ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾ ವಿದ್ಯಾರ್ಥಿಗಳ ಒಕ್ಕೂಟದ ಕಾನೂನು ಸಲಹೆಗಾರ ಗಡಿಪಾರು

ಮಾನವ ಕಳ್ಳ ಸಾಗಣೆ, ನಕಲಿ ದಾಖಲೆ ಸೃಷ್ಟಿ, ಅಕ್ರಮ ವಾಸ ಆರೋಪ
Last Updated 30 ಜುಲೈ 2022, 1:20 IST
ಅಕ್ಷರ ಗಾತ್ರ

ಬೆಂಗಳೂರು: ಮಾನವ ಕಳ್ಳ ಸಾಗಣೆ, ನಕಲಿ ದಾಖಲೆ ಸೃಷ್ಟಿ ಹಾಗೂ ಅಕ್ರಮ ವಾಸ ಆರೋಪದಡಿ ನಗರದಲ್ಲಿರುವ ಆಫ್ರಿಕಾ ವಿದ್ಯಾರ್ಥಿಗಳ ಒಕ್ಕೂಟದ ಕಾನೂನು ಸಲಹೆಗಾರ ಬಾಸ್ಕೊ ಕಾವೀಸ್ಸಿ ಅವರನ್ನು ಬಂಧಿಸಿ ದೇಶದಿಂದ ಗಡಿಪಾರು ಮಾಡಲಾಗಿದೆ.

‘ಉಗಾಂಡ ಪ್ರಜೆ ಬಾಸ್ಕೊ, 16 ವರ್ಷ 11 ತಿಂಗಳಿನಿಂದ ಭಾರತದಲ್ಲಿ ಅಕ್ರಮವಾಗಿ ವಾಸವಿದ್ದ. ವಿದೇಶಿ ಕಾಯ್ದೆಯಡಿ ಈತನನ್ನು ಬಂಧಿಸಲಾಗಿತ್ತು. ಜೈಲು ಶಿಕ್ಷೆಯೂ ಆಗಿತ್ತು. ದೇಶದಲ್ಲೇ ಅಕ್ರಮವಾಗಿ ನೆಲೆಸಿ, ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರಿಂದ ಗಡಿಪಾರು ಮಾಡಲಾಗಿದೆ. ಈತ ವಾಪಸು ದೇಶಕ್ಕೆ ಬಾರದಂತೆ ನಿಷೇಧ ಹೇರಲು ಕ್ರಮ ಕೈಗೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದರು.

‘ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ ಬಾಸ್ಕೊ, ಕಾಲೇಜೊಂದರಲ್ಲಿ ವ್ಯಾಸಂಗ ಮಾಡಿದ್ದ. 2005ರಲ್ಲಿ ವೀಸಾ ಅವಧಿ ಮುಗಿದರೂ ತನ್ನ ದೇಶಕ್ಕೆ ವಾಪಸು ಹೋಗಿರಲಿಲ್ಲ’ ಎಂದೂ ತಿಳಿಸಿದರು.

ನೋಟಿಸ್‌ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ: ‘2005ರಲ್ಲಿ ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಸ್ಕೊನನ್ನು ಬಂಧಿಸಲಾಗಿತ್ತು. ಈತನಿಗೆ ಆರು ತಿಂಗಳು ಜೈಲು ಶಿಕ್ಷೆಯೂ ಆಗಿತ್ತು. ಜೈಲಿನಿಂದ ಹೊರಬಂದ ನಂತರ ದೇಶ ತೊರೆಯುವಂತೆ ನೋಟಿಸ್‌ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಬಾಸ್ಕೊ, ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದ’ ಎಂದೂ ಹೇಳಿದರು.

‘ಭಾರತೀಯ ಯುವತಿಯನ್ನು ಮದುವೆಯಾಗಿದ್ದು, ಇಲ್ಲಿಯೇ ನೆಲೆಸಲು ಅನುಮತಿ ಕೊಡಿ’ ಎಂದು ಬಾಸ್ಕೊ ಕೋರಿದ್ದ. ಈತನ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದಾದ ನಂತರ, ಆರೋಪಿಯನ್ನು ಬಂಧಿಸಿ ತಾತ್ಕಾಲಿಕ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು’ ಎಂದೂ ತಿಳಿಸಿದರು.

ಒಕ್ಕೂಟದ ಮೂಲಕ ವಂಚನೆ: ‘ಭಾರತದ ಕಾನೂನು ತಿಳಿದುಕೊಂಡಿದ್ದ ಆರೋಪಿ, ಆಫ್ರಿಕಾ ವಿದ್ಯಾರ್ಥಿಗಳ ಒಕ್ಕೂಟದ ಕಾನೂನು ಸಲಹೆಗಾರನಾಗಿದ್ದ. ಆಫ್ರಿಕಾದಿಂದ ಭಾರತಕ್ಕೆ ಬರುವವರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸುತ್ತಿದ್ದ. ಡ್ರಗ್ಸ್ ಹಾಗೂ ಇತರೆ ಪ್ರಕರಣದಲ್ಲಿ ಸಿಕ್ಕಿಬೀಳುವವರಿಗೆ ಜಾಮೀನು ಕೊಡಿಸುತ್ತಿದ್ದ. ಈ ಮೂಲಕ ಕಾನೂನುಬಾಹಿರ ಚಟುವಟಿಕೆಯಲ್ಲೂ ತೊಡಗಿದ್ದ’ ಎಂದು ಪೊಲೀಸರು ಹೇಳಿದರು.

‘ಬಾಸ್ಕೊ ಬಳಿ ವಾಹನ ಚಾಲನಾ ಪರವಾನಗಿ ಪತ್ರ (ಡಿಎಲ್), ಲ್ಯಾಪ್‌ಟಾಪ್, ಬ್ಯಾಂಕ್‌ ಪಾಸ್‌ಪುಸ್ತಕ, ಕಂಪ್ಯೂಟರ್ ಜಪ್ತಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT