ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಿಹಾಳ್‌ ಸಮಿತಿ ವರದಿ ಒಪ್ಪುತ್ತೇವೆ: ಮೇಯರ್‌

ವೈಟ್‌ಟಾಪಿಂಗ್‌: ಅಕ್ರಮ ನಡೆದಿಲ್ಲ ಎಂದ ತನಿಖಾ ಸಮಿತಿ
Last Updated 6 ನವೆಂಬರ್ 2019, 5:14 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ನಡೆದಿರುವ ವೈಟ್‌ಟಾಪಿಂಗ್‌ ಕಾಮಗಾರಿಗಳಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿರುವ ಕ್ಯಾ.ಆರ್‌.ಆರ್‌.ದೊಡ್ಡಿಹಾಳ್‌ ನೇತೃತ್ವದ ತಜ್ಞರ ಸಮಿತಿಯ ವರದಿಯಲ್ಲಿರುವ ಅಂಶಗಳನ್ನು ಒಪ್ಪಿಕೊಳ್ಳುತ್ತೇವೆ’ ಎಂದು ಮೇಯರ್‌ ಎಂ.ಗೌತಮ್ ಕುಮಾರ್‌ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ದೊಡ್ಡಿಹಾಳ್‌ ಸಮಿತಿ ರಚಿಸಿದ್ದರು. ವೈಟ್‌ಟಾಪಿಂಗ್‌ ಕಾಮಗಾರಿ ಸರಿ ಇದ್ದು, ಕಾಮಗಾರಿ ಸಂದರ್ಭದಲ್ಲಿ ಅಗತ್ಯವಿರುವೆಡೆ ಮೂಲಸೌಕರ್ಯ ಸ್ಥಳಾಂತರಿಸಲಾಗಿದೆ ಎಂದು ಆ ಸಮಿತಿಯೇ ಹೇಳಿದೆ. ಅಂದರೆ ಎಲ್ಲ ಸರಿಯಾಗಿದೆ ಎಂದೇ ಅರ್ಥ. ಸಮಿತಿ ನಿರ್ಧಾರಕ್ಕೆ ನಾವು ಬದ್ಧ’ ಎಂದರು.

ದೊಡ್ಡಿಹಾಳ್‌ ಅವರಿಗೆ ಕರೆ ಮಾಡಿದ್ದೇನೆ ಎಂದು ಹೇಳಿಕೊಂಡಿರುವನಿಮ್ಮ ಪಕ್ಷದ ನಗರ ಘಟಕದ ವಕ್ತಾರ ಎನ್‌.ಆರ್‌.ರಮೇಶ್‌, ‘ಸಮಿತಿಗೆ ಕೆಲವೊಂದು ದಾಖಲೆಗಳನ್ನು ಅಧಿಕಾರಿಗಳು ಸಲ್ಲಿಸಿಲ್ಲ’ ಎಂದು ಆರೋಪ ಮಾಡಿದ್ದಾರಲ್ಲ. ಅವರು ದೊಡ್ಡಿಹಾಳ್‌ ಅವರಿಗೆ ಕರೆ ಮಾಡಿ ಸಮಿತಿ ತನಿಖೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದಂತಲ್ಲವೇ’ ಎಂಬ ಪ್ರಶ್ನೆಗೆ, ‘ಅಧಿಕಾರಿಗಳು ಸಮಿತಿಗೆ ಎಲ್ಲ ರೀತಿಯ ದಾಖಲೆಗಳನ್ನು ಒದಗಿಸಿದ್ದಾರೆ’ ಎಂದು ಮೇಯರ್‌ ಉತ್ತರಿಸಿದರು.

‘ಪಕ್ಷದ ವಕ್ತಾರರ ವರ್ತನೆ ಬಗ್ಗೆ ನಮ್ಮ ಪಕ್ಷದ ಸಭೆಯಲ್ಲಿ ಚರ್ಚಿಸುತ್ತೇನೆ’ ಎಂದರು.

‘ಅರ್ಧಕ್ಕೆ ನಿಂತ ವೈಟ್‌ಟಾಪಿಂಗ್‌ ಶೀಘ್ರ ಪೂರ್ಣ’
‘ಅನೇಕ ವೈಟ್‌ಟಾಪಿಂಗ್‌ ಕಾಮಗಾರಿಗಳು ಅರ್ಧದಲ್ಲೇ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಅನೇಕ ಸಾರ್ವಜನಿಕರು ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಸಜ್ಜನರಾವ್‌ ವೃತ್ತದ ಬಳಿಯಂತೂ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ನಮಗೂ ನೋವಿದೆ. ಈ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಕ್ರಮಕೈಗೊಳ್ಳುತ್ತೇನೆ’ ಎಂದು ಮೇಯರ್‌ ತಿಳಿಸಿದರು.

‘ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯವರು ಬುಧವಾರ ಸಭೆ ಕರೆದಿದ್ದಾರೆ. ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸುವಂತೆ ಸಭೆಯಲ್ಲಿ ಮನವಿ ಮಾಡುತ್ತೇನೆ’ ಎಂದು ಹೇಳಿದರು.

‘ಬಿಟಿಎಂ ಲೇಔಟ್‌, ಜಯನಗರಗಳಲ್ಲಿ ಕೈಗೊಂಡಿರುವ ಕಾಮಗಾರಿಗಳು ಸೇರಿದಂತೆ ವೈಟ್‌ಟಾಪಿಂಗ್‌ನ ಮೊದಲ ಎರಡು ಹಂತಗಳ ಕಾಮಗಾರಿಗಳಿಗೆ ಅಡ್ಡಿ ಇಲ್ಲ’ ಎಂದರು.

‘ವೈಟ್‌ಟಾಪಿಂಗ್‌ಗೆ ಮೀಸಲಿಟ್ಟ ₹ 4 ಸಾವಿರ ಕೋಟಿಯನ್ನು ವಾರ್ಡ್‌ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಇದರಿಂದ ಶಾಶ್ವತ ಕಾಮಗಾರಿಗಳಿಗೆ ಅನುದಾನದ ಕೊರತೆಯಾಗುವುದಿಲ್ಲವೇ’ ಎಂಬ ಪ್ರಶ್ನೆಗೆ, ‘ಇದು ಸರ್ಕಾರದ ನಿರ್ಧಾರ. ನಾವೇನೂ ಮಾಡಲಾಗದು’ ಎಂದು ಮೇಯರ್‌ ಉತ್ತರಿಸಿದರು.

‘ಇಂದಿರಾ ಕ್ಯಾಂಟೀನ್‌– ಸರ್ಕಾರ ಅನುದಾನ ನೀಡಲಿ’
‘ಇಂದಿರಾ ಕ್ಯಾಂಟೀನ್‌ ನಡೆಸುವುದಕ್ಕೆ ಸದ್ಯ ಸರ್ಕಾರ ಹಣ ಕೊಡುತ್ತಿಲ್ಲ. ಪಾಲಿಕೆ ವತಿಯಿಂದಲೇ ಅವುಗಳನ್ನು ನಡೆಸುತ್ತಿದ್ದೇವೆ. ನಾವು ಭರಿಸಿರುವ ಮೊತ್ತವನ್ನು ಮರುಪಾವತಿ ಮಾಡುವಂತೆ ಸರ್ಕಾರವನ್ನು ಕೋರುತ್ತೇವೆ’ ಎಂದು ಮೇಯರ್‌ ತಿಳಿಸಿದರು.

‘ಅನುದಾನ ಕೊರತೆ ಇದೆ ಎಂಬ ಕಾರಣಕ್ಕೆ ಆಹಾರ ಪೂರೈಕೆ ನಿಲ್ಲಿಸಿಲ್ಲ. ಗುತ್ತಿಗೆದಾರರಿಗೂ ಪಾವತಿ ಬಾಕಿ ಇರಿಸಿಕೊಂಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕ್ಯಾಂಟೀನ್‌ ನಿರ್ವಹಣೆಯ ಗುತ್ತಿಗೆ ಅವಧಿ 2019ರ ಆಗಸ್ಟ್‌ನಲ್ಲೇ ಮುಗಿದಿದೆ. ಮರು ಟೆಂಡರ್‌ ಕರೆಯಬೇಕಿದೆ. ಮೆನು ಬದಲಾವಣೆ ವಿಚಾರ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT