ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ (ಜಿಬಿಜಿ) ಜನಾಗ್ರಹದ ತುಲಾತ್ಮಕ ವಿಶ್ಲೇಷಣೆಯಲ್ಲಿ 10ಕ್ಕೆ 3.35 ಅಂಕ ಲಭಿಸಿದೆ.
ಮಸೂದೆಯಲ್ಲಿ ಸ್ಪಂದನಾತ್ಮಕ ಮತ್ತು ಆಧುನಿಕ ಬೆಂಗಳೂರನ್ನು ನಿರ್ಮಿಸಲು ಅಗತ್ಯವಾದ ಪ್ರಗತಿಪರ ಅಂಶಗಳಿಲ್ಲ. ಬ್ರ್ಯಾಂಡ್ ಬೆಂಗಳೂರು ಸಮಿತಿ ನೀಡಿದ್ದ ಹಲವು ಅಪೇಕ್ಷಣೀಯ ಶಿಫಾರಸುಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದೂ ಹೇಳಲಾಗಿದೆ.
ಜನಾಗ್ರಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ವಿಶ್ವನಾಥನ್ ಅವರು ತುಲನಾತ್ಮಕ ವಿಶ್ಲೇಷಣೆ ವರದಿಯ ಮಾಹಿತಿಯನ್ನು ಗುರುವಾರ ನೀಡಿದರು.
‘2014ರಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿ ಪುನಾರಚನೆ ಸಮಿತಿ ರಚಿಸಿತ್ತು. ಅದಕ್ಕೆ 2024ರಲ್ಲಿ ಮರುನಾಮಕರಣ ಮಾಡಿ, ಬ್ರ್ಯಾಂಡ್ ಬೆಂಗಳೂರು ಸಮಿತಿ (ಬಿಬಿಸಿ) ಎಂದು ಮರುನಾಮಕರಣ ಮಾಡಲಾಯಿತು. ಈ ಸಮಿತಿಯು ಗ್ರೇಟರ್ ಬೆಂಗಳೂರು ಆಡಳಿತದ (ಜಿಬಿಜಿ) ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ನಗರ-ವ್ಯವಸ್ಥೆಗಳ ಚೌಕಟ್ಟಿನ ಆಧಾರದ ಮೇಲೆ ಜಿಬಿಜಿ ಮಸೂದೆಯ ಆಳವಾದ ತುಲನಾತ್ಮಕ ವಿಶ್ಲೇಷಣೆಯನ್ನು ಜನಾಗ್ರಹ ಕೈಗೊಂಡಿತ್ತು’ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ–2020 ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ (ಕೆಎಂಸಿ) ಕಾಯ್ದೆ, 1976 ಕೂಡ ಅಧ್ಯಯನದಲ್ಲಿ ಪರಿಗಣಿಸಲಾಗಿತ್ತು. ಜಿಬಿಜಿ ಮಸೂದೆಯು ನಗರ ಯೋಜನೆ ಮತ್ತು ವಿನ್ಯಾಸ, ನಗರ ಸಾಮರ್ಥ್ಯ, ಸಂಪನ್ಮೂಲ, ಅಧಿಕಾರ, ಕಾನೂನುಬದ್ಧ ರಾಜಕೀಯ ಪ್ರಾತಿನಿಧ್ಯ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕ ಭಾಗವಹಿಸುವಿಕೆ ಸೇರಿದಂತೆ ಎಲ್ಲ ವರ್ಗಗಳಲ್ಲಿ ನಿರಾಶಾದಾಯಕ ಅಂಕಗಳನ್ನು ಗಳಿಸಿದೆ. ಒಟ್ಟಾರೆಯಾಗಿ, ಜಿಬಿಜಿ ಮಸೂದೆಯು 10ರಲ್ಲಿ 3.35 ಅಂಕಗಳನ್ನು ಗಳಿಸಿದೆ ಎಂದು ಮಾಹಿತಿ ನೀಡಿದರು.
‘ಬೆಂಗಳೂರು ದೇಶದ ಆರ್ಥಿಕತೆಗೆ ಮಹತ್ವ ಕೊಡುಗೆ ನೀಡುತ್ತಿದೆ. ಅಂತರರಾಷ್ಟ್ರೀಯ ನಗರಗಳಿಗೆ ಸರಿಸಮಾನವಾಗಿ ಉತ್ತಮ ಗುಣಮಟ್ಟದ ಜೀವನಕ್ಕೆ ಇಲ್ಲಿನ ಜನರು ಅರ್ಹರಾಗಿದ್ದಾರೆ. ಜಿಬಿಜಿ ಮಸೂದೆಯು ಪ್ರಗತಿಪರ ಆಡಳಿತ ಮಾದರಿ ಪರಿಚಯಿಸುತ್ತದೆ. ಜನರ ಜೀವನದ ವಿವಿಧ ಆಯಾಮಗಳಲ್ಲಿ ಗಮನಾರ್ಹ ಸುಧಾರಣೆಗೆ ಅನುವು ಮಾಡಿಕೊಡುತ್ತದೆ ಎಂಬ ನಿರೀಕ್ಷೆಯನ್ನು ಸೀಮಿತಗೊಳಿಸಿದ್ದು, ಜನರ ನಂಬಿಕೆ ಹುಸಿಯಾಗಿಸಿದೆ’ ಎಂದು ಶ್ರೀಕಾಂತ್ ಹೇಳಿದರು.
ಜನಾಗ್ರಹದ ಸಹಭಾಗಿತ್ವ ಆಡಳಿತದ ಮುಖ್ಯಸ್ಥ ಸಂತೋಷ ನರಗುಂದ ಮಾತನಾಡಿ, ‘ಬೆಂಗಳೂರು ಪುನಾರಚನೆಯ ಪ್ರಯತ್ನವನ್ನು ಜನರು ಆಶಾಭಾವನೆಯಿಂದ ಎದುರು ನೋಡುತ್ತಿದ್ದಾರೆ. ಹೆಚ್ಚು ವೃತ್ತಿಪರ ಆಡಳಿತದ ಮೂಲಕ ನಾಗರಿಕರ ದಿನನಿತ್ಯದ ಜೀವನದಲ್ಲಿ ಗಮನಾರ್ಹ ಸುಧಾರಣೆಯನ್ನು ಮಾಡಬೇಕು ಎಂಬ ಸ್ಪಷ್ಟವಾದ ಆಶಾವಾದ ಜನರಲ್ಲಿದೆ. ಆದರೆ ವಿಧಾನಸಭೆಯಲ್ಲಿ ಮಂಡನೆಯಾಗಿರುವ ಜಿಬಿಜಿ ಮಸೂದೆ ಅತ್ಯಂತ ನಿರಾಶಾದಾಯಕವಾಗಿದೆ. ಈಗಲೂ ಅಗತ್ಯವಿರುವ ನಾಗರಿಕ ಸ್ನೇಹಿ ತಿದ್ದುಪಡಿ ಮಾಡಿಕೊಳ್ಳಲು ಈಗಲೂ ಆಸ್ಪದವಿದೆ’ ಎಂದರು.
ಜನಾಗ್ರಹದ ಪೌರ ಕಾನೂನು ಮತ್ತು ನೀತಿಯ ಮುಖ್ಯಸ್ಥರಾದ ವಿ.ಆರ್.ವಚನ ಮಾತನಾಡಿ, ‘ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆಯನ್ನು ಹೊಂದಿದ್ದರೂ, ಮೆಟ್ರೋಪಾಲಿಟನ್ ಆಡಳಿತದ ವೈಶಿಷ್ಟ್ಯವನ್ನು ಹೊಂದಿಲ್ಲ. ನಾಗರಿಕರಿಗೆ ಗುಣಮಟ್ಟದ ಜೀವನ ನೀಡಲು ಸಾಧ್ಯವಾಗಬೇಕಾದರೆ, 21ನೇ ಶತಮಾನದ ಅವಕಾಶಗಳು ಮತ್ತು ಸವಾಲುಗಳನ್ನು ಪೂರೈಸುವ ಕಾಯ್ದೆ ಇರಬೇಕು’ ಎಂದರು.
ಸರ್ಕಾರ ಕೈಬಿಟ್ಟಿರುವ ಬ್ರ್ಯಾಂಡ್ ಬೆಂಗಳೂರು ಸಮಿತಿಯಲ್ಲಿದ್ದ ಸಲಹೆಗಳು
* ಬೆಂಗಳೂರು ಮಹಾನಗರ ಪ್ರದೇಶದ ಸಮಗ್ರ ಯೋಜನೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಣೆ.
* ಮೇಯರ್–ಇನ್–ಕೌನ್ಸಿಲ್ (ಸಂಪುಟ ವ್ಯವಸ್ಥೆ)
* ದೂರು ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ಮೇಲ್ವಿಚಾರಣೆ
* ಮಹಾನಗರ ಪಾಲಿಕೆಗೆ ತನ್ನ ಸಿಬ್ಬಂದಿ ನೇಮಕಗಳಲ್ಲಿ ಅಧಿಕಾರ, ಪೌರಸೇವಾ ಕೇಡರ್ ಸ್ಥಾಪನೆ
* ಕೌನ್ಸಿಲ್‌ಗೆ ಹಣಕಾಸಿನ ಮೇಲ್ವಿಚಾರಣೆ
* ಪಾಲಿಕೆ ಬಜೆಟ್‌ಗೆ ಕೌನ್ಸಿಲ್ ಅನುಮೋದನೆ
* ವಾರ್ಡ್ ಸಮಿತಿಗಳ ಮೂಲಕ ಬಜೆಟ್‌ಗೆ ನಾಗರಿಕರು ತಮ್ಮ ಸಲಹೆಗಳನ್ನು ನೀಡುವುದು.
ಯಾವುದಕ್ಕೆ ಎಷ್ಟು ಅಂಕ? (10ಕ್ಕೆ)
ಬ್ರ್ಯಾಂಡ್ ಬೆಂಗಳೂರು ಸಮಿತಿಯ ಜಿಬಿಜಿ ಮಸೂದೆ;6.5
ಮಂಡನೆಯಾಗಿರುವ ಜಿಬಿಜಿ ಮಸೂದೆ; 3.35
ಬಿಬಿಎಂಪಿ ಕಾಯ್ದೆ;3.23
ಕೆಎಂಸಿ ಕಾಯ್ದೆ;2.04
ಯಾವ ವರ್ಗದಲ್ಲಿ ಎಷ್ಟು ಅಂಕ? (10ಕ್ಕೆ)
* ನಗರ ಯೋಜನೆ ಮತ್ತು ವಿನ್ಯಾಸ
ಮಂಡನೆಯಾಗಿರುವ ಜಿಬಿಜಿ ಮಸೂದೆ;0
ಬ್ರ್ಯಾಂಡ್ ಬೆಂಗಳೂರು ಸಮಿತಿಯ ಜಿಬಿಜಿ ಮಸೂದೆ;6.33
* ನಗರದ ಸಾಮರ್ಥ್ಯ ಮತ್ತು ಸಂಪನ್ಮೂಲಗಳು
ಮಂಡನೆಯಾಗಿರುವ ಜಿಬಿಜಿ ಮಸೂದೆ;6.5
ಬ್ರ್ಯಾಂಡ್ ಬೆಂಗಳೂರು ಸಮಿತಿಯ ಜಿಬಿಜಿ ಮಸೂದೆ;9
*ಅಧಿಕಾರ ಮತ್ತು ನ್ಯಾಯಸಮ್ಮತವಾದ ರಾಜಕೀಯ ಪ್ರಾತಿನಿಧ್ಯ
ಮಂಡನೆಯಾಗಿರುವ ಜಿಬಿಜಿ ಮಸೂದೆ;4.55
ಬ್ರ್ಯಾಂಡ್ ಬೆಂಗಳೂರು ಸಮಿತಿಯ ಜಿಬಿಜಿ ಮಸೂದೆ;6.21
*ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಭಾಗವಹಿಸುವಿಕೆ
ಮಂಡನೆಯಾಗಿರುವ ಜಿಬಿಜಿ ಮಸೂದೆ;2.36
ಬ್ರ್ಯಾಂಡ್ ಬೆಂಗಳೂರು ಸಮಿತಿಯ ಜಿಬಿಜಿ ಮಸೂದೆ;4.45
ಸುಧಾರಣೆಗೆ ಜನಾಗ್ರಹದ ಸಲಹೆಗಳು
*ಬಿಬಿಎಂಪಿಗೆ ಮೆಟ್ರೊಪಾಲಿಟನ್ ಮೇಯರ್ ಆಯ್ಕೆಯಾಗಲಿ
* ಮೇಯರ್‌ಗಳು ಮತ್ತು ಕೌನ್ಸಿಲರ್‌ಗಳು, ಅವರ ಕುಟುಂಬದ ಸಾರ್ವಜನಿಕ ಕೆಲಸ, ಒಪ್ಪಂದಗಳು ಬಹಿರಂಗವಾಗಬೇಕು
* ಮಹಿಳೆಯರು ಮತ್ತು ಮೊದಲ ಬಾರಿ ಕೌನ್ಸಿಲರ್‌ಗಳಿಗೆ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ
* ರಾಜ್ಯ ಚುನಾವಣೆ ಆಯೋಗಕ್ಕೆ ವಾರ್ಡ್‌ಗಳ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಅಧಿಕಾರ
* ಪಾರದರ್ಶಕತೆ ಸುಧಾರಿಸಲು ಕರ್ನಾಟಕ ಮಾಹಿತಿ ಹಕ್ಕು ನಿಯಮಗಳು–2009 ಮತ್ತು ಎಲ್ಲ ಕಾನೂನುಗಳ ಸಂಯೋಜನೆ
* ಎಲ್ಲ ಹಂತಗಳಲ್ಲೂ ಸಾರ್ವಜನಿಕರ ಭಾಗವಹಿಸುವಿಕೆ, ಮುಕ್ತವಾದ ತಂತ್ರಜ್ಞಾನ, ಅಪ್ಲಿಕೇಷನ್‌ಗಳ ಮೂಲಕ ಡಿಜಿಟಲ್ ಆಡಳಿತ ನೀತಿ ಜಾರಿ ಕಡ್ಡಾಯ
* ಸ್ವಯಂಪ್ರೇರಿತ ಭ್ರಷ್ಟಾಚಾರ ತನಿಖೆಗೆ ಮೇಲ್ವಿಚಾರಕರ ನೇಮಕ
* ಆಂತರಿಕ ನಿಯಂತ್ರಣ, ಪ್ರಕ್ರಿಯೆ ಪರಿಶೀಲನೆಗೆ ಆಂತರಿಕ ಲೆಕ್ಕ ಪರಿಶೋಧನೆಗಳು ಕಡ್ಡಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.