ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಯುವತಿ, ವಿವಾಹಿತ ಪುರುಷ ಆತ್ಮಹತ್ಯೆ

Published 3 ಜುಲೈ 2024, 15:48 IST
Last Updated 3 ಜುಲೈ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೇಮಿಗಳಾಗಿದ್ದ ಯುವತಿ ಮತ್ತು ವಿವಾಹಿತ ಪುರುಷ ನೈಸ್‌ ರಸ್ತೆಯ ಅಂಜನಾಪುರದ ತುಳಸಿಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಕಾಂತ್ (25), ಅಂಜನಾ (20) ಆತ್ಮಹತ್ಯೆ ಮಾಡಿಕೊಂಡವರು.

‌‘ಮಂಗಳವಾರ ಸಂಜೆ ಕೆರೆಯಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ. ಶ್ರೀಕಾಂತ್‌ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು, ಅಂಜನಾ ಬಿಬಿಎ ಕಲಿಯುತ್ತಿದ್ದರು. ಶ್ರೀಕಾಂತ್‌ ಅವರಿಗೆ ಈಗಾಗಲೇ ಮದುವೆ ಆಗಿದೆ. ಆದರೂ ಅವರು ಅಂಜನಾಳನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಒಟ್ಟಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಜನಾ ಹಾಗೂ ಶ್ರೀಕಾಂತ್‌ ಆಟೊದಲ್ಲಿ ಅಂಜನಾಪುರದ ಕೆರೆ ಬಳಿಗೆ ಬಂದು, ‘ನಮ್ಮ ಸಾವಿಗೆ ಯಾರೂ ಕಾರಣರಲ್ಲ, ನಾವು ಒಟ್ಟಿಗೆ ಬದುಕಲು ಆಗದೆ ಸಾಯುತ್ತಿದ್ದೇವೆ’ ಎಂದು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಅದನ್ನು ಆಟೊದಲ್ಲಿಯೇ ಇರಿಸಿದ್ದರು.

ನಂತರ ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಕಾಂತ್‌ ಹಾಗೂ ಅಂಜನಾ ಕಾಣೆಯಾಗಿರುವ ಬಗ್ಗೆ ಎರಡು ದಿನಗಳ ಹಿಂದೆಯೇ ಕೋಣನಕುಂಟೆ ಹಾಗೂ ತಲಘಟ್ಟಪುರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಮಿಗಳಿಗಾಗಿ ವಿಚ್ಛೇದನಕ್ಕೆ ಒಪ್ಪಿದ್ದ ಪತ್ನಿ:

ಶ್ರೀಕಾಂತ್‌ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ಮದುವೆಯ ನಂತರವೂ ಕಾಲೇಜು ಓದನ್ನು ಮುಂದುವರಿಸಿದ್ದರು. ಅಲ್ಲಿಯೇ ಅಧ್ಯಯನ ಮಾಡುತ್ತಿದ್ದ ಅಂಜನಾರನ್ನು ಪ್ರೀತಿಸುತ್ತಿರುವ ಬಗ್ಗೆ ಮನೆಯಲ್ಲಿ ಪ್ರಸ್ತಾಪಿಸಿದ್ದರು. ‘ಅಂಜನಾ ಇಲ್ಲದಿದ್ದರೆ ಬದುಕುವುದಿಲ್ಲ’ ಎಂದು ಹೇಳಿದ್ದರು. ಇದಕ್ಕೆ ಅವರ ಪತ್ನಿ, ‘ನೀವು ಸಾಯುವುದು ಬೇಡ, ನಾನೇ ವಿಚ್ಛೇದನ ನೀಡುತ್ತೇನೆ. ನೀವಿಬ್ಬರೂ ಮದುವೆಯಾಗಬಹುದು’ ಎಂದು ಪ್ರತಿಕ್ರಿಯಿಸಿದ್ದರು. ಆದರೂ ಶ್ರೀಕಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಅಂಜನಾಪುರ ಕೆರೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಕುಟುಂಬಸ್ಥರ ದೂರಿನ ಮೇರೆಗೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇಬ್ಬರೂ ಸ್ನೇಹಿತರಾಗಿದ್ದು, ಒಟ್ಟಿಗೆ ಓಡಾಡಿಕೊಂಡಿದ್ದರು. ಇಬ್ಬರಲ್ಲಿ ಒಬ್ಬರಿಗೆ ಮದುವೆಯಾಗಿರುವುದರಿಂದ ಮುಂದೆ ಒಟ್ಟಿಗೆ ಇರಲು ಸಾಧ್ಯವಿಲ್ಲವೆಂದು ಬೇಸತ್ತು ಜೀವ ಕಳೆದುಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT