ಶನಿವಾರ, ಜುಲೈ 24, 2021
23 °C
ಹಣಕಾಸು ಅವ್ಯವಹಾರ ಪ್ರಕರಣ l ಎಸಿಬಿ ಅಧಿಕಾರಿಗಳಿಂದ ದಾಳಿ

ಶ್ರೀ ಗುರುರಾಘವೇಂದ್ರ ಬ್ಯಾಂಕ್‌ ದಾಖಲೆ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣಕಾಸು ಅವ್ಯವಹಾರದ ಸಂಬಂಧ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿ‌ನ ಕೇಂದ್ರ ಕಚೇರಿ ಸೇರಿದಂತೆ ಐದು ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ್ದ ದಾಳಿ ಶುಕ್ರವಾರ ಬೆಳಗಿನ ಜಾವ ಅಂತ್ಯಗೊಂಡಿತು.

ಬ್ಯಾಂಕಿನ ಪ್ರಧಾನ ಕಚೇರಿ, ಬಸವನಗುಡಿ ಶಾಖೆ, ಶ್ರೀ ಗುರುಸಾರ್ವಭೌಮ ಸೌಹಾರ್ದ ಸಹಕಾರ ಸಂಘ, ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಕೃಷ್ಣ ಅವರ ಬಸವನಗುಡಿ ಮನೆ ಹಾಗೂ ಸಿಇಒ ಮಣೂರು ವಾಸುದೇವ ಮಯ್ಯ ಅವರ ಚಿಕ್ಕಲಸಂದ್ರದ ಮನೆಗಳಲ್ಲಿ ಗುರುವಾರ ಬೆಳಿಗ್ಗೆಯಿಂದ ಶೋಧ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮಹತ್ವದ ದಾಖಲೆಗಳೊಂದಿಗೆ ಹಿಂತಿರುಗಿತು.

ಬ್ಯಾಂಕ್‌ ಅಧಿಕಾರಿಗಳು ತೆರೆದಿದ್ದಾರೆನ್ನಲಾದ ನಕಲಿ ಖಾತೆಗಳಿಗೆ ಸಂಬಂಧಿಸಿದ ದಾಖಲೆ, ಬ್ಯಾಂಕ್ ನೀಡಿದ ಸಾಲದ ವಿವರ, ವಸೂಲಾಗದ ಸಾಲದ ದಾಖಲೆ, ಬ್ಯಾಂಕ್‌ನ ಕಂಪ್ಯೂಟರ್‌ನ ಡಾಟಾ ಜಪ್ತಿ ಮಾಡಿದೆ.

ವಾಸುದೇವ ಮಯ್ಯ ಹಾಗೂ ರಾಮಕೃಷ್ಣ ಮನೆಯಲ್ಲಿ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆ ಸಿಕ್ಕಿವೆ. ಸಹಕಾರ ಬ್ಯಾಂಕಿ‌ನಲ್ಲಿ ಗ್ರಾಹಕರು ಹೂಡಿರುವ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ವಜಾ ಗೊಂಡಿರುವ ಬ್ಯಾಂಕಿನ ಆಡಳಿತ ಮಂಡಳಿ ಮೇಲಿದೆ.

‘ಬ್ಯಾಂಕ್‌ ಗ್ರಾಹಕರಿಂದ ₹ 2000 ಕೋಟಿ ಠೇವಣಿ ಸಂಗ್ರಹಿಸಿದ್ದು, ₹ 1400 ಕೋಟಿ ಅವ್ಯವಹಾರ ಎಸಗಿದೆ. 60 ನಕಲಿ ಖಾತೆಗಳಿಗೆ ₹ 150 ಕೋಟಿ ಮಂಜೂರು ಮಾಡಿರುವುದು ರಿಸರ್ವ್‌ ಬ್ಯಾಂಕ್‌ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಕಚೇರಿಯ ವಿಚಾರಣೆ ಯಿಂದ ಬಯಲಾಗಿದೆ’ ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು