ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋ ಇಂಡಿಯಾ–2023: ಆಹಾರ ಸಾಗಣೆಗೆ ಬಂದಿದೆ ಡ್ರೋನ್!

ಸ್ವಿಗ್ಗಿ ಆಹಾರ ಹೊತ್ತು ಸಾಗಲಿವೆ ಡ್ರೋನ್
Last Updated 16 ಫೆಬ್ರುವರಿ 2023, 6:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಿಗ್ಗಿ ಆ್ಯಪ್‌ನಲ್ಲಿ ಆಹಾರ ಪೂರೈಕೆಗೆ ಆರ್ಡರ್ ಮಾಡಿದರೆ ಅದನ್ನು ಮುಂದಿನ ದಿನಗಳಲ್ಲಿ ಹೊತ್ತು ಡೆಲಿವರಿ ಬಾಯ್ ತರುವುದಿಲ್ಲ, ಬದಲಿಗೆ ಡ್ರೋನ್ ಬರಲಿದೆ!

ಹೌದು, ಆಹಾರ ಹೊತ್ತು ಬರುವ ಡ್ರೋನ್ ಈಗ ಸಿದ್ಧವಾಗಿದೆ. ಗರುಡ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿರುವ ಡ್ರೋನ್, ಏರೋ ಇಂಡಿಯಾ–2023ರಲ್ಲಿ ಪ್ರದರ್ಶನಗೊಳ್ಳುತ್ತಿದೆ.

‘ಡೆಲಿವರಿ ಡ್ರೋನ್’ ಎಂದೇ ಇದಕ್ಕೆ ಹೆಸರಿಡಲಾಗಿದ್ದು, ಸದ್ಯಕ್ಕೆ 5 ಕೆ.ಜಿ ತೂಕ ಹೊರುವ ಸಾಮರ್ಥವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 10 ರಿಂದ 15 ಕೆ.ಜಿ ಸಾಮರ್ಥದ ಡ್ರೋನ್‌ ಅಭಿವೃದ್ಧಿಪಡಿಸುವ ಸಿದ್ಧತೆಯಲ್ಲೂ ಗರುಡ ಕಂಪನಿ ಇದೆ.

‘ಸ್ವಿಗ್ಗಿ ಜತೆಗೆ ಈ ಕಂಪನಿ ಮಾತುಕತೆ ನಡೆಸಿದ್ದು, 2 ಕಿಲೋ ಮೀಟರ್ ವ್ಯಾಪ್ತಿಯೊಳಗಿನ ಮನೆಗಳಿಗೆ ಆಹಾರ ಪೂರೈಕೆ ಮಾಡಲಿದೆ. ಮುಂದಿನ ದಿನಗಳಲ್ಲಿ 8 ಕಿಲೋ ಮೀಟರ್‌ ವ್ಯಾಪ್ತಿಗೂ ವಿಸ್ತರಿಸುವ ಸಾಮರ್ಥ್ಯ ಹೊಂದಲಿದ್ದೇವೆ. 18.8 ಕೆ.ಜಿ ತೂಕದ ಈ ಡ್ರೋನ್, ಸೆಕೆಂಡ್‌ಗೆ 10 ಮೀಟರ್‌ ವೇಗದಲ್ಲಿ ಸಾಗಲಿದೆ’ ಎಂದು ಕಂಪನಿಯ ಅಧಿಕಾರಿಗಳು ವಿವರಿಸುತ್ತಾರೆ.

200 ಮೀಟರ್ ಎತ್ತರದಲ್ಲಿ ಇದು ಹಾರಾಟ ನಡೆಸಲಿದ್ದು, ಯಾವುದೇ ಅಡೆತಡೆಗಳಲ್ಲಿದೆ ಸಾಗಲಿದೆ. ಇದಕ್ಕೆ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದ್ದು, ಎಲ್ಲಾ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ ಎಂದು ಕಂಪನಿಯ ಸಿಇಒ ಅಗ್ನೀಶ್ವರ್ ಜಯಪ್ರಕಾಶ್ ಹೇಳಿದರು.

ಆಹಾರ ಪದಾರ್ಥ ಮಾತ್ರವಲ್ಲದೇ ಔಷಧ ಪದಾರ್ಥಗಳ ಸಾಗಣೆಯನ್ನೂ ಮಾಡಬಹುದು. ಜತೆಗೆ ರಕ್ಷಣಾ ಕ್ಷೇತ್ರಕ್ಕೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಕುರಿತೂ ಮಾತುಕತೆ ನಡೆಯುತ್ತಿದೆ ಎಂದರು.

ಕೀಟನಾಶಕ ಸಿಂಪರಣೆಗೆ ಹಳ್ಳಿ–ಹಳ್ಳಿಗೂ ಡ್ರೋನ್
ಹಳ್ಳಿ–ಹಳ್ಳಿಗೂ ಡ್ರೋನ್ ಒದಗಿಸಲು ಗರುಡ ಕಂಪನಿ ಮುಂದಾಗಿದ್ದು, ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಒಂದು ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ಕಂಪನಿ ಸಂಪರ್ಕ ಮಾಡಿದೆ.

‘ರೈತರ ಜಮೀನಿನಲ್ಲಿ ಕೀಟನಾಶಕ ಸಿಂಪರಣೆ ಮಾಡಲು ಪ್ರತ್ಯೇಕ ಡ್ರೋನ್‌ ಅಭಿವೃದ್ಧಿಪಡಿಸಿದೆ. ದೇಶದಲ್ಲಿ 6.3 ಲಕ್ಷ ಹಳ್ಳಿಗಳಿದ್ದು, ಎಲ್ಲಾ ಹಳ್ಳಿಗಳಿಗೂ ಡ್ರೋನ್ ಪೂರೈಸುವ ಉದ್ದೇಶ ಇದೆ. ಡ್ರೋನ್ ಚಾಲನೆ ಮಾಡಲು ರಿಮೋಟ್‌ ಪೈಲೆಟ್‌ ತರಬೇತಿಯನ್ನೂ ಕಂಪನಿ ನೀಡಲಿದೆ. ರಿಮೋಟ್‌ ಪೈಲೆಟ್‌ ಟ್ರೈನಿಂಗ್‌ ಆರ್ಗನೈಸೇಷನ್(ಆರ್‌ಟಿಪಿಒ) ಕೂಡ ಕಂಪನಿ ಹೊಂದಿದೆ. ಹಳ್ಳಿಗೆ ಒಬ್ಬರಂತೆ 6.3 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ’ ಎಂದು ಕಂಪನಿಯ ಉಪಾಧ್ಯಕ್ಷ ರವಿಕುಮಾರ್ ಹೇಳಿದರು.

ಸರ್ಕಾರದಿಂದ ಇದಕ್ಕೆ ಸಬ್ಸಿಡಿ ದೊರಕಲಿದ್ದು, ಎಷ್ಟು ಮೊತ್ತ ಎಂಬುದು ಇನ್ನೂ ಅಂತಿಮವಾಗಿಲ್ಲ. ಬ್ಯಾಂಕ್ ಸಾಲವೂ ದೊರಕಲಿದೆ ಎಂದರು.

‘ನಮ್ಮ ಕಂಪನಿಯ ಎಲ್ಲಾ ಡ್ರೋನ್‌ಗಳಿಗೂ ಐಐಎಸ್‌ಸಿಯಿಂದ(ಭಾರತೀಯ ವಿಜ್ಞಾನ ಸಂಸ್ಥೆ) ತಾಂತ್ರಿಕ ಸಹಕಾರ ಪಡೆದುಕೊಳ್ಳಲಾಗಿದೆ. ಆ್ಯಪ್ ಆಧಾರಿತ ಟ್ಯಾಕ್ಸಿ ಬುಕ್‌ ಮಾಡುವ ಮಾದರಿಯಲ್ಲೇ ರೈತರು ಡ್ರೋನ್‌ ಬುಕ್ ಮಾಡಿ ಕರೆಸಿಕೊಳ್ಳಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT