆಚ್ಚು ಮಹಡಿಗಳು ಇದ್ದರೆ ಹಣ ಹೆಚ್ಚು ಕಟ್ಟಬೇಕು. 600 ಚದರ ಅಡಿ ಮನೆಯಾಗಿದ್ದರೆ ಸರ್ಕಾರದ ನಿಯಮದ ಪ್ರಕಾರ ಉಚಿತವಾಗಿ ಸಂಪರ್ಕ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT