ಬುಧವಾರ, ಸೆಪ್ಟೆಂಬರ್ 22, 2021
23 °C

ನಡುರ‌ಸ್ತೆಯಲ್ಲೇ ಮದ್ಯದ ಪಾರ್ಟಿ; ದಂಡ ಕಟ್ಟಿದ ‘ರಾಜಹುಲಿ’ ನಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜಾಹುಲಿ’, ’ವರ್ಧನ್’ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಹರ್ಷ ಹಾಗೂ ಆತನ ಸ್ನೇಹಿತ ಅರ್ಷಿತ್, ನಡುರಸ್ತೆಯಲ್ಲಿ ಮದ್ಯದ ಪಾರ್ಟಿ ಮಾಡಿ ಪೊಲೀಸರಿಗೆ ಬೆದರಿಕೆ ಹಾಕಿರುವ ಬಗ್ಗೆ ಬಾಗಲಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹರ್ಷ ಹಾಗೂ ಅರ್ಷಿತ್‌ ವಿರುದ್ಧ ಪ್ರಕರಣ ದಾಖಲಿಸಿ 31ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಬ್ಬರಿಗೂ ₹ 300 ದಂಡ ವಿಧಿಸಿದೆ. ದಂಡ ಪಾವತಿಸಿದ ನಂತರ ಆರೋಪಿಗಳನ್ನು ಬಿಟ್ಟು ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಕಾರು ಎದುರಲ್ಲಿ ಪಾರ್ಟಿ; ‘ರಾಜಾಜಿನಗರ ನಿವಾಸಿಯಾದ ಹರ್ಷ ಹಾಗೂ ಅರ್ಷಿತ್, ಮದ್ಯದ ಪಾರ್ಟಿ ಮಾಡಲೆಂದು ಜಾಲಹಳ್ಳಿಗೆ ಸಂಪರ್ಕ ಕಲ್ಪಿಸುವ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಗೆ ಬಂದಿದ್ದರು. ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಸಮೀಪದಲ್ಲಿ ಕಾರು ನಿಲ್ಲಿಸಿ, ರಸ್ತೆ ಮೇಲೆ ಬಿಯರ್ ಬಾಟಲಿ ಹಿಡಿದು ಕುಡಿಯುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಸ್ಥಳಕ್ಕೆ ಹೋಗಿದ್ದ ಹೊಯ್ಸಳ ಗಸ್ತು ವಾಹನ ಸಿಬ್ಬಂದಿ ವಿಚಾರಿಸಿದ್ದರು. ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದ ಆರೋಪಿಗಳು, ‘ನಮಗೆ ರಾಜಕಾರಣಿ ಹಾಗೂ ಪೊಲೀಸ್ ಅಧಿಕಾರಿಗಳು ಗೊತ್ತು. ನಿಮ್ಮಿಂದ ಏನು ಮಾಡಲು ಆಗುವುದಿಲ್ಲ. ರಸ್ತೆಯಲ್ಲೇ ನಾವು ಮದ್ಯ ಕುಡಿಯುತ್ತೇವೆ. ನಮ್ಮನ್ನು ಪ್ರಶ್ನಿಸಿದರೆ ನಿಮಗೂ ಗತಿ ಕಾಣಿಸುತ್ತೇವೆ’ ಎಂದು ಬೆದರಿಸಿದ್ದರು.’

‘ಸ್ಥಳಕ್ಕೆ ಹೋದ ಹೆಚ್ಚುವರಿ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದೂ ಪೊಲೀಸರು ವಿವರಿಸಿದರು.

‘ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಮದ್ಯದ ಅಂಶವಿರುವುದು ಗೊತ್ತಾಗಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು