ಶನಿವಾರ, ಸೆಪ್ಟೆಂಬರ್ 25, 2021
27 °C

ನಗರದಲ್ಲಿ ಕೋವ್ಯಾಕ್ಸಿನ್ ಲಸಿಕೆ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 70 ಸಾವಿರಕ್ಕೂ ಹೆಚ್ಚು ಜನರಿಗೆ ಕೋವ್ಯಾಕ್ಸಿನ್‌ ಎರಡನೇ ಡೋಸ್‌ ಲಸಿಕೆಯ ಅವಶ್ಯಕತೆ ಇದೆ. ಆದರೆ, ಸದ್ಯ 39 ಸಾವಿರ ಡೋಸ್‌ ಮಾತ್ರ ಲಭ್ಯವಿದ್ದು, ಲಸಿಕೆಯ ಕೊರತೆ ಉದ್ಭವಿಸಿದೆ.

ಕೋವ್ಯಾಕ್ಸಿನ್‌ ಮೊದಲ ಡೋಸ್‌ ಲಸಿಕೆ ಪಡೆದವರು, ನಾಲ್ಕನೇ ವಾರದಲ್ಲಿ ಎರಡನೇ ಡೋಸ್ ಪಡೆಯಬೇಕು. ವಾರಗಳು ಕಳೆದಂತೆ ಕೋವ್ಯಾಕ್ಸಿನ್ ಬೇಡಿಕೆಯ ಪ್ರಮಾಣ ಹೆಚ್ಚಾಗುತ್ತಲೇ ಇದೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕರಾದ ಅರುಂಧತಿ ಚಂದ್ರಶೇಖರ್ ಅವರು, ಕರ್ನಾಟಕವು ಆಗಸ್ಟ್‌ನಿಂದ ಸೆ.2ರವರೆಗೆ ಕೋವ್ಯಾಕ್ಸಿನ್‌ನ 6.12 ಲಕ್ಷ ಡೋಸ್‌ಗಳನ್ನು ಪಡೆಯಲಿದೆ ಎಂದು ಹೇಳಿದ್ದರು. ಈ ಖಾಸಗಿ ವಲಯ ಅಥವಾ ಆಸ್ಪತ್ರೆಗಳಿಗೆ 1.94 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ.

ಕಳೆದ ಕೆಲವು ವಾರಗಳಿಂದ ಬಿಬಿಎಂಪಿಗೆ ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ಕೋವ್ಯಾಕ್ಸಿನ್‌ ಲಸಿಕೆ ಪೂರೈಸಲಾಗುತ್ತಿದೆ. ನಿಗದಿತ ಪ್ರಮಾಣದ ಲಸಿಕೆಗಳು ಬಂದಿದ್ದು, ಆದ್ಯತೆ ಮೇರೆಗೆ ಎರಡನೇ ಡೋಸ್ ಲಸಿಕೆ ನೀಡುವಂತೆ ಲಸಿಕಾ ಕೇಂದ್ರಗಳಿಗೆ ಸರ್ಕಾರ ಸೂಚನೆ ನೀಡಿದೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್‌ ಲಸಿಕೆಗಳ ತೀವ್ರ ಕೊರತೆ ಕಂಡು ಬರುತ್ತಿದೆ.

‘ನಮ್ಮ ಕೇಂದ್ರಕ್ಕೆ ಬೆಳಿಗ್ಗೆ 150 ಡೋಸ್‌ನಿಂದ 160 ಡೋಸ್‌ ಲಸಿಕೆ ಪೂರೈಸಲಾಗಿರುತ್ತದೆ. ಆದರೆ, ಅವು ಮಧ್ಯಾಹ್ನ 1 ಗಂಟೆಯ ವೇಳೆಗೇ ಖಾಲಿಯಾಗುತ್ತವೆ. ಎರಡನೇ ಡೋಸ್‌ ಬೇಕಾದವರು 11 ಗಂಟೆಯ ಒಳಗೆ ಬಂದರೆ ಮಾತ್ರ ಅವರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಿದ ನಂತರ ಕೊರತೆ ಕಾಡುತ್ತಿದೆ’ ಎಂದು ಬೊಮ್ಮನಹಳ್ಳಿ ವಲಯದ ಉತ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬರು ಹೇಳಿದರು. 

ಖಾಸಗಿ ಆಸ್ಪತ್ರೆ ಅಥವಾ ವಲಯದಲ್ಲಿ ಲಸಿಕೆ ಪಡೆಯಬೇಕು ಎಂದರೆ ದುಬಾರಿ ದರವನ್ನು ನಾಗರಿಕರು ಭರಿಸಬೇಕಾಗಿದೆ. ಕೋವ್ಯಾಕ್ಸಿನ್‌ಗೆ ₹1,410, ಕೋವಿಶೀಲ್ಡ್‌ಗೆ ₹780 ಹಾಗೂ ಸ್ಪುಟ್ನಿಕ್‌ಗೆ ₹1,145 ತೆಗೆದುಕೊಳ್ಳಲಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು