ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3.45 ಲಕ್ಷ ವಂಚನೆ: ಠಾಣೆ ಮೆಟ್ಟಿಲೇರಿದ ನಿವೃತ್ತ ವಿಂಗ್ ಕಮಾಂಡರ್

ವಾಯುಸೇನೆಯ ನಿವೃತ್ತ ವಿಂಗ್ ಕಮಾಂಡರ್‌ವೊಬ್ಬರು ನೀಡಿರುವ ದೂರು ಆಧರಿಸಿ ಅಶೋಕನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Published 5 ಮೇ 2024, 15:00 IST
Last Updated 5 ಮೇ 2024, 15:00 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯಮಶೀಲತೆ ತರಬೇತಿ ಹೆಸರಿನಲ್ಲಿ ₹ 3.45 ಲಕ್ಷ ಪಡೆದಿದ್ದ ‘ಥಾಟ್ ಕ್ಯಾಪಿಟಲ್’ ಕಂಪನಿಯ ಸಂಸ್ಥಾಪಕ ರೋನಾಲ್ಡ್ ರಾಜ್, ಪೂರ್ಣ ತರಬೇತಿ ನೀಡದೇ ವಂಚಿಸಿದ್ದಾರೆ’ ಎಂದು ಆರೋಪಿಸಿ ವಾಯುಸೇನೆಯ ನಿವೃತ್ತ ವಿಂಗ್ ಕಮಾಂಡರ್‌ವೊಬ್ಬರು ನೀಡಿರುವ ದೂರು ಆಧರಿಸಿ ಅಶೋಕನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ದೊಮ್ಮಲೂರಿನ ನಿವೃತ್ತ ವಿಂಗ್ ಕಮಾಂಡರ್ ಅವರು ಹಲಸೂರು ಠಾಣೆಗೆ ದೂರು ನೀಡಿದ್ದರು. ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಅಶೋಕನಗರ ಠಾಣೆಗೆ ವರ್ಗಾಯಿಸಲಾಗಿದೆ. ಹೀಗಾಗಿ, ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರು 2011ರಲ್ಲಿ ನಿವೃತ್ತರಾಗಿದ್ದರು. ಸ್ವಂತ ಉದ್ಯಮ ಆರಂಭಿಸಲು ಉದ್ದೇಶಿಸಿ, ಯಾವ ಉದ್ಯಮ ಆರಂಭಿಸುವುದು ಎಂಬುದರ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ಹುಡುಕಾಡುತ್ತಿದ್ದರು. ಅಶೋಕನಗರ ಬಳಿಯ ಹೋಟೆಲ್‌ವೊಂದರಲ್ಲಿ ರೋನಾಲ್ಡ್ ರಾಜ್ ಏರ್ಪಡಿಸಿದ್ದ ‘ಉದ್ಯಮಶೀಲತೆ ತರಬೇತಿ’ ಬಗ್ಗೆ ಗೊತ್ತಾಗಿತ್ತು. ₹ 28,325 ಪಾವತಿಸಿ ಮೂರು ದಿನಗಳ ತರಬೇತಿಯಲ್ಲಿ ಭಾಗವಹಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ತರಬೇತಿಯ ಕೊನೆ ದಿನದಂದು ಮಾತನಾಡಿದ ರೋನಾಲ್ಡ್, ‘52 ವಾರಗಳಲ್ಲಿ 52 ಗಂಟೆಗಳ ವಿಶೇಷ ತರಬೇತಿ ಇದೆ. ಅಮೆರಿಕದಿಂದ ತರಬೇತಿ ಆಯೋಜಿಸಲಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಆಡಿಯೊ ಹಾಗೂ ವಿಡಿಯೊಗಳನ್ನು ಹಂಚಿಕೆ ಮಾಡಲಾಗುವುದು. ತರಬೇತಿ ಶುಲ್ಕವಾಗಿ ₹ 3.50 ಲಕ್ಷ ಪಾವತಿಸಬೇಕು’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ₹ 3.45 ಲಕ್ಷ ಪಾವತಿಸಿದ್ದರು.’

‘17 ದಿನ ಮಾತ್ರ ತರಬೇತಿ ನೀಡಿದ್ದ ಆರೋಪಿ, ನಂತರ ಆನ್‌ಲೈನ್ ಮೂಲಕ ತರಬೇತಿ ನೀಡುವುದಾಗಿ ಹೇಳಿದ್ದರು. ಆದರೆ, ಆನ್‌ಲೈನ್‌ ಮೂಲಕ ತರಬೇತಿ ಮುಂದುವರಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ‘ಅಮೆರಿಕದ ಕಂಪನಿ ಜೊತೆಗಿನ ಒಪ್ಪಂದ ರದ್ದಾಗಿದೆ. ತರಬೇತಿ ಸಾಧ್ಯವಿಲ್ಲ’ ಎಂದಿದ್ದರು. ಇದೇ ಕಾರಣಕ್ಕೆ ದೂರುದಾರ, ಹಣ ಪಡೆದರೂ ಆರೋಪಿ ಪೂರ್ಣಪ್ರಮಾಣದಲ್ಲಿ ತರಬೇತಿ ನೀಡಿಲ್ಲವೆಂದು ಆರೋಪಿಸುತ್ತಿದ್ದಾರೆ. ರೋನಾಲ್ಡ್‌ ಅವರನ್ನು ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT