ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ಅಂಗವಿಕಲ ಸ್ಥಳದಲ್ಲೇ ಸಾವು: ಚಾಲಕ ವಶಕ್ಕೆ

ಪ್ರತ್ಯೇಕ ಅಪಘಾತ: ಇಬ್ಬರ ಸಾವು
Published : 18 ಸೆಪ್ಟೆಂಬರ್ 2024, 16:23 IST
Last Updated : 18 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಬೆಂಗಳೂರು: ಉಪ್ಪಾರಪೇಟೆ ಹಾಗೂ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಮೆಜೆಸ್ಟಿಕ್‌ ಬಳಿಯ ಅಮರ್‌ ಜಂಕ್ಷನ್‌ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತರಿಗೆ 40ರಿಂದ 45 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಮಂಗಳವಾರ ರಾತ್ರಿ 11.30ರ ಸುಮಾರಿಗೆ ವ್ಯಕ್ತಿಯೊಬ್ಬರು ಸರ್ವೀಸ್ ರಸ್ತೆಯ ಬಳಿ ನಡೆದು ತೆರಳುತ್ತಿದ್ದರು. ಅದೇ ವೇಳೆಗೆ ವೇಗವಾಗಿ ಬಂದ ಯಶವಂತಪುರ ಡಿಪೊಗೆ ಸೇರಿದ ಬಸ್‌ ಡಿಕ್ಕಿಯಾಗಿದೆ. ತಲೆ, ದೇಹದ ಮೇಲೆ ಬಸ್ಸಿನ ಚಕ್ರಗಳು ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌

ಮೃತ ವ್ಯಕ್ತಿ ಅಂಗವಿಕಲರಾಗಿದ್ದರು. ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿದೆ. ಅವರ ಕುಟುಂಬಸ್ಥರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಬಸ್ ಚಾಲಕ ಗೋಪಾಲ್‌ನನ್ನು ಉಪ್ಪಾರಪೇಟೆ ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಸ್‌ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಉಪ್ಪಾರಪೇಟೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಯಾಣಿಕರ ಆಕ್ರೋಶ: ‘ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದರು. ಆದರೆ, ಚಾಲಕ ವೇಗವಾಗಿ ಬಸ್‌ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ. ವ್ಯಕ್ತಿಗೆ ಬಸ್‌ ಡಿಕ್ಕಿಯಾದರೂ ಬಸ್‌ ನಿಲ್ಲಿಸಲಿಲ್ಲ. ಪ್ರಯಾಣಿಕರು ಕಿರುಚಾಡಿದ ಮೇಲೆ ಬಸ್ ನಿಲುಗಡೆ ಮಾಡಲಾಯಿತು’ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದರು.

ದ್ವಿಚಕ್ರ ವಾಹನ ಸವಾರ ಸಾವು: ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಉದಯ ನಗರದಲ್ಲಿ ನಡೆದ ದ್ವಿಚಕ್ರ ವಾಹನ ಹಾಗೂ ವಾಟರ್ ಟ್ಯಾಂಕರ್‌ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟಿದ್ದಾರೆ.

ಉದಯನಗರದ ನಿವಾಸಿ ಶೇಖರ್‌(55) ಮೃತಪಟ್ಟವರು.

ಶೇಖರ್ ಅವರು ಗಾರೆ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಯತ್ತ ಹೊರಟಿದ್ದರು. ಐಟಿಪಿಎಲ್‌ ಮುಖ್ಯರಸ್ತೆಯ ಹೂಡಿ ಜಂಕ್ಷನ್‌ನ ಸುಜುಕಿ ಶೋರೂಂ ಬಳಿ ಅಪಘಾತ ನಡೆದಿದೆ.

‘ವೇಗವಾಗಿ ಬಂದ ವಾಟರ್ ಟ್ಯಾಂಕರ್ ವಾಹನವು ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಶೇಖರ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT