ಬೆಂಗಳೂರು: ಮನೆಯ ಎದುರು ವ್ಯಕ್ತಿಯ ಕಾಲು ತುಳಿದ ವಿಚಾರಕ್ಕೆ ನಡೆದ ಗಲಾಟೆ ವೇಳೆ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೊಣ್ಣೇನಹಳ್ಳಿಯ ಮೂರ್ತಿ(52) ಕೊಲೆಯಾದವರು. ಕೊಲೆಯ ಆರೋಪದಡಿ ಕೀರ್ತಿ(27) ಎಂಬುವವರನ್ನು ಬಂಧಿಸಲಾಗಿದೆ.
‘ಮೂರ್ತಿ ಹಾಗೂ ಕೀರ್ತಿ ಅವರು ಅಕ್ಕಪಕ್ಕದ ಮನೆಯ ನಿವಾಸಿಗಳು. ಮೂರ್ತಿ ಅವರು ಹಸು ಸಾಕಾಣಿಕೆ ಮಾಡುತ್ತಿದ್ದರು. ಕೊಲೆ ಆರೋಪಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಭಾನುವಾರ ತಡರಾತ್ರಿ ನಡೆದ ಗಲಾಟೆಯಲ್ಲಿ ಆರೋಪಿ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಮೂರ್ತಿ ಅವರ ಸಹೋದರನ ಮನೆಯಲ್ಲಿ ಭಾನುವಾರ ಪಿತೃಪಕ್ಷದ ಪೂಜೆ ಆಯೋಜಿಸಲಾಗಿತ್ತು. ಸಂಬಂಧಿಕರೂ ಮನೆಗೆ ಬಂದಿದ್ದರು. ರಾತ್ರಿ ಮನೆಯಲ್ಲಿ ಮದ್ಯದ ಪಾರ್ಟಿ ಸಹ ಆಯೋಜಿಸಲಾಗಿತ್ತು. ಮದ್ಯ ಸೇವನೆ ಮಾಡಿದ್ದ ಮೂರ್ತಿ ಅವರು ಮನೆಯಿಂದ ಹೊರಬಂದಾಗ ಆರೋಪಿಯ ಕಾಲು ತುಳಿದಿದ್ದರು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಆಗ, ಮೂರ್ತಿ ಅವರ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ತಸ್ರಾವದಿಂದ ಮೂರ್ತಿ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದರು. ಮೊಬೈಲ್ ಲೊಕೇಶನ್ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.