ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಗೆ ₹300 ಕೋಟಿ ಅನುದಾನ ಕಡಿತ

ಮೂಲಸೌಕರ್ಯ ಯೋಜನೆಯ ಅಂತಿಮ ಕಂತು ₹675 ಕೋಟಿ ಬಿಡುಗಡೆ
Published 12 ಮಾರ್ಚ್ 2024, 0:52 IST
Last Updated 12 ಮಾರ್ಚ್ 2024, 0:52 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ 2023–24ನೇ ಸಾಲಿನ ಆಯವ್ಯಯದಲ್ಲಿ ‘ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆ’ಯಡಿ ಬಿಬಿಎಂಪಿಗೆ ಹಂಚಿಕೆ ಮಾಡಲಾಗಿದ್ದ ₹3 ಸಾವಿರ ಕೋಟಿ ಅನುದಾನದಲ್ಲಿ ₹300 ಕೋಟಿ ಕಡಿತವಾಗಿದೆ.

ಬಿಬಿಎಂಪಿಗಾಗಿ ಪ್ರಕಟಿಸಲಾಗಿದ್ದ ₹3 ಸಾವಿರ ಕೋಟಿ ಅನುದಾನದಲ್ಲಿಯೇ ₹300 ಕೋಟಿಯನ್ನು ಚಂದಾಪುರ ಕೆರೆ ಪುನಶ್ಚೇತನಕ್ಕೆ ನೀಡಲಾಗಿದೆ. ಮೂಲಸೌಕರ್ಯಕ್ಕೆ ಇನ್ನಷ್ಟು ಹೆಚ್ಚು ಅನುದಾನವನ್ನು ಬಯಸಿದ್ದ ಪಾಲಿಕೆಗೆ, ಬರುವುದರಲ್ಲೂ ಕಡಿತವಾಗಿರುವುದು ಇನ್ನಷ್ಟು ಹೊರೆಯಾಗಿದೆ.

₹3 ಸಾವಿರ ಕೋಟಿ ಅನುದಾನದಲ್ಲಿ ಮೂರು ತ್ರೈಮಾಸಿಕದ ಕಂತುಗಳಲ್ಲಿ ತಲಾ ₹675 ಕೋಟಿಯಂತೆ ಒಟ್ಟು ₹2,025 ಕೋಟಿಯನ್ನು ಸರ್ಕಾರ 2024ರ ಜನವರಿ 23ರವರೆಗೆ ಬಿಡುಗಡೆ ಮಾಡಿತ್ತು. ಅಂತಿಮ ಕಂತಿನಲ್ಲಿ ಇನ್ನುಳಿದ ₹975 ಕೋಟಿ ಅನುದಾನ ಲಭ್ಯವಾಗುವ ನಿರೀಕ್ಷೆ ಇತ್ತು.

‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀರ್ಪಿನಂತೆ ಚಂದಾಪುರ ಕೆರೆ ಪುನಶ್ಚೇತನಕ್ಕಾಗಿ ₹300 ಕೋಟಿಯನ್ನು ‘ಸದಸ್ಯ ಕಾರ್ಯದರ್ಶಿ– ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ’ ಅವರ ಹೆಸರಿನಲ್ಲಿ ಪ್ರತ್ಯೇಕ ಖಾತೆ ತೆರೆದು ಠೇವಣಿ ಇಡಲಾಗಿದೆ. ಈ ಮೊತ್ತವನ್ನು  ಬಿಬಿಎಂಪಿಯ ‘ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆ’ ಅನುದಾನದಲ್ಲಿಯೇ ಬಿಡುಗಡೆ ಮಾಡಲಾಗಿದೆ. ಆದರೆ, ಚಂದಾಪುರ ಕೆರೆಯು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ, ಪಾಲಿಕೆ ಹಂಚಿಕೆ ಮಾಡಲಾಗಿರುವ ಅನುದಾನದಲ್ಲಿ ಯಾವುದೇ ರೀತಿಯ ಕಡಿತ ಮಾಡದೆ ಉಳಿದಿರುವ ₹975 ಕೋಟಿಯನ್ನು ಬಿಡುಗಡೆ ಮಾಡಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

‘ಇದಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್‌ ನೀರುಗಾಲುವೆ, ಬೃಹತ್‌ ರಸ್ತೆಗಳು, ಮೇಲ್ಸೇತುವೆ, ಕಾರಿಡಾರ್‌ ಮುಂತಾದ ಯೋಜನೆಗಳು ಪ್ರಗತಿಯಲ್ಲಿದ್ದು, 2024ರ ಮಾರ್ಚ್‌ವರೆಗೆ ₹3,500 ಕೋಟಿಯಷ್ಟು ಬಿಲ್‌ಗಳ ಪಾವತಿ ಬಾಕಿ ಇರುತ್ತದೆ. ಈ ಬಿಲ್‌ಗಳನ್ನು ಸಕಾಲದಲ್ಲಿ ಪಾವತಿಸದಿದ್ದಲ್ಲಿ ಕಾಮಗಾರಿಗಳ ಪ್ರಗತಿಗೆ ಕುಂಠಿತವಾಗುವ ಸಂಭವವಿದೆ. ಆದ್ದರಿಂದ ಅನುದಾನ ಕಡಿತ ಮಾಡುವುದು ಬೇಡ’ ಎಂದು ಪ್ರಸ್ತಾವದಲ್ಲಿ ವಿವರಿಸಿದ್ದಾರೆ.

ಬಿಬಿಎಂಪಿಯ ಮನವಿಯನ್ನು ಪರಿಗಣಿಸದ ಸರ್ಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ  ₹300 ಕೋಟಿ ಬಿಡುಗಡೆ ಮಾಡಿರುವುದನ್ನು ಸಮರ್ಥಿಸಿ ಕೊಂಡಿದೆ. ‘ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆ’ ಅನುದಾನದ ನಾಲ್ಕನೇ ಹಾಗೂ ಅಂತಿಮ ತ್ರೈಮಾಸಿಕ ಕಂತಿನಲ್ಲಿ ₹675 ಕೋಟಿಯನ್ನಷ್ಟೇ ಬಿಡುಗಡೆಗೊಳಿಸಿ ಮಾರ್ಚ್‌ 7ರಂದು ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT