ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಔಷಧದ ಬೀಜ ಖರೀದಿ ನೆಪದಲ್ಲಿ ₹20 ಲಕ್ಷ ವಂಚನೆ!

ಸೈಬರ್ ವಂಚಕರ ಗಾಳಕ್ಕೆ ಸಿಲುಕಿದ ಸಾಫ್ಟ್‌ವೇರ್ ಉದ್ಯೋಗಿ
Last Updated 5 ಜನವರಿ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್ ಗುಣಪಡಿಸುವ ಔಷಧದ ಬೀಜಗಳನ್ನು ಖರೀದಿಸುವ ನೆಪದಲ್ಲಿ ಆನ್‌ಲೈನ್ ವಂಚಕರು ನಗರದ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರಿಂದ ತಮ್ಮ ಬ್ಯಾಂಕ್ ಖಾತೆಗೆ ₹ 20 ಲಕ್ಷ ಹಾಕಿಸಿಕೊಂಡು ವಂಚಿಸಿದ್ದಾರೆ.

ಈ ಸಂಬಂಧ ನಗರದ ಸೈಬರ್ ಕ್ರೈಂ ಠಾಣೆಗೆ ಜೆ.ಪಿ.ನಗರ 5ನೇ ಹಂತದ ನಿವಾಸಿ ಎಚ್‌.ಎಸ್.ರವಿಕುಮಾರ್ ಎಂಬುವವರು ದೂರು ಕೊಟ್ಟಿದ್ದಾರೆ.

‘2017ರ ಸೆಪ್ಟೆಂಬರ್‌ನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ನಾನು ಅಮೆರಿಕದ ‘ನೋವಾ ಫಾರ್ಮ’ ಕಂಪನಿಯ ಮುಖ್ಯಸ್ಥ ರಸೆಲ್. ಕ್ಯಾನ್ಸರ್‌ ಗುಣಪಡಿಸುವ ಔಷಧದ ಬೀಜಗಳು ಭಾರತದಲ್ಲಿ ಸಿಗುತ್ತವೆ. ನೀವು ಅವುಗಳನ್ನು ಖರೀದಿಸಿ, ಕಳುಹಿಸಿಕೊಟ್ಟರೆ ಕಮಿಷನ್ ಕೊಡುತ್ತೇವೆ’ ಎಂದು ಹೇಳಿದ್ದ. ಆರಂಭದಲ್ಲಿ ಆತನ ಮಾತನ್ನು ನಂಬದೆ, ಬೈದು ಕರೆ ಸ್ಥಗಿತಗೊಳಿಸಿದ್ದೆ. ಆ ನಂತರ ಪ್ರತಿನಿತ್ಯ ಕರೆ ಮಾಡಿ ಪೀಡಿಸಲು ಶುರು ಮಾಡಿದ್ದ’ ಎಂದು ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ವಾರಗಳ ಬಳಿಕ ‘mailto@nova-pharma.org’ ಎಂಬ ಮೇಲ್‌ನಿಂದ ನನಗೆ ಪತ್ರ ಬಂತು. ‘ನೋವಾ ಫಾರ್ಮ’ ಲೆಟರ್‌ ಹೆಡ್‌ನಲ್ಲಿದ್ದ ಆ ಪತ್ರದಲ್ಲಿ, ‘ಮಹಾರಾಷ್ಟ್ರದಲ್ಲಿ ಶುಕ್ಲಾ ಫಾರ್ಮ ಎಂಬ ಕಂಪನಿ ಇದೆ. ನಮಗೆ ಔಷಧದ ಬೀಜಗಳು ಪೂರೈಕೆಯಾಗುವುದು ಅಲ್ಲಿಂದಲೇ. ನೀವು ಏಜೆಂಟ್ ರೀತಿಯಲ್ಲಿ ಕೆಲಸ ಮಾಡಬೇಕು. ಒಂದು ಪ್ಯಾಕೆಟ್ ಬೀಜಕ್ಕೆ ನಿಮಗೆ ₹ 50 ಸಾವಿರ ಸಿಗುತ್ತದೆ’ ಎಂಬ ವಿವರವಿತ್ತು. ಹಣದ ಆಸೆಯಿಂದ ಏಜೆಂಟ್ ಕೆಲಸ ಮಾಡಲು ಒಪ್ಪಿಕೊಂಡಿದ್ದೆ.’

‘ಮಹಾರಾಷ್ಟ್ರದ ಕಂಪೆನಿಯ ಆಡಳಿತ ಮಂಡಳಿ ಮುಖ್ಯಸ್ಥರು ಎಂದು ಗಿರೀಶ್ ಹಾಗೂ ಶಿಲ್ಪಾ ಎಂಬುವರ ಮೊಬೈಲ್ ಸಂಖ್ಯೆಗಳನ್ನು ಕೊಟ್ಟ ರಸೆಲ್, ‘1 ಪ್ಯಾಕೆಟ್ ಬೀಜಕ್ಕೆ ಅವರು ₹ 2.5 ಲಕ್ಷ ನಿಗದಿ ಮಾಡಿರುತ್ತಾರೆ. ಸದ್ಯ ನೀವು ಹತ್ತು ಪ್ಯಾಕೆಟ್‌ಗಳನ್ನು ಖರೀದಿಸಿ ನಮಗೆ ಕಳುಹಿಸುವ ವ್ಯವಸ್ಥೆ ಮಾಡಿ. ಆ ಮಾಲು ತಲು‍ಪುತ್ತಿದ್ದಂತೆಯೇ ನಿಮ್ಮ ಖಾತೆಗೆ ₹ 30 ಲಕ್ಷ ಜಮೆ ಮಾಡುತ್ತೇವೆ’ ಎಂದು ಹೇಳಿದ. ಅಂತೆಯೇ ಆ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ
ವಿಚಾರಿಸಿದ್ದೆ.’

‘ಔಷಧದ ಬೀಜಗಳನ್ನು ಕೊರಿಯರ್ ಮೂಲಕ ಕಳುಹಿಸುವುದಾಗಿ ಹೇಳಿ ಕೆನರಾ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡ ಅವರಿಬ್ಬರೂ, ನಂತರ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡರು. ಇತ್ತ ರಸೆಲ್‌ ಕೂಡ ಸಂಪರ್ಕಕ್ಕೆ ಸಿಗಲಿಲ್ಲ. ಆವಾಗಲೇ ನಾನು ಮೋಸ ಹೋಗಿರುವುದು ಗೊತ್ತಾಯಿತು. ಕೂಡಲೇ ಸೈಬರ್ ಠಾಣೆಗೆ ದೂರು ನೀಡಿದೆ’ ಎಂದು ಅವರು ಹೇಳಿದರು.

ಮಹಾರಾಷ್ಟ್ರದಿಂದ ಮೇಲ್‌

‘ಐ.ಪಿ ವಿಳಾಸ ಪರಿಶೀಲಿಸಲಾಗಿದ್ದು, ಮಹಾರಾಷ್ಟ್ರದಿಂದಲೇ ಮೇಲ್‌ಗಳು ಬಂದಿರುವುದು ಗೊತ್ತಾಗಿದೆ. ಮೊಬೈಲ್ ಸಂಖ್ಯೆಗಳು ಸಹ ಅದೇ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದವು ಎಂಬುದು ಖಚಿತವಾಗಿದೆ. ಪ್ರಕರಣದ ಬಗ್ಗೆ ಅಲ್ಲಿನ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಆರೋಪಿಗಳ ಖಾತೆಗಳ ವಿವರ ನೀಡುವಂತೆ ಬ್ಯಾಂಕ್ ಅಧಿಕಾರಿಗಳನ್ನು ಕೋರಿದ್ದೇವೆ’ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT