ಮಂಗಳವಾರ, ಆಗಸ್ಟ್ 9, 2022
21 °C

ಸಿ.ಡಿ ಬ್ಲ್ಯಾಕ್‌ಮೇಲ್: ಆರೋಪಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ರೂಪಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದ ಪ್ರಕರಣದ ಆರೋಪಿ ನರೇಶ್‌ಗೌಡನನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸೋಮವಾರ ವಿಚಾರಣೆ ನಡೆಸಿದರು.

ಸುದ್ದಿವಾಹಿನಿಯಲ್ಲಿ ವರದಿಗಾರ
ನಾಗಿ ಕೆಲಸ ಮಾಡಿದ್ದ ನರೇಶ್‌ಗೌಡ ಹಾಗೂ ಶ್ರವಣ್ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ಎಸ್‌ಐಟಿಗೆ ಇತ್ತು. ಆದರೆ, ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದರು. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ ಅವರಿಬ್ಬರು, ಶನಿವಾರ ವಿಚಾರಣೆ ಹಾಜರಾಗಿದ್ದರು.

‘ಇಬ್ಬರನ್ನೂ ಒಟ್ಟಿಗೆ ವಿಚಾರಣೆ ನಡೆಸಿ ಕೆಲ ಮಾಹಿತಿ ಪಡೆಯಲಾಗಿತ್ತು. ನರೇಶ್ ಗೌಡನನ್ನು ಮಾತ್ರ ಆಡುಗೋಡಿಯಲ್ಲಿರುವ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಆತನಿಂದ ಘಟನೆ ಬಗ್ಗೆ ಹೇಳಿಕೆ ಪಡೆದು ಕಳುಹಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಇನ್ನೊಬ್ಬ ಆರೋಪಿ ಶ್ರವಣ್ ಸಹ ಮಂಗಳವಾರ ವಿಚಾರಣೆಗೆ ಬರಲಿದ್ದಾನೆ. ಆತನಿಂದಲೂ ಹೇಳಿಕೆ ಪಡೆದು ಪರಿಶೀಲನೆ ನಡೆಸಲಾಗುವುದು. ಬಳಿಕವೇ ಪ್ರಕರಣದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದೂ ತಿಳಿಸಿವೆ.

ಆಸ್ತಿ ಸಂಪಾದನೆ ಪ್ರಶ್ನೆ: ‘ಸಿ.ಡಿ ಪ್ರಕರಣದ ಹೊರಬೀಳುತ್ತಿದ್ದ ತಲೆಮರೆಸಿಕೊಂಡಿದ್ದ ನರೇಶ್, ಆಸ್ತಿ ಬಗ್ಗೆ ಎಸ್‌ಐಟಿ ಮಾಹಿತಿ ಕಲೆಹಾಕಿತ್ತು. ಕೆಲವೆಡೆ ಜಮೀನು ಹಾಗೂ ಯಶವಂತಪುರದಲ್ಲಿ ಕಾರು ಖರೀದಿಸಲು ನರೇಶ್ ತಯಾರಿ ನಡೆಸಿದ್ದ ಸಂಗತಿ ಬಯಲಾಗಿತ್ತು. ಈ ಕುರಿತ ಪ್ರಶ್ನೆಗೆ ನರೇಶ್, ಅಂಥ ಯಾವುದೇ ಖರೀದಿ ವ್ಯವಹಾರ ಮಾಡಿಲ್ಲವೆಂದು ಉತ್ತರಿಸಿದ್ದಾನೆ’ ಎಂದೂ ಮೂಲಗಳು ಹೇಳಿವೆ.

ಆರೋಪಿಗಳ ರಹಸ್ಯ ಕಾರ್ಯಾಚರಣೆ: ‘ಕೆಲಸದ ಆಮಿಷವೊಡ್ಡಿದ್ದ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿದ್ದ ಯುವತಿ, ತಮಗೆ ನ್ಯಾಯ ಕೊಡಿಸುವಂತೆ ಆರೋಪಿಗಳನ್ನು ಸಂಪರ್ಕಿಸಿದ್ದರು. ಸುದ್ದಿವಾಹಿನಿಗಳಲ್ಲಿ ಆರೋಪಿಗಳು ಕೆಲಸ ಮಾಡಿದ್ದರಿಂದ, ರಹಸ್ಯ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದರು. ಯುವತಿಗೆ ರಹಸ್ಯ ಕ್ಯಾಮೆರಾ ಕೊಟ್ಟು ದೃಶ್ಯಗಳನ್ನು ಸೆರೆ ಹಿಡಿದಿದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಆರೋಪಿಗಳು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ’ ಎಂದೂ ಎಸ್‌ಐಟಿ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು