ಭಾನುವಾರ, ಜನವರಿ 26, 2020
28 °C
ಸಿಎಂಪಿ ಯೋಜನೆಯ ಕರಡಿನಲ್ಲಿ ಚರ್ಚೆ * ನಡೆಯುವವರಿಗೆ, ಸೈಕಲ್‌ ಸವಾರರಿಗೆ ಸಿಗಲಿದೆ ಉತ್ತಮ ಸೌಕರ್ಯ

651 ಕಿ.ಮೀ ಮೋಟಾರುರಹಿತ ಸಂಚಾರ ಪಥ

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಜನರು ನಡೆದು ಸಾಗುವುದನ್ನು ಹಾಗೂ ಸೈಕಲ್‌ ಸವಾರಿಯನ್ನು ಇಷ್ಟಪಡುವಂತೆ ಮಾಡುವ ಮೂಲಕ ಮೋಟಾರು ವಾಹನ ಬಳಕೆ ಪ್ರಮಾಣವನ್ನು ಗಣನೀಯ ಕಡಿಮೆಗೊಳಿಸುವ
ಚಿಂತನೆ ಸರ್ಕಾರದ ಮುಂದಿದೆ.

ಈ ಸಲುವಾಗಿಯೇ ನಗರದಲ್ಲಿ ಈಗಿರುವ ರಸ್ತೆ ಜಾಲದ ಜೊತೆಯಲ್ಲೇ ಮೋಟಾರುರಹಿತ ಸಂಚಾರಕ್ಕೆ (ಎನ್‌ಎಂಟಿ) 651 ಕಿ.ಮೀ ಉದ್ದದ ಮೂಲಸೌಕರ್ಯವನ್ನೂ ಅಭಿವೃದ್ಧಿಪಡಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಸಮಗ್ರ ಸಂಚಾರ ಯೋಜನೆಯ (ಸಿಎಂಪಿ) ಕರಡಿನಲ್ಲಿ ಮೋಟಾರುರಹಿತ ಸಂಚಾರ ವ್ಯವಸ್ಥೆ ಬಗ್ಗೆಯೂ ಚರ್ಚಿಸಲಾಗಿದೆ. 

ನಡಿಗೆ ಸುಲಲಿತಗೊಳಿಸುವ ಸಲುವಾಗಿ ಟೆಂಡರ್‌ ಶ್ಯೂರ್‌ ರಸ್ತೆ, ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು, ಸೈಕಲ್‌ ಸವಾರರಿಗಾಗಿ ಪ್ರತ್ಯೇಕ ಪಥ ನಿರ್ಮಿಸುವುದು ಸೇರಿದಂತೆ ಈ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಸಿಎಂಪಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಕುರಿತ ಪ್ರಮುಖ ಅಂಶಗಳು ಇಲ್ಲಿವೆ.

* ಪಾದಚಾರಿ ಮೂಲಸೌಕರ್ಯಗಳನ್ನು ವಿಸ್ತರಿಸಬೇಕು. ಸಾರ್ವತ್ರಿಕವಾಗಿ ಸ್ವೀಕೃತಗೊಂಡಿರುವ ಟೆಂಡರ್‌ಶ್ಯೂರ್‌ ರಸ್ತೆ ವಿನ್ಯಾಸದಂತೆ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. ಇವುಗಳನ್ನು ಬಳಸುವವವರ ಸುರಕ್ಷತೆಗೆ ಅಲ್ಲಲ್ಲಿ ತಡೆಗಂಬಗಳನ್ನು (ಬೊಲ್ಲಾರ್ಡ್ಸ್‌) ಅಳವಡಿಸಬೇಕು.

* ಪಾದಚಾರಿ ಮಾರ್ಗವು ನಿರಂತರವಾಗಿರುವಂತೆ  ಹಾಗೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಹೆಚ್ಚು ದಟ್ಟಣೆ ಇರುವ ಕಡೆಗಳಲ್ಲಂತೂ ಒತ್ತುವರಿಗೆ ಅವಕಾಶ ನೀಡಲೇಬಾರದು.

* ಸುರಕ್ಷಿತವಾಗಿ ರಸ್ತೆ ದಾಟುವುದಕ್ಕೆ ಅಲ್ಲಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯ ಇರುವ ಕಡೆ ಪಾದಚಾರಿ
ಮೇಲ್ಸೇತುವೆಗಳನ್ನು ನಿರ್ಮಿಸಬೇಕು.

* ಸಂಚಾರಿ ತಾಣವನ್ನು ತಲುಪಲು ಅಥವಾ ಅಲ್ಲಿಂದ ಕೊನೆಯ ತಾಣವನ್ನು ತಲುಪಲು ಜನ ನಡೆದುಹೋಗಲು ಅಥವಾ ಸೈಕಲ್‌ ಮೂಲಕ ಹೋಗಲು ಇಷ್ಟಪಡುವಂತಹ ವಾತಾವರಣ ಕಲ್ಪಿಸಬೇಕು. ಈ ಸಲುವಾಗಿ ಸಂಚಾರ ತಾಣಗಳಿಗೆ ನಡೆದು ಹೋಗುವುದಕ್ಕೆ ಹಾಗೂ ಸೈಕಲ್‌ನಲ್ಲಿ ಸಾಗುವುದಕ್ಕೆ ಪೂರಕವಾದ ಸೌಕರ್ಯಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡಬೇಕು.

* ಈಗಿರುವ ರಸ್ತೆಗಳ ಪಕ್ಕದಲ್ಲಿ ಸಾಧ್ಯವಾದಷ್ಟು ಹೆಚ್ಚು ಕಡೆ ಸೈಕಲ್‌ ಪಥಗಳನ್ನು ಅಭಿವೃದ್ಧಿಪಡಿಸಬೇಕು. ಹೊಸ ರಸ್ತೆಗಳನ್ನು ನಿರ್ಮಿಸುವಾಗ ಅವುಗಳಲ್ಲಿ ಸೈಕಲ್‌ ಸವಾರರಿಗೆ ಪ್ರತ್ಯೇಕ ಪಥಗಳನ್ನು ಗೊತ್ತುಪಡಿಸಬೇಕು.

* ಅಲ್ಲಲ್ಲಿ ಸೈಕಲ್‌ಗಳ ನಿಲುಗಡೆಗೆ ಮೂಲಸೌಕರ್ಯ ಕಲ್ಪಿಸಬೇಕು. ಸಂಚಾರ ತಾಣಗಳ ಬಳಿಯೂ ಕಡ್ಡಾಯವಾಗಿ ಸೈಕಲ್‌ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು.

ಬಿಬಿಎಂಪಿ, ಡಲ್ಟ್‌, ಬಿಎಂಆರ್‌ಸಿಎಲ್‌ಗೆ ಹೊಣೆ

ಮೋಟಾರುರಹಿತ ಸಂಚಾರಕ್ಕೆ ಪೂರಕ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಹೊಣೆಯನ್ನು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌), ಬಿಬಿಎಂಪಿ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮಗಳಿಗೆ (ಬಿಎಂಆರ್‌ಸಿಎಲ್‌) ವಹಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು