ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ಡೆಂಗಿ ನಿಯಂತ್ರಣ, ಜಾಗೃತಿಗೆ 3 ಸಾವಿರ ತಂಡ ನಿಯೋಜನೆ

Published 8 ಜುಲೈ 2024, 23:43 IST
Last Updated 8 ಜುಲೈ 2024, 23:43 IST
ಅಕ್ಷರ ಗಾತ್ರ

ಬೆಂಗಳೂರು: ಡೆಂಗಿ ನಿಯಂತ್ರಣ, ಜಾಗೃತಿಗೆ ಮೂರು ಸಾವಿರಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದ್ದು, ನಗರದಲ್ಲಿರುವ ಎಲ್ಲ 25 ಲಕ್ಷ ಮನೆಗಳಿಗೂ ಭೇಟಿ ನೀಡಿ, ಸಮೀಕ್ಷೆ ನಡೆಸಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ವಲಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಡೆಂಗಿ ನಿಯಂತ್ರಣಕ್ಕಾಗಿ ಕಿರಿಯ ಆರೋಗ್ಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕರು (ಎಎನ್‌ಎಂ), ಲಿಂಕ್ ವರ್ಕರ್ಸ್‌ ಹಾಗೂ ಸ್ವಯಂ ಸೇವಕರನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದರು.

ನಗರದಲ್ಲಿ ಈ ವರ್ಷದ ಜನವರಿಯಿಂದ ಜುಲೈ 6ರವರೆಗೆ 3,815 ಡೆಂಗಿ ಪ್ರಕರಣಗಳು ಕಂಡುಬಂದಿದ್ದು, ಜುಲೈ 1ರಿಂದ 6ರವರೆಗೆ 776 ಪ್ರಕರಣಗಳು ದೃಢಪಟ್ಟಿವೆ. ಪ್ರತಿನಿತ್ಯ ಸರಾಸರಿ 130ರಿಂದ 140 ಪ್ರಕರಣಗಳು ಪತ್ತೆಯಾಗುತ್ತಿದ್ದು, ಹೆಚ್ಚು ಪ್ರಕರಣಗಳು ಕಂಡುಬರುವ ಪ್ರದೇಶಗಳಲ್ಲಿ ಔಷಧಿ ಸಿಂಪಡಣೆ ಹಾಗೂ ಫಾಗಿಂಗ್ ಅನ್ನು ಅಧಿಕವಾಗಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪಾಲಿಕೆ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಿವಾಸಿಗಳು ತಮ್ಮ ಮನೆಗಳಲ್ಲಿ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ತಪ್ಪದೆ ಅನುಸರಿಸಿದರೆ ಡೆಂಗಿ ನಿಯಂತ್ರಣ ಸಾಧ್ಯವಾಗುತ್ತದೆ. ಸಾರ್ವಜನಿಕರ ಸಹಕಾರ ಪ್ರಮುಖವಾದದ್ದು ಎಂದರು.

ಮಳೆ ನಿಂತು-ನಿಂತು ಬರುತ್ತಿರುವುದರಿಂದ ನೀರು ನಿಂತು ಲಾರ್ವಾ ಉತ್ಪತ್ತಿಯಾಗಿ, ಸೊಳ್ಳೆಗಳು ಹೆಚ್ಚಾಗುತ್ತಿವೆ. ಜೋರಾಗಿ ಮಳೆ ಬಂದರೆ ಸೊಳ್ಳೆಗಳ ಉತ್ಪತ್ತಿ ತಾಣಗಳು ನಾಶವಾಗಲಿವೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ರಸ್ತೆ ಗುಂಡಿ ಮುಚ್ಚಲು ತಂತ್ರಾಂಶ: ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು, ಹೊಸ ತಂತ್ರಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ನಾಗರಿಕರು ಗುಂಡಿಗಳ ಚಿತ್ರಗಳನ್ನು ಅಪ್‌ಲೋಡ್‌ ಮಾಡುವ ವ್ಯವಸ್ಥೆ ಇರಲಿದೆ. ಇದರಿಂದ ತ್ವರಿತವಾಗಿ ಗುಂಡಿಗಳನ್ನು ಮುಚ್ಚಬಹುದು ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ ಕಲ್ಕೆರೆ, ವಲಯ ಆಯುಕ್ತರಾದ ಡಾ. ಆರ್.ಎಲ್. ದೀಪಕ್, ರಮೇಶ್, ಶಿವಾನಂದ ಕಾಪಶಿ, ಆರ್‌. ಸ್ನೇಹಲ್, ವಿನೋತ್ ಪ್ರಿಯಾ, ರಮ್ಯಾ ಗೆಹ್ಲೋಟ್‌ ಉಪಸ್ಥಿತರಿದ್ದರು.

ಒಟಿಎಸ್‌ಗೆ 1533 ಸಹಾಯವಾಣಿ
ಒಂದು ಬಾರಿ ತೀರುವಳಿ (ಒಟಿಎಸ್‌) ಯೋಜನೆಯಡಿ ಆಸ್ತಿ ತೆರಿಗೆ ಎಷ್ಟು ಪಾವತಿಸಬೇಕಿದೆ ಎಲ್ಲಿ ಪಾವತಿಸಬೇಕು ಎಂಬ ಬಗ್ಗೆ ಗೊಂದಲಗಳಿದ್ದರೆ ಸಹಾಯವಾಣಿ 1533ಗೆ ಕರೆ ಮಾಡಿ  ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು. ಒಟಿಎಸ್‌ ಯೋಜನೆ ಜುಲೈ 31ಕ್ಕೆ ಮುಗಿಯಲಿದೆ. ಈ ಅವಧಿಯ ನಂತರ ಬಡ್ಡಿ ದಂಡವನ್ನು ಬಾಕಿ ಉಳಿಸಿಕೊಂಡ ದಿನದಿಂದ ಭರಿಸಬೇಕಾಗುತ್ತದೆ. ಕೆಲವರಿಗೆ ಈ ಮೊತ್ತ ಎರಡು ಮೂರು ಪಟ್ಟೂ ಹೆಚ್ಚಾಗಬಹುದು ಎಂದರು. ಒಟಿಎಸ್‌ ಯೋಜನೆಯಡಿ ಸುಮಾರು 4 ಲಕ್ಷ ಸುಸ್ತಿದಾರರಿದ್ದು ಇದರಲ್ಲಿ 80 ಸಾವಿರ ಸುಸ್ತಿದಾರರು ಆಸ್ತಿ ತೆರಿಗೆ ಪಾವತಿಸಿದ್ದಾರೆ. 3.20 ಲಕ್ಷ ಸುಸ್ತಿದಾರರಿಗೆ ಜುಲೈ 31ರವರೆಗೆ ಮಾತ್ರ ಅವಕಾಶವಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT