ಮಂಗಳವಾರ, ಏಪ್ರಿಲ್ 20, 2021
26 °C

ದೇಶ ಬಿಟ್ಟುಹೋಗಲೊಪ್ಪದೇ ಎಸಿಪಿ ಕಚೇರಿ ಕುರ್ಚಿ ಕದ್ದ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ ಜಪಾನ್‌ ಪ್ರಜೆಯೊಬ್ಬ, ದೇಶ ಬಿಟ್ಟು ಹೋಗಲು ಒಪ್ಪದೇ ಜೆ.ಸಿ.ನಗರ ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಕುರ್ಚಿ ಕದ್ದು ಆರೋಪಿಯಾಗಲು ಯತ್ನಿಸಿದ್ದ ಘಟನೆ ಇತ್ತೀಚೆಗೆ ನಡೆದಿದೆ.

‘ಹಿರೊತೋಶಿ ಎಂಬಾತ, 2019ರಲ್ಲಿ ಬೆಂಗಳೂರಿಗೆ ಬಂದಿದ್ದ. ಆತನ ವೀಸಾ ಅವಧಿ ಮುಗಿದಿತ್ತು. ಹೀಗಾಗಿ, ತವರಿಗೆ ವಾಪಸು ಹೋಗಬೇಕಿತ್ತು. ಆದರೆ, ಆತನಿಗೆ ತವರಿಗೆ ಹೋಗಲು ಮನಸ್ಸಿರಲಿಲ್ಲ. ಕುರ್ಚಿ ಕದ್ದು ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋದರೆ ಮತ್ತಷ್ಟು ದಿನ ನಗರದಲ್ಲೇ ಉಳಿದುಕೊಳ್ಳಬಹುದೆಂದು ಆತ ಕೃತ್ಯ ಎಸಗಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕದ್ದುಕೊಂಡು ಹೋಗಿದ್ದ ಕುರ್ಚಿಯನ್ನು ಆರೋ‍ಪಿ ವಾಪಸು ತಂದುಕೊಟ್ಟಿದ್ದಾನೆ. ಆತನನ್ನು ವಶಕ್ಕೆ ಪಡೆದು, ನೆಲಮಂಗಲ ಬಳಿಯ ಅಕ್ರಮ ವಲಸಿಗರ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ. ಸದ್ಯದಲ್ಲೇ ಆತನನ್ನು ತವರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ಜೈಲಿಗೆ ಹೋಗಿ ಬಂದಿದ್ದ: ‘ನಗರದ ಇಂಗ್ಲಿಷ್ ಭಾಷಾ ಅಧ್ಯಯನ ಕೇಂದ್ರವೊಂದರಲ್ಲಿ ಹಿರೊತೋಶಿ ವಿದ್ಯಾರ್ಥಿಯಾಗಿದ್ದ. ಕ್ಷುಲ್ಲಕ ಕಾರಣಕ್ಕೆ ಕೇಂದ್ರದ ಮಾಲೀಕರ ಜೊತೆ ಗಲಾಟೆ ಮಾಡಿ, ಹಲ್ಲೆ ಮಾಡಿದ್ದ. ಅದೇ ಪ್ರಕರಣದಡಿ ಆತನನ್ನು ಬಂಧಿಸಲಾಗಿತ್ತು. ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದ ಆತನಿಗೆ ಶಿಕ್ಷೆಯೂ ಆಗಿತ್ತು’ ಎಂದು ಪೊಲಿಸ್ ಮೂಲಗಳು ಹೇಳಿವೆ.

‘ಶಿಕ್ಷೆ ಅವಧಿ ಮುಗಿದಿದ್ದರಿಂದ ಆರೋಪಿ, ಜೈಲಿನಿಂದ ಬಿಡುಗಡೆಯಾಗಿದ್ದ. ಅದೇ ಸಮಯಕ್ಕೆ ಆತನ ವೀಸಾ ಅವಧಿ ಸಹ ಮುಗಿದಿತ್ತು. ಹೀಗಾಗಿ, ದೇಶ ತೊರೆದು ತವರಿಗೆ ಹೋಗುವಂತೆ ರಾಯಭಾರಿ ಕಚೇರಿ ಅಧಿಕಾರಿಗಳು ಸೂಚನೆ ನೀಡಿದ್ದರು. ಅದಕ್ಕೆ ಒಪ್ಪದ ಆರೋಪಿ, ಜೆ.ಸಿ.ನಗರ ಠಾಣೆ ಉಪವಿಭಾಗದ ಎಸಿಪಿ ಕಚೇರಿಗೆ ಹೋಗಿ ಕುರ್ಚಿಯೊಂದನ್ನು ಕದ್ದೊಯ್ದಿದ್ದ.’

‘ಕುರ್ಚಿ ಕದ್ದಿರುವುದಾಗಿ ಫೋಟೊ ಸಮೇತ ಟ್ವೀಟ್ ಮಾಡಿದ್ದ. ಕುರ್ಚಿ ಕದ್ದಿರುವ ಬಗ್ಗೆ ಮತ್ತೊಂದು ಪ್ರಕರಣ ದಾಖಲಾದರೆ, ಮತ್ತಷ್ಟು ದಿನ ನಗರದಲ್ಲೇ ಉಳಿಯಬಹುದೆಂದು ಆತ ಅಂದುಕೊಂಡಿದ್ದ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು