ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪತ್ತೆಯಾಗಿದ್ದ ಬೆಂಗಳೂರಿನ ಯುವಕ ಚನ್ನಪಟ್ಟಣದಲ್ಲಿ ಶವವಾಗಿ ಪತ್ತೆ!

ಲೋಕೇಶ್ (35) ಮೃತ ವ್ಯಕ್ತಿ
Published 9 ಜನವರಿ 2024, 21:32 IST
Last Updated 9 ಜನವರಿ 2024, 21:32 IST
ಅಕ್ಷರ ಗಾತ್ರ

ಚನ್ನಪಟ್ಟಣ: ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಯುವಕನೊಬ್ಬನ ಮೃತದೇಹ ತಾಲ್ಲೂಕಿನ ಸಿಂಗರಾಜಪುರ ಗ್ರಾಮದ ಹೊರವಲಯದಲ್ಲಿರುವ ಗವಿರಂಗಸ್ವಾಮಿ ಬೆಟ್ಟದ ಬಳಿ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಲೋಕೇಶ್ (35) ಮೃತ ವ್ಯಕ್ತಿ. ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿಯಾದ ಈತ ಡಿ.31 ರಂದು ನಾಪತ್ತೆಯಾಗಿದ್ದ. ಈ ಸಂಬಂಧ ಬೆಂಗಳೂರು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರಿನಿಂದ ಬೈಕ್‌ನಲ್ಲಿ ಬಂದು ಸಿಂಗರಾಜಪುರದ ಗವಿರಂಗಸ್ವಾಮಿ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಟ್ಟದ ಬಳಿ ಕಳೆದ ಮೂರು ನಾಲ್ಕು ದಿನಗಳಿಂದ ಬೈಕ್‌ವೊಂದು ನಿಂತಿದ್ದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕಿನ ಅಕ್ಕೂರು ಠಾಣೆ ಪೊಲೀಸರು ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಯುವಕನ ಮೃತದೇಹ ಪತ್ತೆಯಾಗಿದೆ. ಬೈಕ್  ನಂಬರಿನ ಆಧಾರದ ಮೇಲೆ ಯುವಕನ ವಿಳಾಸವನ್ನು ಪತ್ತೆ ಹಚ್ಚಲಾಗಿದೆ. ಆನಂತರ ಆತ ಕಾಣೆಯಾಗಿದ್ದ ವಿಷಯದ ಆಧಾರದ ಮೇಲೆ ಸಾವಿನ ವಿಚಾರ ಬೆಳಕಿಗೆ ಬಂದಿದೆ. ಕೊಳೆತಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವ ಕಾರಣ ಈತ ಮೂರು ದಿನಗಳ ಹಿಂದೆಯೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಮೃತದೇಹವು ಬೆಟ್ಟದ ಕಂದಕದಲ್ಲಿ ಬಿದ್ದಿದ್ದು, ಅದನ್ನು ತೆಗೆಯಲು ಪೊಲೀಸರು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮೃತದೇಹವನ್ನು ತೆಗೆಯಲು ಪ್ರಯತ್ನಿಸಿದರು. ಆದರೆ ಅದೂ ಸಹ ಸಾಧ್ಯವಾಗಲಿಲ್ಲ. ಆನಂತರ ಪೊಲೀಸರು ಬೆಂಗಳೂರಿನಿಂದ ವಿಶೇಷ ಪರಿಣಿತರ ತಂಡವನ್ನು ಕರೆಸಿ ಮೃತದೇಹವನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದರು. ಸಂಜೆಯಾದರೂ ಮೃತದೇಹವನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ.

ಯುವಕನ ವಾರಸುದಾರರಿಗೆ ವಿಷಯ ಮುಟ್ಟಿಸಲಾಗಿದ್ದು, ಸ್ಥಳದಲ್ಲಿ ಯುವಕನ ಪೋಷಕರು ಹಾಗೂ ಸಂಬಂಧಿಕರು ಬೀಡುಬಿಟ್ಟಿದ್ದರು. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT