ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಮೆಮು ರೈಲು, 18 ಪ್ರಯಾಣಿಕರು!

ವಿಮಾನ ನಿಲ್ದಾಣ ರೈಲು ಪ್ರಯಾಣಕ್ಕೆ ನಿರಾಸಕ್ತಿ
Last Updated 24 ನವೆಂಬರ್ 2022, 19:34 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ ರೈಲು ನಿಲುಗಡೆ ತಾಣ ಪ್ರಯಾಣಿಕರ ಕೊರತೆ ಎದುರಿಸುತ್ತಿದೆ. ಈ ಮಾರ್ಗದಲ್ಲಿ ದಿನಕ್ಕೆ ಆರು ಮೆಮು ರೈಲುಗಳು ಸಂಚರಿಸುತ್ತಿದ್ದು, ಅಷ್ಟೂ ರೈಲುಗಳಲ್ಲಿ ದಿನಕ್ಕೆ ಸರಾಸರಿ 18 ಜನ ಪ್ರಯಾಣ ಮಾಡುತ್ತಿದ್ದಾರೆ!‌

ಸಿಟಿಜನ್ ಫಾರ್ ಸಿಟಿಜನ್(ಸಿ4ಸಿ) ಸಂಘಟನೆ ಮಾಡಿರುವ ಸರ್ವೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ವಿಮಾನ ನಿಲ್ದಾಣದ ಕಡೆಗೆ ಸರಾಸರಿ 18 ಜನ ಮತ್ತು ವಿಮಾನ ನಿಲ್ದಾಣದ ಕಡೆಯಿಂದ ಬೆಂಗಳೂರಿಗೆ 14 ಜನರಷ್ಟೇ ಪ್ರಯಾಣ ಮಾಡುತ್ತಿದ್ದಾರೆ.

ಈ ಮಾರ್ಗದಲ್ಲಿ ಎಂಟು ರೈಲುಗಳ ಸಂಚರಿಸುತ್ತಿದ್ದು, ಎರಡು ಡೆಮು ರೈಲುಗಳು ಚಿಕ್ಕಬಳ್ಳಾಪುರ ತನಕ ಹೋಗಿ ಬರುತ್ತಿವೆ. ಚಿಕ್ಕಬಳ್ಳಾಪುರದ ತನಕ ಹೋಗುವ ರೈಲುಗಳಲ್ಲಿ ಜನ ಪ್ರಯಾಣಿಸುತ್ತಿದ್ದಾರೆ. ದೇವನಹಳ್ಳಿ ತನಕ ಹೋಗಿ ಬರುವ ಮೆಮು ರೈಲುಗಳು ಪ್ರಯಾಣಿಕರ ಕೊರತೆ ಎದುರಿತ್ತಿದ್ದು, ಖಾಲಿ ತಿರುಗುತ್ತಿವೆ. ‘ಕೆಲವು ದಿನ ಒಬ್ಬರೂ ಪ್ರಯಾಣಿಕರಿಲ್ಲದೆ ರೈಲು ಸಂಚರಿಸಿದ ಉದಾಹರಣೆಯೂ ಇದೆ’ ಎನ್ನುತ್ತಾರೆ ಸಿ4ಸಿ ಸಂಸ್ಥಾಪಕ ರಾಜ್‌ಕುಮಾರ್ ದುಗಾರ್.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಬಿಐಎಎಲ್) ಜತೆ ಸಮಾಲೋಚನೆ ನಡೆಸಿ ಅವರ ಸಲಹೆಯಂತೆ 2019–20ರಲ್ಲಿ ವಿಮಾನ ನಿಲ್ದಾಣದ ಬಳಿ ನಿಲುಗಡೆ ತಾಣ ನಿರ್ಮಿಸಲಾಯಿತು. 2022ರ ಸೆಪ್ಟೆಂಬರ್ 29ರಂದು ಎಂಟು ರೈಲುಗಳ ಸಂಚಾರ ಆರಂಭಿಸಲಾಯಿತು. ಈ ನಿಲಗಡೆ ತಾಣದಲ್ಲಿ ಇಳಿಯುವ ಪ್ರಯಾಣಿಕರನ್ನು ಕರೆದೊಯ್ಯಲು ಬಸ್‌ಗಳ ವ್ಯವಸ್ಥೆಯನ್ನೂ ಬಿಐಎಎಲ್‌ ಮಾಡಿದೆ. ಆದರೂ, ಪ್ರಯಾಣಿಕರ ರೈಲುಗಳನ್ನು ಹತ್ತಲು ಹಿಂದೇಟು ಹಾಕುತ್ತಿದ್ದಾರೆ.

ರೈಲು ಇಳಿದು ಬಸ್‌ ಹತ್ತಿ ಹೋಗುವುದು ಪ್ರಯಾಣಿಕರಿಗೆ ಕಿರಿಕಿರಿ ಎನಿಸುತ್ತಿದೆ. ಆದ್ದರಿಂದಲೇ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಉದ್ಯೋಗಿಗಳೂ ರೈಲುಗಳನ್ನು ಬಳಕೆ ಮಾಡುತ್ತಿಲ್ಲ ಎಂದು ದುಗಾರ್ ಹೇಳುತ್ತಾರೆ.

ಏರ್‌ಪೋರ್ಟ್‌ಗೆ ಬೇಕು ಜೋಡಿ ಮಾರ್ಗ

ಈಗಿರುವ ರೈಲು ಮಾರ್ಗವನ್ನು ಜೋಡಿ ಮಾರ್ಗವಾಗಿ ಪರಿವರ್ತಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಆದರೆ, ಅದು ವಿಮಾನ ನಿಲ್ದಾಣದ ಟರ್ಮಿನಲ್‌ ತನಕ ನಿರ್ಮಾಣವಾದರೆ ಸೂಕ್ತ ಎಂಬುದು ರೈಲ್ವೆ ಹೋರಾಟಗಾರರ ಅಭಿಪ್ರಾಯ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ವೇಳೆ ವಿಮಾನ ನಿಲ್ದಾಣ ರೈಲು ಮಾರ್ಗವನ್ನು ಜೋಡಿ ಮಾರ್ಗವಾಗಿ ಪರಿವರ್ತಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದರು. ತರಾತುರಿಯಲ್ಲಿ ಸರ್ವೆ ನಡೆಸಿರುವ ಅಧಿಕಾರಿಗಳು, ಈಗಿರುವ ದೇವನಹಳ್ಳಿ ಮಾರ್ಗವನ್ನೇ ಜೋಡಿ ಮಾರ್ಗವಾಗಿ ಪರಿವರ್ತಿಸಲು ಮುಂದಾಗಿದ್ದಾರೆ ಎಂದು ರಾಜ್‌ಕುಮಾರ್ ಹೇಳಿದರು.

‘ಹೀಗೆ ಮಾಡುವುದರಿಂದ ಪ್ರಯಾಣಿಕರಿಗೆ ಯಾವ ಉಪಯೋಗವೂ ಆಗುವುದಿಲ್ಲ. ಈ ಕುರಿತು ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಪತ್ರವನ್ನೂ ಗುರುವಾರ ಬರೆದಿದ್ದೇನೆ’ ಎಂದರು.

‘ಯಲಹಂಕದಿಂದ ವಿಮಾನ ನಿಲ್ದಾಣಕ್ಕೆ 20 ಕಿಲೋ ಮೀಟರ್ ದೂರ ಇದೆ. ದೊಡ್ಡ ಜಾಲ ತನಕ 15 ಕಿಲೋ ಮೀಟರ್‌ನಲ್ಲಿ ಈಗಾಗಲೇ ಒಂದು ಮಾರ್ಗ ಇದೆ. ಅದನ್ನು ಜೋಡಿ ಮಾರ್ಗವಾಗಿ ಪರಿವರ್ತಿಸಬೇಕು, ಅಲ್ಲಿಂದ ವಿಮಾಣ ನಿಲ್ದಾಣಕ್ಕೆ 5 ಕಿಲೋ ಮೀಟರ್ ಮಾತ್ರ ಹೊಸ ಜೋಡಿ ಮಾರ್ಗ ನಿರ್ಮಿಸಬೇಕು ಎಂಬುದು ನಮ್ಮ ಸಲಹೆ’ ಎಂದು ಹೇಳಿದರು.

‘ಈಗ ಎಂಟು ರೈಲುಗಳಿದ್ದರೂ ಜನ ಪ್ರಯಾಣಿಸುತ್ತಿಲ್ಲ. ಈ ಮಾರ್ಗದಲ್ಲೇ ಇನ್ನೂ 800 ರೈಲುಗಾಡಿಗಳನ್ನು ಓಡಿಸಿದರೂ ವಿಮಾನ ಪ್ರಯಾಣಿಕರು ರೈಲು ಹತ್ತುವುದಿಲ್ಲ. ಸ್ವಲ್ಪ ಪ್ರಾಯೋಗಿಕವಾಗಿ ಯೋಚನೆ ಮಾಡಿ ವಿಮಾನ ನಿಲ್ದಾಣದ ಟರ್ಮಿನಲ್‌ ಬಳಿಗೇ ರೈಲುಗಳ ಹೋಗುವಂತೆ ಮಾಡಿದರೆ ಎಲ್ಲರಿಗೂ ಅನುಕೂಲ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT