ಭಾನುವಾರ, ಸೆಪ್ಟೆಂಬರ್ 19, 2021
26 °C
ನಗರ ಜಿಲ್ಲೆಯ ವಿವಿಧೆಡೆ ಒತ್ತುವರಿಯಾಗಿದ್ದ ಸರ್ಕಾರಿ ಜಾಗ ಮರುವಶ

55 ಕೆರೆಗಳ 135 ಎಕರೆ ಒತ್ತುವರಿ ತೆರವು: ಜಿಲ್ಲಾಡಳಿತ ಬಿರುಸಿನ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೈಕೊಂಡರಹಳ್ಳಿ ಕೆರೆಯ ಬಫರ್ ವಲಯದಲ್ಲಿ ನಿರ್ಮಿಸಿದ್ದ ಬಹುಮಹಡಿ ಕಟ್ಟಡ ನೆಲಸಮಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್‌ಜಿಟಿ) ಆದೇಶ ನೀಡಿದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಬೇರೆ ಬೇರೆ ಕೆರೆಗಳ ಜಾಗದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಗರ ಜಿಲ್ಲಾಡಳಿತ ಚುರುಕುಗೊಳಿಸಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಶನಿವಾರ ಒತ್ತುವರಿ ತೆರವಿಗೆ ಇಳಿದ ಜೆಸಿಬಿಗಳು ಘರ್ಜಿಸಿದವು. ಒತ್ತುವರಿ ಮಾಡಿದ್ದ 55 ಕೆರೆಗಳ 135 ಎಕರೆ 30 ಗುಂಟೆ ಜಾಗವನ್ನು ಅಧಿಕಾರಿಗಳು ವಶಕ್ಕೆ ಪಡೆದರು.

ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ, ಆನೇಕಲ್ ಮತ್ತು ಯಲಹಂಕ ತಾಲೂಕುಗಳ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚನೆಯಂತೆ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ. ಆನೇಕಲ್ ತಾಲೂಕಿನ ವಿವಿಧೆಡೆ ಒತ್ತುವರಿಯಾಗಿದ್ದ ಸುಮಾರು ₹15 ಕೋಟಿ ಮೌಲ್ಯದ 4 ಎಕರೆ 29 ಗುಂಟೆ ಸರ್ಕಾರಿ ಜಾಗವನ್ನು ವಶಕ್ಕೆ ಪಡೆಯಲಾಗಿದೆ.

ನಗರ ಜಿಲ್ಲೆಯಲ್ಲಿ ಒಟ್ಟು 837 ಕೆರೆಗಳಿದ್ದು, ಅವುಗಳ ಸಮಗ್ರ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಗಡಿ ಗುರುತಿಸುವ ಕಾರ್ಯವನ್ನು ಜಿಲ್ಲಾಡಳಿತ ನಡೆಸುತ್ತಿದೆ. ಅದರ ಭಾಗವಾಗಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ತಾಲ್ಲೂಕಿನಲ್ಲಿ 6 ಕೆರೆಗಳಲ್ಲಿ 29 ಎಕರೆ 19 ಗುಂಟೆ, ಪೂರ್ವ ತಾಲ್ಲೂಕಿನ 10 ಕೆರೆಗಳಲ್ಲಿ 39 ಎಕರೆ 5 ಗುಂಟೆ, ಆನೇಕಲ್ ತಾಲ್ಲೂಕಿನ 12 ಕೆರೆಗಳಲ್ಲಿ 18 ಎಕರೆ 23 ಗುಂಟೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ನಗರ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ತಾಲ್ಲೂಕಿನ 10 ಕೆರೆಗಳಲ್ಲಿ 2 ಎಕರೆ 12 ಗುಂಟೆ, ಯಲಹಂಕ ತಾಲ್ಲೂಕಿನ 20 ಕೆರೆಗಳಲ್ಲಿನ 51 ಎಕರೆ 39 ಗುಂಟೆ ಜಾಗವನ್ನು ಒತ್ತುವರಿದಾರರಿಂದ ಬಿಡಿಸಲಾಗಿದೆ ಎಂದು ವಿವರಿಸಿದ್ದಾರೆ.

ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮನೆ, ಗುಡಿಸಲು ಕಳೆದುಕೊಂಡವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವೆಡೆ ಮಾತಿನ ಚಕಮಕಿಯೂ ನಡೆಯಿತು. ಪೊಲೀಸರ ನೆರವು ಪಡೆದು ಅಧಿಕಾರಿಗಳು ಮುನ್ನಡೆಸಿದರು.

ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿ ಗೋಮಾಳ ತೆರವು

ಕೆರೆ ಮಾತ್ರವಲ್ಲದೇ ಇತರೆಡೆ ಸರ್ಕಾರಿ ಜಾಗ ಒತ್ತುವರಿಯನ್ನೂ ಜಿಲ್ಲಾಡಳಿತದಿಂದ ತೆರವುಗೊಳಿಸಲಾಯಿತು. ಎಲೆಕ್ಟ್ರಾನಿಕ್ ಸಿಟಿ ಪ್ರದೇಶ ಹುಲಿಮಂಗಲ ಮುಖ್ಯ ರಸ್ತೆಯಲ್ಲಿ 4 ಎಕರೆ 35 ಗುಂಟೆ ಸರ್ಕಾರಿ ಗೋಮಾಳದಲ್ಲಿ ನಿರ್ಮಿಸಿದ್ದ ಅಂಗಡಿ ಮತ್ತು ವಿವಿಧ ಕಟ್ಟಡಗಳನ್ನು ಅಧಿಕಾರಿಗಳು ಜೆಸಿಬಿ ಮೂಲಕ ನೆಲಸಮ ಮಾಡಿಸಿದರು. ಈ ಆಸ್ತಿಯ ಒಟ್ಟು ಮೌಲ್ಯ ₹15 ಕೋಟಿ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸರ್ಕಾರಿ ಜಾಗದಲ್ಲೇ ನಿರ್ಮಿಸಿದ್ದ ರಿಯಲ್ ಎಸ್ಟೇಟ್ ಕಚೇರಿಯನ್ನೂ ತೆರವುಗೊಳಿಸಲಾಯಿತು. ಇದಕ್ಕೆ ಕೆಲವರು ಅಡ್ಡಿಪಡಿಸಿದರೂ ಕಾರ್ಯಾಚರಣೆ ಯಶಸ್ವಿಗೊಳಿಸಲಾಯಿತು ಎಂದು ತಿಳಿಸಿದರು.

ಎಲ್ಲೆಲ್ಲಿ ಕಾರ್ಯಾಚರಣೆ

ಯಲಹಂಕ ತಾಲ್ಲೂಕಿನ ಹೆಸರುಘಟ್ಟ, ಜಾಲ, ಚೊಕ್ಕನಹಳ್ಳಿ, ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿ, ಅತ್ತಿಬೆಲೆ, ಜಿಗಣಿ, ಸರ್ಜಾಪುರ, ಹುಲಿಮಂಗಲ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿ ವ್ಯಾಪ್ತಿಯ ಕಣಿಮಿಣಕೆ, ಉತ್ತರಹಳ್ಳಿಯ ಅಗರ, ನಟ್ಟಿಗೆರೆ, ವಸಂತಪುರ, ಗಬ್ಬಾಳ, ತಾವರೆಕೆರೆ, ಬ್ಯಾಲಾಳು, ಬೇಗೂರು. ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ವ್ಯಾಪ್ತಿ, ವರ್ತೂರು ಮತ್ತು ಬಿದರಹಳ್ಳಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು