ಸೋಮವಾರ, ಜನವರಿ 20, 2020
25 °C

ನಿರ್ವಾಹಕಿ ಮೇಲೆ ಆ್ಯಸಿಡ್‌ ದಾಳಿ: ಮೈದುನ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಟಿಸಿ ನಿರ್ವಾಹಕಿ ಯೊಬ್ಬರ ಮೇಲೆ ಇತ್ತೀಚೆಗೆ ನಡೆದ ಆ್ಯಸಿಡ್ ದಾಳಿ ಪ್ರಕರಣ ಭೇದಿಸಿರುವ ಬಾಗಲಗುಂಟೆ ಪೊಲೀಸರು, ಸಂತ್ರಸ್ತೆಯ ಮೈದುನ ಮತ್ತು ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.

ಗಾಯತ್ರಿನಗರದ ಆರ್. ಅರುಣ್ ನಾಯ್ಕ್ (38) ಮತ್ತು ನಾಗಸಂದ್ರದ ಕುಮಾರ್ ನಾಯ್ಕ್(39) ಬಂಧಿತರು. ಇಂದಿರಾಬಾಯಿ (36) ಎಂಬವರ ಮೇಲೆ ಮೂರು ದಿನಗಳ ಹಿಂದೆ ಆ್ಯಸಿಡ್ ದಾಳಿ ನಡೆದಿತ್ತು. ಇಂದಿರಾಬಾಯಿ ಅವರ ಪತಿ ಬಿಎಂಟಿಸಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿ ಮಕ್ಕಳ ಜೊತೆ ಹಾವನೂರು ಲೇಔಟ್‍ನಲ್ಲಿ ನೆಲೆಸಿದ್ದಾರೆ.

ಇಂದಿರಾಬಾಯಿ, ಬಿಎಂಟಿಸಿಯಲ್ಲಿ ಚಾಲಕ ಕಂ ನಿರ್ವಾಹಕ ಆಗಿ ಕೆಲಸ ಮಾಡುತ್ತಿರುವ ಆರೋಪಿ ಅರುಣ್ ನಾಯ್ಕ್‌ನ ಪತ್ನಿಯ ಅಕ್ಕ. ಹಿಂದೆ ಒಂದೇ ಡಿಪೊದಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ಮತ್ತು ಇಂದಿರಾಬಾಯಿ ಅನ್ಯೋನ್ಯವಾಗಿದ್ದರು. ಆದರೆ, ಕೆಲವು ದಿನಗಳ ಹಿಂದೆ ಇಂದಿರಾಬಾಯಿ, ಅರುಣ್ ನಾಯ್ಕ್‌ನಿಂದ ದೂರವಾಗಿದ್ದರು. ಅಲ್ಲದೆ, ಬೇರೊಬ್ಬ ವ್ಯಕ್ತಿಯ ಜತೆ ಸಲುಗೆ ಹೊಂದಿದ್ದರು. ಇದರಿಂದ ಆಕ್ರೋಶಗೊಂಡ ಅರುಣ್ ಆ್ಯಸಿಡ್ ದಾಳಿಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಡಿ.19ರಂದು ಬೆಳಗ್ಗೆ 5.30ರಲ್ಲಿ ಬಿಎಂಟಿಸಿ ಪೀಣ್ಯ ಡಿಪೊಗೆ ಕೆಲಸಕ್ಕೆ ಹೋಗಲು ಇಂದಿರಾಬಾಯಿ ಮನೆಯಿಂದ ಹೋಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ ಆರೋಪಿಗಳು ಆ್ಯಸಿಡ್ ದಾಳಿ ನಡೆಸಿದ್ದರು. ಇಂದಿರಾಬಾಯಿ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಭಾಗಶಃ ಸುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್‌ ಟವರ್ ಲೊಕೇಶನ್ ಪರಿಶೀಲಿಸಿದಾಗ, ಘಟನೆ ನಡೆದ ದಿನ ಅರುಣ್‌ ನಾಯ್ಕನ ಮೊಬೈಲ್‍ ನಂಬರ್‌ ಸ್ಥಳದಲ್ಲಿದ್ದ ಸುಳಿವು ಸಿಕ್ಕಿತ್ತು. ಅಲ್ಲದೆ, ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ ಎಸಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅನುಮಾನದ ಮೇಲೆ ಅರುಣ್‍ನ ದ್ವಿಚಕ್ರ ವಾಹನ ಪರಿಶೀಲಿಸಿದಾಗ ವಾಹನದ ಒಂದು ಭಾಗದಲ್ಲಿ ಆ್ಯಸಿಡ್ ಬಿದ್ದು ಬಣ್ಣ ಮಾಸಿರುವುದು ಪತ್ತೆಯಾಗಿತ್ತು. ಇದರ ಆಧಾರದ ಮೇಲೆ ಅರುಣ್‍ನನ್ನು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)