ನಾರುವ ಶೌಚಾಲಯ, ಬೆಡ್ಡಿಲ್ಲದ ಬೆಡ್! ‘ನಮ್ಮ ಕ್ಲಿನಿಕ್’ ಅವ್ಯವಸ್ಥೆ ತೆರೆದಿಟ್ಟ AAP

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ಏಕಕಾಲಕ್ಕೆ ಉದ್ಘಾಟನೆಗೊಂಡಿದ್ದ 108 ‘ನಮ್ಮ ಕ್ಲಿನಿಕ್’ಗಳಲ್ಲಿ ಅವ್ಯವಸ್ಥೆ ಇರುವುದಾಗಿ ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ವನ್ನಾರಪೇಟೆಯ ‘ನಮ್ಮ ಕ್ಲಿನಿಕ್’ನ ವಿಡಿಯೊವನ್ನು ಎಎಪಿ ಗುರುವಾರ ಬಿಡುಗಡೆ ಮಾಡಿದ್ದು, ಆಸ್ಪತ್ರೆಯಲ್ಲಿ ಅವ್ಯವಸ್ಥೆ ಇರುವುದನ್ನು ಬೊಟ್ಟು ಮಾಡಿದೆ.
ಹಾಸಿಗೆಯೇ ಇಲ್ಲದ ಮಂಚ, ನೆಪ ಮಾತ್ರಕ್ಕೆ ನಾಲ್ಕೈದು ಔಷಧ, ಮುರಿದು ಹೋದ ಕುರ್ಚಿ–ಮೇಜು, ನೈರ್ಮಲ್ಯ ಕಾಪಾಡದ ಶೌಚಾಲಯವನ್ನು ವಿಡಿಯೊದಲ್ಲಿ ತೋರಿಸಲಾಗಿದೆ.
ಇದು ಬಿಜೆಪಿ ಉದ್ಘಾಟಿಸಿರುವ 'ನಮ್ಮ ಕ್ಲಿನಿಕ್'...
ಶಾಸ್ತ್ರಕ್ಕೆ 4 ಔಷಧಿ, ಗಬ್ಬು ನಾರುವ ಶೌಚಾಲಯ...
ಬೆಡ್ಡಿಲ್ಲದ ಬೆಡ್!Look how the facilities of BJP's Namma Clinic@BSBommai @mla_sudhakar @BJP4Karnataka pic.twitter.com/g8PIHjfZ6e
— AAP Bengaluru (@AAPBangalore) February 9, 2023
‘ಬಿಜೆಪಿಯ ನಮ್ಮ ಕ್ಲಿನಿಕ್‌ನ ಸೌಲಭ್ಯ ಹೇಗಿದೆ ನೋಡಿ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಬಿಡುಗಡೆ ಮಾಡಿರುವ ಎಎಪಿ, ಅದನ್ನು ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್, ಬಿಜೆಪಿಗೆ ಟ್ಯಾಗ್ ಮಾಡಿದೆ.
ಬಡ, ಮಧ್ಯಮ ಮತ್ತು ಕೊಳೆಗೇರಿ ವಾಸಿಗಳಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನು ನೀಡುವ ‘ನಮ್ಮ ಕ್ಲಿನಿಕ್’ ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಉದ್ಘಾಟಿಸಿದ್ದರು.
ಮಹಾಲಕ್ಷ್ಮೀ ಲೇಔಟ್‌ನ ರಾಣಿ ಅಬ್ಬಕ್ಕದೇವಿ ಆಟದ ಮೈದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯ ಒಟ್ಟು 108 ‘ನಮ್ಮ ಕ್ಲಿನಿಕ್’ಗಳಿಗೆ ಏಕಕಾಲಕ್ಕೆ ಚಾಲನೆ ನೀಡಿದ್ದ ಅವರು, ‘ನಮ್ಮ ಕ್ಲಿನಿಕ್ ಒಂದು ಕ್ರಾಂತಿಕಾರಿ ಹೆಜ್ಜೆ’ ಎಂದು ವ್ಯಾಖ್ಯಾನಿಸಿದರು.
‘ನೆಗಡಿ, ಕೆಮ್ಮು, ರಕ್ತದೊತ್ತಡ, ಮಧುಮೇಹ ಸೇರಿ ಹಲವು ರೀತಿಯ ಕಾಯಿಲೆಗಳ ತಪಾಸಣೆ ಮಾಡುವುದರ ಜತೆಗೆ ಔಷಧಿಗಳನ್ನೂ ವಿತರಿಸಲಾಗುವುದು. ಇಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಟೆಲಿ ಮೆಡಿಸಿನ್ ಸೌಲಭ್ಯವನ್ನು ಒದಗಿಸಲಾಗುವುದು. ಪರಿಣಿತರ ಜತೆಗೆ ಟೆಲಿ ಸಂವಾದ ನಡೆಸಿ ಉಪಚಾರ ನೀಡಲಾಗುವುದು. ಇದರಿಂದ ಸಾಮಾನ್ಯ ಜನರ ಆರೋಗ್ಯ ಸೇವೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಕಳೆದ ಬಜೆಟ್‌ನಲ್ಲಿ ನೀಡಿದ ಭರವಸೆ ಈಡೇರಿದೆ’ ಎಂದು ಹೇಳಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಏಕಕಾಲಕ್ಕೆ 108 ಕಡೆ ಕ್ಲಿನಿಕ್‌ಗಳು ಶುರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.