ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ರೈಲು ಪ್ರಯಾಣಕ್ಕೆ ನಿರಾಸಕ್ತಿ

Last Updated 21 ಜನವರಿ 2021, 17:41 IST
ಅಕ್ಷರ ಗಾತ್ರ

ಬೆಂಗಳೂರು: ಅತೀ ಕಡಿಮೆ ದರ ಮತ್ತು ಕಡಿಮೆ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಹುದಾದ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ. ಆದರೆ, ವಿಮಾನ ಪ್ರಯಾಣಿಕರು ರೈಲು ಪ್ರಯಾಣಕ್ಕೆ ನಿರಾಸಕ್ತಿ ತೋರಿದ್ದಾರೆ.

ವಿಮಾನ ನಿಲ್ದಾಣದ ಮಗ್ಗುಲಿನಲ್ಲೇ ರೈಲು ನಿಲ್ದಾಣವೊಂದನ್ನು ರೈಲ್ವೆ ಇಲಾಖೆ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿ ನಿರ್ಮಿಸಿವೆ. ಜ.4ರಿಂದ ಈ ನಿಲ್ದಾಣ ಕಾರ್ಯಾರಂಭಗೊಂಡಿದೆ. ₹10ರಿಂದ ₹15 ದರದಲ್ಲೇ ನಗರದಿಂದ ಈ ನಿಲ್ದಾಣವನ್ನು ಪ್ರಯಾಣಿಕರು ತಲುಪಬಹುದಾಗಿದೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಉಚಿತ ಬಸ್ ವ್ಯವಸ್ಥೆಯೂ ಇದೆ.

‘ರೈಲು ಸೇವೆ ಆರಂಭವಾದ 15 ದಿನಗಳ ಅವಧಿಯಲ್ಲಿ 150 ಪ್ರಯಾಣಿಕರು ಮಾತ್ರ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಒಬ್ಬ ಪ್ರಯಾಣಿಕರೂ ಇಲ್ಲದ 10ಕ್ಕೂ ಹೆಚ್ಚು ಟ್ರಿಪ್‌ಗಳನ್ನು ಕಾರ್ಯಾಚರಣೆ ಮಾಡಲಾಗಿದೆ. ಇಡೀ ರೈಲಿನಲ್ಲಿ ಒಬ್ಬ ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ಮಾಡಿರುವ ಉದಾಹರಣೆಗಳೂ ಇವೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಕೋವಿಡ್ ಕಾರಣದಿಂದ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗದ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ. ಇರುವ ಸಿಬ್ಬಂದಿಯೂ ರೈಲು ಸೇವೆ ಬಳಕೆ ಮಾಡುತ್ತಿಲ್ಲ. ವಿಮಾನ ಇಳಿದ ಬಳಿಕ ತಮ್ಮ ಬ್ಯಾಗ್‌ಗಳೊಂದಿಗೆ ಬಸ್ ಹತ್ತಿ ಮತ್ತೆ ಇಳಿದು ರೈಲಿನಲ್ಲಿ ಪ್ರಯಾಣಿಸಬೇಕು. ನಿಗದಿತ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಮತ್ತೊಂದು ಟ್ಯಾಕ್ಸಿ ಹಿಡಿದು ಮನೆಗೆ ಹೋಗುವ ಬದಲು, ವಿಮಾನ ನಿಲ್ದಾಣದಿಂದ ನೇರವಾಗಿ ಟ್ಯಾಕ್ಸಿಯಲ್ಲೇ ತೆರಳಲು ಬಯಸುತ್ತಿರಬಹುದು ಎಂದೂ ಹೇಳಿದರು.

‘ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಬೆಳಿಗ್ಗೆ 6ರಿಂದ 8 ಮತ್ತು ಸಂಜೆ 7ರಿಂದ 10ರ ತನಕ ರೈಲುಗಳ ಕಾರ್ಯಾಚರಣೆಗೆ ಆದ್ಯತೆ ನೀಡಲಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರವನ್ನೂ ಮಾಡಲಾಗಿದೆ. ನಿಗದಿತ ಅವಧಿಯೊಳಗೆ ವಿಮಾನ ನಿಲ್ದಾಣವನ್ನು ರೈಲುಗಳು ತಲುಪುತ್ತಿವೆ. ಸಮಯಪ್ರಜ್ಞೆ ಬಗ್ಗೆ ವಿಮಾನ ಪ್ರಯಾಣಿಕರಿಗೆ ಮನವರಿಕೆಯಾದರೆ ಕ್ರಮೇಣ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಬಹುದು’ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ರೈಲ್ವೆ ಹೋರಾಟಗಾರರ ಸಲಹೆ

ಪ್ರಯಾಣಿಕರನ್ನು ಸೆಳೆಯಲು ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ರೈಲ್ವೆ ಇಲಾಖೆ ಒಟ್ಟಾಗಿ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ರೈಲ್ವೆ ಹೋರಾಟಗಾರರು ಸಲಹೆ ನೀಡಿದ್ದಾರೆ.

ರೈಲು ಹೊರಡುವ ಮತ್ತು ತಲುಪುವ ಸಮಯ ಮತ್ತು ನಿಲ್ದಾಣವನ್ನು ಆಗಾಗ ಬದಲಿಸಬಾರದು. ಆಗ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಬಹುದು ಎಂದಿದ್ದಾರೆ.

‘ವಿಮಾನ ನಿಲ್ದಾಣ ಸಿಬ್ಬಂದಿಗೆ ಮಾಸಿಕ ಪಾಸ್ ವಿತರಣೆ ಬಗ್ಗೆ ಆಲೋಚಿಸಬೇಕು. ಆದರೆ, ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕಿರುವ ಕಾರಣ ಯಾವುದೇ ಕಾರಣಕ್ಕೂ ಪ್ರಯಾಣ ವಿಳಂಬ ಆಗದಂತೆ ಸಮಯ ಪ್ರಜ್ಞೆ ಕಾಪಾಡಿಕೊಳ್ಳಬೇಕು’ ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣನವರ್ ತಿಳಿಸಿದ್ದಾರೆ.

‘ಸಂಪೂರ್ಣ ಮಾರ್ಗವನ್ನು ವಿದ್ಯುದೀಕರಣಗೊಳಿಸಿ ಮೈಸೂರು, ಹೊಸೂರು, ವೈಟ್‌ಫೀಲ್ಡ್, ತುಮಕೂರು, ಕೆಎಸ್‌ಆರ್‌ ರೈಲು ನಿಲ್ದಾಣ, ಯಶವಂತಪುರದಿಂದ ಮೆಮು ರೈಲುಗಳ ಸಂಚಾರ ಆರಂಭಿಸಬೇಕು. ಅದರಲ್ಲಿ ಹವಾನಿಯಂತ್ರಿತ ಒಂದು ಬೋಗಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT