ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಮಾನ ನಿಲ್ದಾಣ ರಸ್ತೆ: ವಾಹನಗಳ ವೇಗಕ್ಕೆ ಕಡಿವಾಣ

Published 14 ಮೇ 2024, 16:17 IST
Last Updated 14 ಮೇ 2024, 16:17 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನಗಳು ಅತಿವೇಗವಾಗಿ ಚಲಿಸುತ್ತಿದ್ದು ಈ ಮಾರ್ಗದಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡಲು ನಗರ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಈ ರಸ್ತೆಯಲ್ಲಿ ಪ್ರತಿಗಂಟೆಗೆ 80 ಕಿ.ಮೀಗಿಂತ ಹೆಚ್ಚಿನದಲ್ಲಿ ವೇಗದಲ್ಲಿ ಚಲಿಸುವ ವಾಹನಗಳ ವಿರುದ್ಧ ಅತಿವೇಗದ ಚಾಲನೆ ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಲಾಗುವುದು ಎಂದು ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ.

‘ರಸ್ತೆ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಅತಿವೇಗದ ಚಾಲನೆಯನ್ನು ಪತ್ತೆ ಹಚ್ಚುವ ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಅತಿವೇಗದ ವಾಹನಗಳನ್ನು ಕಂಡುಹಿಡಿಯುವ ಸಾಮರ್ಥ್ಯ ಹೊಂದಿವೆ’ ಎಂದು ಪೊಲೀಸರು ಹೇಳಿದರು.

‘ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ವರ್ಷದ ಜನವರಿ 1ರಿಂದ ಏಪ್ರಿಲ್‌ 30ರ ವರೆಗೆ 322 ಅಪಘಾತಗಳು ಸಂಭವಿಸಿವೆ. ಇದರಲ್ಲಿ 30 ಮಂದಿ ಮೃತಪಟ್ಟಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ವಾಹನ ಸಂಚಾರ ನಿರ್ಬಂಧ:

ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ಮೇಲ್ಸೇತುವೆಯ ಕೆಆರ್‌ ಪುರ ಅಪ್‌ ರ್‍ಯಾಂಪ್‌ ಅನ್ನು ಮುಚ್ಚಲಾಗಿದ್ದು, ಮಂಗಳವಾರದಿಂದ ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ಎಲ್ಲ ಮಾದರಿ ವಾಹನಗಳ ಸಂಚಾರವನ್ನು ಮೇಲ್ಸೇತುವೆಯಲ್ಲಿ ನಿರ್ಬಂಧಿಸಲಾಗಿದೆ.

ಏಪ್ರಿಲ್‌ 17ರಿಂದ ಕೆ.ಆರ್.ಪುರ ಲೂಪ್‌ ಸೇರುವ ಟ್ರ್ಯಾಕ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ ಎಲ್ಲ ಮಾದರಿ ವಾಹನ ಸಂಚಾರವನ್ನು ಈ ಹಿಂದೆ ನಿರ್ಬಂಧಿಸಲಾಗಿತ್ತು.

ಪರ್ಯಾಯ ಮಾರ್ಗ:

ನಾಗವಾರ (ಹೊರವರ್ತುಲ ರಸ್ತೆ) ಕಡೆಯಿಂದ ನಗರದ ಒಳಗೆ ಮೇಖ್ರಿ ವೃತ್ತದ ಮೂಲಕ ಸಂಚರಿಸುವ ವಾಹನಗಳು ಹೆಬ್ಬಾಳ ವೃತ್ತದಲ್ಲಿ ಮೇಲ್ಸೇತುವೆ ಕೆಳಗಿನ ರಸ್ತೆಯಿಂದ ಬಲಕ್ಕೆ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್‌ ಬಳಿ ಯೂಟರ್ನ್‌ ಪಡೆದು, ಸರ್ವಿಸ್‌ ರಸ್ತೆಯಿಂದ ಹೆಬ್ಬಾಳ ಮೇಲ್ಸೇತುವೆ ರ್‍ಯಾಂಪ್‌ ಮೂಲಕ ನಗರದ ಕಡೆಗೆ ಚಲಿಸಬಹುದು.

ಕೆ.ಆರ್‌.ಪುರಂ ನಾಗವಾರದ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ಐಒಸಿ ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ, ನಾಗವಾರ, ಟ್ಯಾನರಿ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದಾಗಿದೆ.

ಹೆಗಡೆನಗರ–ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜೆಕೆವಿಕೆ ಜಕ್ಕೂರು ರಸ್ತೆಯ ಮೂಲಕ ನಗರ ಪ್ರವೇಶಿಸಬಹುದು.

ಕೆ.ಆರ್‌.ಪುರ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಮೇಲ್ಸೇತುವೆ ಕೆಳಗಿನ ರಸ್ತೆಯಿಂದ ನೇರವಾಗಿ ಬಿಇಎಲ್‌ ವೃತ್ತ ತಲುಪಿ, ಎಡಕ್ಕೆ ತಿರುವು ಪಡೆದು ಸದಾಶಿವನಗರ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಐಐಎಸ್‌ಸಿ ಮೂಲಕ ಚಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT