ಬೆಂಗಳೂರು: ‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 8 ಲಕ್ಷ ಜನರು ಆತ್ಮಹತ್ಯೆಯಿಂದ ಮೃತಪಡುತ್ತಾರೆ. ಈ ರೀತಿ ಆತ್ಮಹತ್ಯೆ ಪ್ರಕರಣದಿಂದ ಇನ್ನಷ್ಟು ಮಂದಿ ಪ್ರಭಾವಿತರಾಗುತ್ತಾರೆ’ ಎಂದು ಮನೋವೈದ್ಯರು ಹಾಗೂ ಪ್ರಾಧ್ಯಾಪಕರು ಕಳವಳ ವ್ಯಕ್ತಪಡಿಸಿದರು.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಪ್ರಯುಕ್ತ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯ ಸುಸೈಡ್ ಲಾಸ್ ಸರ್ವೈವರ್ಸ್ ಫೋರಂ ನಗರದಲ್ಲಿ ಶುಕ್ರವಾರ ಆಯೋಜಿಸಿದ ಸಂವಾದದಲ್ಲಿ ವಿಷಯ ತಜ್ಞರು ಆತ್ಮಹತ್ಯೆ ತಡೆ ಬಗ್ಗೆ ಚರ್ಚಿಸಿದರು.
ನಿಮ್ಹಾನ್ಸ್‌ನ ಮಕ್ಕಳ ಮತ್ತು ಹದಿಹರೆಯದವರ ಮನೋವೈದ್ಯಕೀಯ ವಿಭಾಗದ ನಿವೃತ್ತ ಪ್ರಾಧ್ಯಾಪ ಡಾ. ಶೇಖರ್ ಪಿ. ಶೇಷಾದ್ರಿ, ‘ಆತ್ಮೀಯರನ್ನು ಕಳೆದುಕೊಂಡಾಗ ಉಂಟಾಗುವ ಭಾವನೆಗಳು, ಗೊಂದಲ, ಅಪರಾಧ, ಕಳಂಕ, ಅವಮಾನ ಸೇರಿದಂತೆ ವಿವಿಧ ಸಂದರ್ಭದಲ್ಲಿ ಆತ್ಮಹತ್ಯೆಯ ಆಲೋಚನೆಗಳು ಸುಳಿದಾಡುತ್ತವೆ. ಆತ್ಮಹತ್ಯೆಯನ್ನು ತಡೆಯಲು ಆತ್ಮಹತ್ಯೆ ಪ್ರಯತ್ನದಿಂದ ಬದುಕುಳಿದವರ ಧ್ವನಿಗಳು ಅತ್ಯಗತ್ಯ. ಆತ್ಮಹತ್ಯೆ ತಡೆಗೆ ಜನರಲ್ಲಿ ಜಾಗೃತಿ ಮೂಡಿಸಿ, ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.
’ಸುಸೈಡ್ ಲಾಸ್ ಸರ್ವೈವರ್ಸ್ ಫೋರಂ’ ಸಂಘಟಕ ಡಾ. ಅನೀಶ್ ವಿ. ಚೆರಿಯನ್, ‘ಆತ್ಮಹತ್ಯೆ ಪ್ರಯತ್ನದ ಬಳಿಕ ಅವಮಾನದ ಜತೆಗೆ ಕಳಂಕದ ಭಾವನೆ ಕೆಲವರಲ್ಲಿ ಇರುತ್ತದೆ. ನಮ್ಮ ವೇದಿಕೆಯು ಅಂತಹವರನ್ನು ಸಹಜ ಸ್ಥಿತಿಗೆ ತರಲು ಶ್ರಮಿಸಲಿದೆ. ಈ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ’ ಎಂದರು.
ಅನನ್ಯಾ–ಎ ಫೌಂಡೇಶನ್‌ನ ಸಂಸ್ಥಾಪಕಿ ಸ್ನೇಹಾ ರಾವ್, ‘ನಾನು ಮಗಳನ್ನು ಕಳೆದುಕೊಂಡಾಗ ಮೊದಲಿನ ಸ್ಥಿತಿಗೆ ಮರಳುತ್ತೇನೆ ಅಂದುಕೊಂಡಿರಲಿಲ್ಲ. ಆ ವೇಳೆ ನನ್ನ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳು ನನ್ನ ಜತೆಗೆ ನಿಂತರು. ನೋವಿನಿಂದ ಹೊರಬರಲು ಬೆಂಬಲ ನೀಡಿದರು. ಆತ್ಮಹತ್ಯೆ ತಡೆಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.
ಹಿರಿಯ ಪ್ರಾಧ್ಯಾಪಕ ಡಾ. ಪ್ರಭಾಚಂದ್ರ, ‘ಆತ್ಮಹತ್ಯೆ ಜಾಗೃತಿ ಕಾರ್ಯಕ್ರಮಗಳನ್ನು ಶಾಲೆ–ಕಾಲೇಜು, ಕೆಲಸದ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯಗೊಳಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.