ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ | ಪಾಸ್ ದುರುಪಯೋಗ; ಕಮಿಷನರ್‌ಗೆ ಪತ್ರ

ಚಾಲಕನ ವಿರುದ್ಧ ಎಫ್‌ಐಆರ್‌
Last Updated 5 ಏಪ್ರಿಲ್ 2020, 20:48 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಶರ್ಮಿಳಾ ಮಾಂಡ್ರೆ ಹಾಗೂ ಸ್ನೇಹಿತರು ಪ್ರಯಾಣಿಸುತ್ತಿದ್ದ ಜಾಗ್ವಾರ್ ಕಾರು ವಸಂತನಗರದ ಕೆಳಸೇತುವೆಯಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಸಂಚಾರ ಪೊಲೀಸರು, ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ.

‘ಅಪಘಾತಕ್ಕೀಡಾದ ಕಾರಿನ ಮುಂಭಾಗದಲ್ಲಿ ‘ಕೆಎಸ್‌ಪಿ (ಕರ್ನಾಟಕ ರಾಜ್ಯ ಪೊಲೀಸ್) ಕ್ಲಿಯರ್ ಪಾಸ್‌’ ಅಂಟಿಸಲಾಗಿತ್ತು. ಪಾಸ್ ದುರುಪಯೋಗವಾಗಿರುವ ಅನುಮಾನವಿದೆ. ಯಾವ ಉದ್ದೇಶಕ್ಕಾಗಿ ಪಾಸ್ ನೀಡಲಾಗಿತ್ತು ಹಾಗೂ ಪಾಸ್‌ ಕೊಟ್ಟವರು ಯಾರು ಎಂಬುದನ್ನು ತಿಳಿದುಕೊಳ್ಳಲು ಕಮಿಷನರ್ ಅವರಿಗೆ ಪತ್ರ ಬರೆಯಲಾಗುವುದು’ ಎಂದು ಸಂಚಾರ ವಿಭಾಗದ (ಪೂರ್ವ) ಡಿಸಿಪಿ ನಾರಾಯಣ ‘ಪ್ರಜಾವಾಣಿ’ಗೆ ಹೇಳಿದರು.

‘ಅಘಘಾತ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರೇ ಕಾರಿನ ಚಾಲಕನ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಚಾಲಕನನ್ನು ಪತ್ತೆ ಮಾಡುತ್ತಿದ್ದಾರೆ’ ಎಂದರು.

ಜೀವಕ್ಕೆ ಕುತ್ತು ತಂದ ಆರೋಪ: ‘ಅಪಘಾತ ಹೇಗಾಯಿತು ಎಂಬ ಬಗ್ಗೆ ಇದುವರೆಗೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಅಜಾಗರೂಕತೆಯಿಂದ ವಾಹನ ಚಲಾಯಿಸಿ ಜೀವಕ್ಕೆ ಕುತ್ತು ತಂದ (ಐಪಿಸಿ 279) ಹಾಗೂ ಸಾರ್ವಜನಿಕರ ಸುರಕ್ಷತೆಗೆ ಕುತ್ತು ತಂದ (ಐಪಿಸಿ 337) ಆರೋಪದಡಿ ಜಾಗ್ವಾರ್ ಕಾರಿನ (ಕೆಎ 51 ಎಂಜೆ 2481) ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಜೆ.ಪಿ.ನಗರದ ನಿವಾಸಿಯಾದ ನಟಿ ಶರ್ಮಿಳಾ ಮಾಡ್ರೆ ಹಾಗೂ ಸ್ನೇಹಿತ ಫ್ರೇಜರ್ ಟೌನ್‌ನ ನಿವಾಸಿ ಕೆ. ಲೋಕೇಶ್ ವಸಂತ್ ಗಾಯಗೊಂಡಿರುವ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆ ಪೈಕಿ ಲೋಕೇಶ್ ಮಾತ್ರ ಹೇಳಿಕೆ ನೀಡಿದ್ದಾರೆ. ಶರ್ಮಿಳಾ ಇದುವರೆಗೂ ಲಿಖಿತ ಹೇಳಿಕೆ ನೀಡಿಲ್ಲ. ವೈದ್ಯರ ಸಲಹೆ ಪಡೆದು ಹೇಳಿಕೆ ಪಡೆಯಬೇಕಿದೆ’ ಎಂದು ಮೂಲಗಳು ಹೇಳಿವೆ.

ಹೇಳಿಕೆಯಲ್ಲಿ ಗೊಂದಲ: ‘ಅಪಘಾತ ಸಂಬಂಧ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ, ಅಪಘಾತ ಬಗ್ಗೆ ಗೊಂದಲಗಳು ಉಂಟಾಗಿವೆ. ತನಿಖೆಯಿಂದಲೇ ನಿಜಾಂಶ ತಿಳಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅಪಘಾತಕ್ಕೀಡಾದ ಜಾಗ್ವಾರ್ ಕಾರಿನ ಹಿಂದೆಯೇ, ಇನ್ನೊಂದು ಜಾಗ್ವಾರ್ ಹಾಗೂ ಬೆನ್ಜ್ ಕಾರು ಇತ್ತು. ಎಲ್ಲೋ ಪಾರ್ಟಿ ಮಾಡಿ ಜಾಲಿರೈಡ್ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಎಲ್ಲಿ ಪಾರ್ಟಿ ಮಾಡಿದ್ದರು ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಪ್ರಕರಣದಿಂದ ತಪ್ಪಿಸಿಕೊಳ್ಳಲು ನಟಿ ಯತ್ನ
ಪ್ರಕರಣದಿಂದ ತಪ್ಪಿಸಿಕೊಳ್ಳಲು ನಟಿ ಶರ್ಮಿಳಾ ಮಾಂಡ್ರೆ ಯತ್ನಿಸುತ್ತಿದ್ದು, ವೈದ್ಯರು ಹಾಗೂ ಪೊಲೀಸರ ಬಳಿ ಭಿನ್ನ ರೀತಿಯಲ್ಲಿ ಮೌಖಿಕವಾಗಿ ಹೇಳಿಕೆ ನೀಡುತ್ತಿದ್ದಾರೆ.

‘ನಾನು ಯಾವುದೇ ಪಾರ್ಟಿ ಮಾಡಲು ಹೋಗಿರಲಿಲ್ಲ. ಹೊಟ್ಟೆ ನೋವಿನ ಔಷಧಿಗಾಗಿ ಮನೆಯಿಂದ ಹೊರಗೆ ಬಂದಿದ್ದೆ. ಲಾಕ್‌ಡೌನ್ ವೇಳೆ ಓಡಾಡಲು ಸ್ನೇಹಿತನ ಕಾರಿಗೆ ಪಾಸ್‌ ಇತ್ತು. ಹೀಗಾಗಿ, ಆತನ ಸಹಾಯ ಪಡೆದಿದ್ದೆ’ ಎಂದು ನಟಿ ಹೇಳುತ್ತಿದ್ದಾರೆ. ಅವರ ಮನೆ ಜೆ.ಪಿ.ನಗರದಲ್ಲಿದ್ದು,ಅಲ್ಲಿಂದ ವಸಂತನಗರಕ್ಕೆ ಔಷಧಿಗಾಗಿ ಬಂದಿದ್ದರು ಎನ್ನುವುದು ಅವರ ಮೇಲೆಯೇ ಪೊಲೀಸರಿಗೆಅನುಮಾನ ಬರುವಂತೆ ಮಾಡಿದೆ.

‘ಸ್ನೇಹಿತ ಡಾನ್ ಥಾಮಸ್ ಎಂಬಾತ ಕಾರು ಚಲಾಯಿಸುತ್ತಿದ್ದ. ಲೋಕೇಶ್ ಮುಂದಿನ ಸೀಟಿನಲ್ಲಿ ಕುಳಿತಿದ್ದ. ನಾನು ಹಿಂದಿನ ಸೀಟಿನಲ್ಲಿದ್ದೆ’ ಎಂದು ಶರ್ಮಿಳಾ ಹೇಳಿದ್ದಾರೆ. ಆದರೆ, ಅಪಘಾತವಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಥಾಮಸ್‌ಗೆ ಮಾತ್ರ ಯಾವುದೇ ಗಾಯ ಆಗಿಲ್ಲ. ಅಪಘಾತ ಸ್ಥಳಕ್ಕೆ ಪೊಲೀಸರು ಹೋದಾಗಲೂ ಆತ ಅಲ್ಲಿಯೇ ಇದ್ದ. ಹೀಗಾಗಿ, ಈ ಹೇಳಿಕೆಯು ಗೊಂದಲವನ್ನುಂಟು ಮಾಡಿದೆ.

‘ಜೆ.ಪಿ.ನಗರದಲ್ಲಿ ಮರಕ್ಕೆ ಕಾರು ಗುದ್ದಿದೆ’ ಎಂದು ವೈದ್ಯರಿಗೆ ಶರ್ಮಿಳಾ ಹೇಳಿದ್ದರು. ಅದಕ್ಕೆ ಭಿನ್ನವಾದ ಹೇಳಿಕೆಯನ್ನು ಅವರ ಸಹೋದರ ನೀಡಿದ್ದಾರೆ. ಹೀಗಾಗಿ, ಪೊಲೀಸರು ನಾನಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಥಾಮಸ್‌ಗೆ ಪಾಸ್ ನೀಡಿದ್ದು ಡಿಸಿಪಿ?
ಲಾಕ್‌ಡೌನ್ ವೇಳೆ ಸಂಚರಿಸಲು ಅನುಕೂಲವಾಗಲೆಂದು ಅಗತ್ಯ ಸೇವೆಗಳಿಗೆ ಪೊಲೀಸರು ಪಾಸ್‌ ನೀಡುತ್ತಿದ್ದಾರೆ. ಪಾಸ್‌ ನೀಡುವ ಜವಾಬ್ದಾರಿಯನ್ನು ಆಯಾ ವಿಭಾಗದ ಡಿಸಿಪಿಗಳಿಗೆ ನೀಡಲಾಗಿದೆ. ಈ ಪೈಕಿ ಡಿಸಿಪಿಯೊಬ್ಬರು ಡಾನ್‌ ಥಾಮಸ್ ಅವರಿಗೆ ಪಾಸ್‌ ನೀಡಿದ್ದರು ಎನ್ನಲಾಗಿದೆ. ಆ ಡಿಸಿಪಿ ಯಾರು? ಯಾವ ಆಧಾರದಲ್ಲಿ ಥಾಮಸ್‌ಗೆ ಪಾಸ್‌ ನೀಡಿದರು ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT