ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪೊ ಜಾಗ ಕಬಳಿಸಲು ಯತ್ನ

ನಕಲಿ ದಾಖಲೆ ಸೃಷ್ಟಿ * ಜಾಗ ಬಿಎಂಟಿಸಿಗೆ ಸೇರಿದ್ದು; ವಿಶೇಷ ಜಿಲ್ಲಾಧಿಕಾರಿ ಆದೇಶ
Last Updated 6 ಫೆಬ್ರುವರಿ 2020, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಡಿಪೊ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು, ಮೂವರು ಯತ್ನಿಸಿದ ಪ್ರಕರಣಬಯಲಿಗೆ ಬಂದಿದೆ. ಈ ಜಾಗ ಬಿಎಂಟಿಸಿಗೆ ಸೇರಿದ್ದು ಎಂದು ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ. ಜಗದೀಶ್‌ ಆದೇಶ ಹೊರಡಿಸಿದ್ದಾರೆ.

ವರ್ತೂರು ಹೋಬಳಿಯ ಕೊಡತಿ ಗ್ರಾಮದ ಸರ್ವೆ ಸಂಖ್ಯೆ 76 ಪಿ–6ರ ಎಂಟು ಎಕರೆ ಪೈಕಿ ಐದು ಎಕರೆ ಜಾಗ ತಮಗೆ ಸೇರಿದ್ದು ಎಂದು ಗ್ರಾಮದ ಕೃಷಿಕರಾದ ಪಾಪಣ್ಣ, ನರಸಪ್ಪ ಹಾಗೂ ರಾಮಯ್ಯ ಎಂಬುವರು ಹಕ್ಕು ಮಂಡಿಸಿದ್ದರು. ಇದನ್ನು ವಿಶೇಷ ಜಿಲ್ಲಾಧಿಕಾರಿ ಅಲ್ಲಗಳೆದಿದ್ದಾರೆ.

ಏನಿದು ಪ್ರಕರಣ: ಎಂಟು ಎಕರೆ ಬಂಡೆ ಕುಂಟೆ ಜಾಗವನ್ನು ಬಿಎಂಟಿಸಿಗೆ 2008ರ ಮೇ ತಿಂಗಳಲ್ಲಿ ಮಂಜೂರು ಮಾಡಲಾಗಿತ್ತು. ಈ ವೇಳೆ ಬಿಎಂಟಿಸಿ ₹2.33 ಕೋಟಿ ಪಾವತಿ ಮಾಡಿತ್ತು. ಈ ಜಾಗದಲ್ಲಿ ನಿಗಮವು ಡಿಪೊ ಹಾಗೂ ಉದ್ಯೋಗಿಗಳ ವಸತಿ ಸಮುಚ್ಚಯ ನಿರ್ಮಿಸಿತ್ತು.

‘ಹಲವು ವರ್ಷಗಳಿಂದ ಈ ಜಾಗದಲ್ಲಿ ಕೃಷಿ ಮಾಡುತ್ತಿದ್ದೆವು’ ಎಂದು ಪ್ರತಿಪಾದಿಸಿ ಗ್ರಾಮದ ಮೂವರು ಕೆಎಟಿ ಮೊರೆ ಹೋದರು. ಅವರ ಪರವಾಗಿ ಕೆಎಟಿ ಆದೇಶ ನೀಡಿತು. ಇದನ್ನು ಪ್ರಶ್ನಿಸಿ ಬಿಎಂಟಿಸಿಯು ಹೈಕೋರ್ಟ್‌ ಮೊರೆ ಹೋಯಿತು. ಪ್ರಕರಣದ ವಿಚಾರಣೆ ನಡೆಸಿಆದೇಶ ಹೊರಡಿಸುವಂತೆ ವಿಶೇಷ ಜಿಲ್ಲಾಧಿಕಾರಿಗೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಕರ್ನಾಟಕ ಭೂ ಮಂಜೂರಾತಿ ಕಾಯ್ದೆ 1959ರ ನಿಯಮ 27ರ ಅಡಿ ಅನ್ವಯ ಜಿಲ್ಲಾಧಿಕಾರಿ ಅವರು ತಮಗೆ ಜಾಗ ಮಂಜೂರು ಮಾಡಿದ್ದಾರೆ ಎಂದು ಅರ್ಜಿದಾರರು ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ, ಕರ್ನಾಟಕ ಭೂ ಮಂಜೂರಾತಿ ಕಾಯ್ದೆ 1959 ಎಂಬುದೇ ಇಲ್ಲ. ಮೈಸೂರು ಭೂ ಸುಧಾರಣಾ ಕಾಯ್ದೆ 1951ರ ಪ್ರಕಾರ ತಮಗೆ ಸಾಗುವಳಿ ಚೀಟಿ ನೀಡಬಹುದು ಎಂದು ಜಿಲ್ಲಾಧಿಕಾರಿ 1979ರಲ್ಲಿ ಆದೇಶಿಸಿದ್ದಾರೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಅಂತಹ ಕಾಯ್ದೆಯೇ ಇಲ್ಲ. ಇರುವುದು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961. ‘ಅಸ್ತಿತ್ವದಲ್ಲೇ ಇಲ್ಲದ 1951ರ ಕಾಯ್ದೆಯನ್ನು ಉಲ್ಲೇಖಿಸಿ ಕಂದಾಯ ಅಧಿಕಾರಿಗಳು ಸಾಗುವಳಿ ಚೀಟಿ ನೀಡಲು ಸಾಧ್ಯವೇ ಇಲ್ಲ. ನಕಲಿ ದಾಖಲೆ ಸೃಷ್ಟಿಸಿರುವುದು ಸಾಬೀತಾಗಿದೆ’ ಎಂದು ಆದೇಶದಲ್ಲಿ ವಿಶೇಷ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ.

‘ಈ ಜಾಗವನ್ನು ವಿಶೇಷ ಉದ್ದೇಶಕ್ಕಾಗಿ ಮೀಸಲಿರಿಸಲಾಗಿದೆ. ಈ ಜಾಗವನ್ನು ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘1966ರ ಕರ್ನಾಟಕ ಭೂ ಕಂದಾಯ ಕಾಯ್ದೆ ನಿಯಮ 21ರ ಅನ್ವಯ ಇದು ಬಿ ಖರಾಬು ಜಾಗ. ಕಾಯ್ದೆಯ ಸೆಕ್ಷನ್‌ 71ರ ಪ್ರಕಾರ, ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬಹುದು. ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡುವಂತಿಲ್ಲ’ ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT