ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.3 ರಿಂದ 7 ಏರೋ ಇಂಡಿಯಾ ಶೋ

ಕೋವಿಡ್‌ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಜತೆ ಪ್ರದರ್ಶನ
Last Updated 7 ಅಕ್ಟೋಬರ್ 2020, 19:18 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಫೆಬ್ರುವರಿ 3 ರಿಂದ 7ರವರೆಗೆ 13 ನೇ ಅಂತರರಾಷ್ಟ್ರೀಯ ಏರೋ ಇಂಡಿಯಾ–2021 ಕಾರ್ಯಕ್ರಮವನ್ನು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಡೆಸಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್‌ ಅವರ ಜತೆ ಏರೋ ಇಂಡಿಯಾ ಕುರಿತು ಬುಧವಾರ ‘ರಾಯಭಾರಿಗಳ ದುಂಡು ಮೇಜಿನ ವರ್ಚುವಲ್‌ ಸಭೆ’ ನಡೆಯಿತು.

ಫೆಬ್ರುವರಿ ವೇಳೆಗೆ ಕೋವಿಡ್‌ ಇಳಿಕೆಯಾಗಬಹುದು. ಆದರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ಬಂದವರಿಗೆ ಮಾತ್ರ ಪ್ರವೇಶ ನೀಡುವ ಬಗ್ಗೆಯೂ ಚರ್ಚೆ ನಡೆಯಿತು. ಏರೋ ಇಂಡಿಯಾದ ವೆಬ್‌ಸೈಟ್‌ಗೆ ಚಾಲನೆ ನೀಡಿದ ಕೂಡಲೇ ವಸ್ತುಪ್ರದರ್ಶನದಲ್ಲಿ ಮಳಿಗೆಗಳನ್ನು ಕಾಯ್ದಿರಿಸಲು ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಸಕಾರಾತ್ಮಕ ಬೆಳವಣಿಗೆ ಎಂದು ಯಡಿಯೂರಪ್ಪ ವಿವರಿಸಿದರು.

‘ಈವರೆಗೆ 12 ಏರೋ ಇಂಡಿಯಾ ಪ್ರದರ್ಶನಗಳನ್ನು ಕರ್ನಾಟಕ ಯಶಸ್ವಿಯಾಗಿ ನಡೆಸಿದ್ದು, 13 ನೇ ಏರೋ ಶೋಗೆ ಆತಿಥ್ಯ ವಹಿಸಲು ಕರ್ನಾಟಕವನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ವಿಚಾರ. ಕೋವಿಡ್‌ ಮಧ್ಯೆ ಈ ಕಾರ್ಯಕ್ರಮ ಹಮ್ಮಿಕೊಳ್ಳುವುದು ಒಂದು ಸವಾಲು’ ಎಂದು ಮುಖ್ಯಮಂತ್ರಿ ಹೇಳಿದರು.

ಭಾರತದ ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮಕ್ಕೆ ರಾಜ್ಯ ಶೇ 25 ರಷ್ಟು ಕೊಡುಗೆ ನೀಡಿದೆ. ಭಾರತದ ವೈಮಾನಿಕ ಉತ್ಪನ್ನಗಳಿಗೆ ಸಂಬಂಧಿಸಿದ ರಫ್ತಿಗೆ ಶೇ 65 ಮತ್ತುರಕ್ಷಣಾ ವಲಯದ ಸೇವೆಗಳಿಗಾಗಿ ಹೆಲಿಕಾಪ್ಟರ್‌, ಯುದ್ಧ ವಿಮಾನಗಳ ಉತ್ಪಾದನೆ
ಯಲ್ಲಿ ಶೇ 67 ರಷ್ಟು ಕೊಡುಗೆ ನೀಡುತ್ತಿದೆ ಎಂದರು.

ಶಾಂತಿಗಾಗಿ ಸಬಲ ರಕ್ಷಣಾ ನೀತಿ: ರಾಜನಾಥ್‌ ಸಿಂಗ್

‘ಶಾಂತಿಗಾಗಿ ರಕ್ಷಣಾ ಇಲಾಖೆಯನ್ನು ಇನ್ನಷ್ಟು ಸಬಲಗೊಳಿಸಲು ಪೂರಕವಾಗಿ ರಕ್ಷಣಾ ನೀತಿ ಅಳವಡಿಸಿಕೊಳ್ಳುವುದು ನಮ್ಮ ಉದ್ದೇಶ’ ಎಂದು ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಹೇಳಿದರು.

‘ಭಾರತವು ಅತಿದೊಡ್ಡ ರಕ್ಷಣಾ ಉತ್ಪಾದನಾ ವಲಯವನ್ನು ಹೊಂದಿದೆ. ಏರೋ ಇಂಡಿಯಾ 2021 ಮೂಲಕ ಭಾರತ ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮದಲ್ಲಿ ಮುಂಚೂಣಿಯ ಐದು ರಾಷ್ಟ್ರಗಳಲ್ಲಿ ಒಂದಾಗಿರಬೇಕು ಎನ್ನುವುದು ನಮ್ಮ ಆಶಯ’ ಎಂದು ಅವರು ತಿಳಿಸಿದರು.

‘ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯ ಸಕ್ರಿಯ ಭಾಗವಹಿಸುವಿಕೆಯಿಂದ ಭಾರತವನ್ನು ರಕ್ಷಣಾ ಉತ್ಪನ್ನಗಳ ಕೇಂದ್ರವಾಗಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಸಭೆಯಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್, ವಿವಿಧ ದೇಶಗಳ ರಾಯಭಾರಿಗಳು, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಮತ್ತು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT