ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಗರದಲ್ಲಿ 15 ‘ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’

ತ್ಯಾಜ್ಯ ವಿಲೇವಾರಿಯಲ್ಲಿ ಸ್ಪಷ್ಟ ಲೆಕ್ಕಾಚಾರ; ಸ್ಟೇಷನ್‌ ಸ್ಥಾಪನೆಗೆ ಸಚಿವರು, ಶಾಸಕರ ಒಲವು
Published 14 ಅಕ್ಟೋಬರ್ 2023, 20:24 IST
Last Updated 14 ಅಕ್ಟೋಬರ್ 2023, 20:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ತ್ಯಾಜ್ಯ ವಿಂಗಡಣೆ ಹಾಗೂ ಸಾಗಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ‘ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’ಗಳನ್ನು (ಎಸ್‌ಟಿಎಸ್‌) 15 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಥಾಪಿಸಲು ಬಿಬಿಎಂಪಿ ಮುಂದಾಗಿದೆ.

ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೂರು ವಿಶೇಷ ತನಿಖಾ ತಂಡಗಳು (ಎಸ್‌ಐಟಿ) ತನಿಖೆ ನಡೆಸುತ್ತಿವೆ. ಈ ತನಿಖೆಗಳ ಪರಿಶೀಲನೆ ಮುಗಿದ ಮೇಲೆ, ಹೊಸ ಎಸ್‌ಟಿಎಸ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಬಿಬಿಎಂಪಿ ರೂಪಿಸಲಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿಯು ನಗರದ ಮೂರು ಪ್ರದೇಶದಲ್ಲಿ ನಿತ್ಯವೂ ತಲಾ 150 ಮೆಟ್ರಿಕ್‌ ಟನ್‌ ತ್ಯಾಜ್ಯ ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ಸಂಸ್ಕರಣಾ
ಘಟಕಗಳಿಗೆ ಸಾಗಣೆ ಮಾಡುವ ಎಸ್‌ಟಿಎಸ್‌ಗಳನ್ನು ಸ್ಥಾಪಿಸುತ್ತಿದೆ. ಕೋರಮಂಗಲದ ಎಸ್‌ಟಿಎಸ್‌  ನಿರ್ಮಾಣ ಪೂರ್ಣಗೊಂಡಿದ್ದು, ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದ ಕಾರ್ಯನಿರ್ವಹಣೆ  ಆರಂಭಿಸಿಲ್ಲ.

ಕೋರಮಂಗಲದಲ್ಲಿ ನಿರ್ಮಾಣವಾಗಿರುವ ‘ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’ ಕಾರ್ಯಾರಂಭಿಸಿದರೆ ಏಳು ವಾರ್ಡ್‌ಗಳ ತ್ಯಾಜ್ಯ ಆಟೊಗಳ ಮೂಲಕ ನೇರವಾಗಿ ಇಲ್ಲಿಗೆ ಬರಲಿದೆ. ಸಿ.ಸಿ ಟಿ.ವಿ ಕ್ಯಾಮೆರಾ ನಿಗಾದಲ್ಲಿ ಆಟೊದ ಬರುವಿಕೆಯಿಂದ ಹಿಡಿದು, ಅದರ ರೂಟ್‌ ನಂಬರ್‌, ಸಂಖ್ಯಾಫಲಕ, ತ್ಯಾಜ್ಯದ ತೂಕ ಎಲ್ಲವೂ ವೆಬ್‌ಸೈಟ್‌ನಲ್ಲಿ ದಾಖಲಾಗಲಿದೆ. ಆಟೊದಿಂದ ನೇರವಾಗಿ ‘ಇಂಧನ ಸಾಗಿಸುವ ಕಂಟೈನರ್‌’ಗಳ ಮಾದರಿಯಲ್ಲಿರುವ ‘ಕ್ಯಾಪ್ಸೂಲ್‌’ಗಳಿಗೆ ತ್ಯಾಜ್ಯ ರವಾನೆಯಾಗುತ್ತದೆ. ದ್ರವ–ತ್ಯಾಜ್ಯವನ್ನು ಹೊರಹಾಕಿ, ಕಂಪ್ರೆಸ್‌ ಮಾಡಿ ತುಂಬಲಾಗುತ್ತದೆ. ‘ಕ್ಯಾಪ್ಸೂಲ್’ಗಳ ತಳಭಾಗದಲ್ಲೂ ದ್ರವ–ತ್ಯಾಜ್ಯ ಹೆಚ್ಚಿನ ಸಂಗ್ರಹಕ್ಕೆ ಅವಕಾಶವಿದೆ. ಇದನ್ನು ಜಿಪಿಎಸ್‌ ನಿಯಂತ್ರಣದಲ್ಲಿರುವ ಟ್ರಕ್‌ಗಳ ಮೂಲಕ ಸಂಸ್ಕರಣೆ ಘಟಕಗಳಿಗೆ ರವಾನಿಸಲಾಗುತ್ತದೆ.

ಪ್ರತಿ ವಾರ್ಡ್‌ನಲ್ಲಿ ಈಗ 2 ಕಾಂಪ್ಯಾಕ್ಟರ್‌ಗಳು, ಹತ್ತಾರು ಆಟೊಗಳ ಮೂಲಕ ತ್ಯಾಜ್ಯ ಸಂಗ್ರಹ ನಡೆಯುತ್ತಿದೆ. ‘ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’ ಕಾರ್ಯನಿರ್ವಹಿಸಿದರೆ, ಸುಮಾರು 16 ಟನ್‌  ತ್ಯಾಜ್ಯ ಒಂದೇ ‘ಕ್ಯಾಪ್ಸೂಲ್‌’ನಲ್ಲಿ ರವಾನೆಯಾಗುತ್ತದೆ. ಇದು ಯಾವುದೇ ರೀತಿಯ ದ್ರವ–ತ್ಯಾಜ್ಯ, ವಾಸನೆಯನ್ನೂ ಹೊರಹಾಕುವುದಿಲ್ಲ. ಅಲ್ಲದೆ, ಆಟೊದಿಂದ ತ್ಯಾಜ್ಯವನ್ನು ‘ಕ್ಯಾಪ್ಸೂಲ್’ ಒಳಗೆ ಸೇರಿಸುವ ಅವಧಿಯಲ್ಲೂ ವಾಸನೆ ಸ್ಟೇಷನ್‌ನಿಂದ ಹೊರಹೋಗದಂತೆ ಜೈವಿಕ ದ್ರವವನ್ನು ಸಿಂಪಡಿಸಲಾಗುತ್ತದೆ. ಒಣ ತ್ಯಾಜ್ಯ ಹಾಗೂ ಮಿಶ್ರ ತ್ಯಾಜ್ಯದ ವಿಂಗಡಣೆ, ಸಾಗಣೆಗೂ ಎಸ್‌ಟಿಎಸ್‌ನಲ್ಲಿ ಅವಕಾಶವಿದೆ.

ಒಂದು ಬಾರಿ ಆಟೊದಿಂದ ಕಸ ಎಸ್‌ಟಿಎಸ್‌ಗೆ ಬಂದರೆ ಅದನ್ನು ಸಂಸ್ಕರಣೆ ಘಟಕಕ್ಕೆ ವಿಲೇವಾರಿ ಮಾಡುವವರೆಗಿನ ಎಲ್ಲ ಜವಾಬ್ದಾರಿ ಗುತ್ತಿಗೆದಾರರದ್ದೇ ಆಗಿದೆ. ಅಲ್ಲದೆ, ಎಸ್‌ಟಿಎಸ್‌ನಲ್ಲಿರುವ ಎಲ್ಲ ಉಪಕರಣಗಳು, ಟ್ರಕ್‌ಗಳು ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಿನಲ್ಲೇ ಇವೆ. ಎಲ್ಲವೂ ಬಿಬಿಎಂಪಿಯ ಆಸ್ತಿಯೇ ಆಗಿರುತ್ತವೆ.

‘ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹಣೆಗೆ ಸ್ಥಾಪಿಸಲಾಗಿರುವ ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌ಗಳಿಂದ  (ಎಂಟಿಎಸ್‌) ವಿಲೇವಾರಿಯ ಸಮಸ್ಯೆ ನಿವಾರಣೆಯಾಗಿಲ್ಲ. ಸಾಮಾನ್ಯ ಕಾಂಪ್ಯಾಕ್ಟರ್‌ಗಳಲ್ಲೇ ತ್ಯಾಜ್ಯ ಸಾಗಿಸುತ್ತಿದ್ದು, ಕಸ, ದ್ರವ–ತ್ಯಾಜ್ಯ ರಸ್ತೆಯಲ್ಲಿ ಸೋರುತ್ತಿದೆ. ಹೀಗಾಗಿ ‘ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’ ಅನ್ನೇ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ನಿರ್ಮಿಸಲು ಯೋಜಿಸಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

‘ಸಚಿವರಿಂದ ಬೇಡಿಕೆ’

‘ಸಚಿವರಾದ ಕೆ.ಜೆ. ಜಾರ್ಜ್‌ ಜಮೀರ್‌ ಅಹಮದ್‌ ಖಾನ್‌ ದಿನೇಶ್‌ ಗುಂಡೂರಾವ್ ಅವರು ತಮ್ಮ ಕ್ಷೇತ್ರದಲ್ಲಿ ‘ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’ ಸ್ಥಾಪಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಇದಲ್ಲದೆ ಹಲವು ಶಾಸಕರೂ ಸ್ಟೇಷನ್‌ ನಿರ್ಮಿಸಬೇಕೆಂದು ಕೇಳಿದ್ದಾರೆ. ಒಂದು ಸ್ಟೇಷನ್‌ ಸಿದ್ಧವಾಗಿದೆ. ಇನ್ನೆರಡು ನಿರ್ಮಾಣದ ಹಂತದಲ್ಲಿವೆ. ಇನ್ನೂ ಸುಮಾರು 15 ಸ್ಟೇಷನ್‌ಗಳನ್ನು ಸ್ಥಾಪಿಸಬೇಕೆಂದು ಆಲೋಚಿಸಲಾಗಿದ್ದು ಈ ಬಗ್ಗೆ ಸ್ಪಷ್ಟ ಯೋಜನೆ ಶೀಘ್ರವೇ ತಯಾರಾಗಲಿದೆ’ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ಕುಮಾರ್‌ ತಿಳಿಸಿದರು.

ಕಸದಿಂದ ಗೊಬ್ಬರಕ್ಕೆ ಹೊಸ ತಂತ್ರಜ್ಞಾನ

ರುದ್ರಾಕ್ಷ ವೇಸ್ಟ್‌ ಯುಟಿಲಿಟಿ ಸಂಸ್ಥೆ ‍ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ‘ವಾಸನೆ ರಹಿತ ತಂತ್ರಜ್ಞಾನವನ್ನು’ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಭೆಯ ಮುಂದೆ ಪ್ರಸ್ತುತ ಪಡಿಸಿದೆ. ಈ ಸಂಸ್ಥೆಗೆ ಬಿಬಿಎಂಪಿಯ ತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ಗೊಬ್ಬರ ತಯಾರಿಸಲು ಒಂದು ವರ್ಷ ಅವಕಾಶ ನೀಡಬೇಕು ಎಂದು ಮಂಡಳಿ ಸಲಹೆ ನೀಡಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅದರ ಆದೇಶದಂತೆ  ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ಕುಮಾರ್‌ ತಿಳಿಸಿದರು. ‘ಏರೋಬಿಕ್‌ ಸ್ಪಾಂಜ್‌ ಬೆಡ್‌ ಆರ್ಗ್ಯಾನಿಕ್‌ ಮೆಥಡ್‌’ನಲ್ಲಿ ಸ್ಪಾಂಜ್‌ ಬೆಡ್‌ ಮೇಲೆ ಹಸಿ ಕಸವನ್ನು ಸುಮಾರು 2 ಮೀಟರ್‌ನಷ್ಟು ಸುರಿಯಲಾಗುತ್ತದೆ. ನಂತರ ‘ಸುರಭಿ’ ಮಿಶ್ರಣ ಹಾಕಿ ವಾಸನೆಯನ್ನು ನಿವಾರಿಸಲಾಗುತ್ತದೆ. ಕಸದ ಮೇಲೆ ‘ಆಮ್‌ಲಿಕ’ ನೈಸರ್ಗಿಕ ದ್ರಾವಣ ಹಾಗೂ ‘ಶೀಲೀಂಧ್ರ’ ದ್ರಾವಣ ಸಿಂಪಡಣೆಯಿಂದ ಸೊಳ್ಳೆ ನೊಣ ದ್ರವ–ತ್ಯಾಜ್ಯದ ಸಮಸ್ಯೆ ಇರುವುದಿಲ್ಲ. 90 ದಿನದಲ್ಲಿ ಹಸಿ ತ್ಯಾಜ್ಯ ಗೊಬ್ಬರವಾಗುತ್ತದೆ’ ಎಂದು ರುದ್ರಾಕ್ಷ ಸಂಸ್ಥೆಯ ಡಾ. ಸಿ. ಸೀನಪ್ಪ ಡಾ. ಸುನೀತಾ  ಅವರು ಮಾಲಿನ್ಯ ಮಂಡಳಿಯ ಸಭೆಯಲ್ಲಿ ಹೊಸ ತಂತ್ರಜ್ಞಾನದ ವಿವರವನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT