ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

63 ಹೊಸ ಕೀಟ ಪ್ರಭೇದ ಕಂಡು ಹಿಡಿದ ಎನ್‌ಬಿಎಐಆರ್‌

ಒಂದೇ ವರ್ಷದಲ್ಲಿ ಐದು ಪೇಟೆಂಟ್ ಪಡೆದ ಸಂಸ್ಥೆ
Published : 30 ಸೆಪ್ಟೆಂಬರ್ 2024, 15:56 IST
Last Updated : 30 ಸೆಪ್ಟೆಂಬರ್ 2024, 15:56 IST
ಫಾಲೋ ಮಾಡಿ
Comments

ಬೆಂಗಳೂರು: ಹೆಬ್ಬಾಳದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ (ಐಸಿಎಆರ್‌)- ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಸಂಸ್ಥೆಯ (ಎನ್‌ಬಿಎಐಆರ್‌) ವಿಜ್ಞಾನಿಗಳು 2023-24ನೇ ಸಾಲಿನಲ್ಲಿ 63 ಹೊಸ ಕೀಟ ಪ್ರಭೇದಗಳನ್ನು ಕಂಡು ಹಿಡಿದಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಎಸ್‌.ಎನ್‌. ಸುಶೀಲ್‌ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೃಷಿಗೆ ಸಂಬಂಧಿಸಿದ ಈ ಕೀಟಗಳು ಪತ್ತೆಯಾಗಿರುವುದರಿಂದ ಕೀಟಗಳ ಬಗ್ಗೆ ವೈಜ್ಞಾನಿಕ ತಿಳಿವಳಿಕೆ ಇನ್ನಷ್ಟು ಹೆಚ್ಚಿದೆ’ ಎಂದರು.

‘ಕೃಷಿಗೆ ಪೂರಕವಾದ ಮತ್ತು ಕೆಲವು ಅಪಾಯಕಾರಿ ಕೀಟಗಳು ಪತ್ತೆಯಾಗಿವೆ. ಕ್ಯಾಸಾವ ಮೀಲಿಬಗ್‌ನಂಥ ಅಪಾಯಕಾರಿ ಕೀಟಗಳನ್ನು ನಿಯಂತ್ರಿಸಲು ಪ್ಯಾರಾಸಿಟಾಯ್ಡ್ ಅನಾಗೈರಸ್ ಲೋಪೆಜಿಯನ್ನು ಎನ್‌ಬಿಎಐಆರ್‌ ಪರಿಚಯಿಸಿದೆ. ಮರಗೆಣಸು ಕೃಷಿಯ ಮೇಲೆ ಪರಿಣಾಮಬೀರುತ್ತಿದ್ದ ಕೆಸವ ಮಿಲಿಬಗ್‌ ಕೀಟವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಜೀನ್ ಸೈಲೆನ್ಸಿಂಗ್ ತಂತ್ರಜ್ಞಾನ ಪರಿಚಯಿಸುವ ಮೂಲಕ ಹತ್ತಿಯನ್ನು ಬಾಧಿಸುವ ಬಿಳಿ ನೊಣಗಳನ್ನು ನಿಯಂತ್ರಿಸಲಾಗಿದೆ. ಇದರಿಂದ ಶೇ 85ಕ್ಕೂ ಅಧಿಕ ನೊಣಗಳು ಸತ್ತು ಹೋಗಿವೆ’ ಎಂದು ತಿಳಿಸಿದರು.

ಐದು ಪೇಟೆಂಟ್‌: ಎನ್‌ಬಿಎಐಆರ್‌ 2023–24ನೇ ಸಾಲಿನಲ್ಲಿ ಐದು ಪೇಟೆಂಟ್‌ಗಳನ್ನು ಪಡೆದಿದೆ. ಈ ಮೂಲಕ ಸಂಸ್ಥೆಯು ಈವರೆಗೆ ಪಡೆದಿರುವ ಒಟ್ಟು ಪೇಟೆಂಟ್‌ಗಳ ಸಂಖ್ಯೆ 10ಕ್ಕೆ ಏರಿದೆ ಎಂದರು.

ಹೊಲೊಟ್ರಿಚಿಯಾ ಕಾನ್ಸಾಂಗ್ಯೂನಿಯಾ ನಿರ್ವಹಣೆಯ ವಿಧಾನ ಮತ್ತು ಸಾಧನಕ್ಕೆ 2023ರ ಮಾರ್ಚ್‌ನಲ್ಲಿ ಪೇಟೆಂಟ್‌ ಸಿಕ್ಕಿದೆ. ‘ಪ್ರೊಟೊಕಾಲ್‌ ಫಾರ್‌ ಆಲ್ಕೋಹಾಲ್‌ ಫ್ರಿ ಪ್ಲೈವುಡ್‌ ಲೇಸ್ಡ್‌ ಮೆಲನ್‌ ಫ್ಲೈ ಅಟ್ರಾಕ್ಟಂಟ್‌’ಗೆ ಅದೇ ವರ್ಷ ಮೇ ತಿಂಗಳಲ್ಲಿ ಪೇಟೆಂಟ್‌ ಪಡೆಯಲಾಯಿತು. ಮಾವಿನ ಹಣ್ಣು ಬಾಧಿಸುವ ನೊಣಗಳನ್ನು ನಿಯಂತ್ರಿಸುವ ಬಲೆಯ ದಕ್ಷತೆ ಹೆಚ್ಚಿಸುವ ಸಂಯೋಜನೆ ‘ಡೋರ್ಸಾ ಲೂರ್’ ಬಗ್ಗೆ ನವೆಂಬರ್‌ನಲ್ಲಿ ಪೇಟೆಂಟ್‌ ಸಿಕ್ಕಿದೆ. ಕೀಟ ನಿರ್ವಹಣೆಗಾಗಿ ನ್ಯಾನೊ ಎಮಲ್ಷನ್ ಸಂಯೋಜನೆಗೆ ಈ ವರ್ಷ ಮಾರ್ಚ್‌ನಲ್ಲಿ ಹಾಗೂ ಮರಗಳ ಮೇಲಿನ ಗೆದ್ದಲಿನ ಸಮಸ್ಯೆಗೆ ಗಿಡಮೂಲಿಕೆ ಆಧಾರಿತ ನಿವಾರಕಕ್ಕೆ ಏಪ್ರಿಲ್‌ನಲ್ಲಿ ಪೇಟೆಂಟ್‌ ಪಡೆಯಲಾಯಿತು ಎಂದು ವಿವರ ನೀಡಿದರು.

ಇದರ ಜೊತೆಗೆ ಸೂಕ್ಷ್ಮಜೀವಿಯ ಕೀಟನಾಶಕ, ಫೆರೊಮೊನ್‌ಗಳು ಮತ್ತು ಕೀಟನಾಶಕ ಸೂತ್ರ ಒಳಗೊಂಡಂತೆ 47 ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸಿದೆ. ಅವುಗಳ ವ್ಯಾಪಕ ಬಳಕೆಯನ್ನು ಉತ್ತೇಜಿಸಲು 112 ಪರವಾನಗಿ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದರು.

ಸಾಮಾಜಿಕ ಜವಾಬ್ದಾರಿಯ ಬದ್ಧತೆಯ ಭಾಗವಾಗಿ, ಸಂಸ್ಥೆಯು ‘ಸ್ವಚ್ಛತಾ ಹಿ ಸೇವಾ-2024’ ಕಾರ್ಯಕ್ರಮವನ್ನು ಸಕ್ರಿಯವಾಗಿ ಕೈಗೊಂಡಿದೆ. ಸೆ.15 ರಿಂದ ಅ.1ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಎನ್‌ಬಿಎಐಆರ್‌ನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಟಿ. ವೆಂಕಟೇಶನ್‌, ಕೆ.ಸುಬಾಹರನ್‌, ಶ್ರೀದೇವಿ, ಸಾಗರ್‌, ಗ್ರೇಸಿ, ದೀಪಾ ಭಗತ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT