ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಫೆ.1ರಿಂದ ‘ಅಖಿಲ ಭಾರತೀಯ ಕಲಾಸಾಧಕ ಸಂಗಮ’

‘ಸಮರಸತೆ’ ಪರಿಕಲ್ಪನೆಯಡಿ ಸಂಸ್ಕಾರ ಭಾರತಿ ಆಯೋಜನೆ
Published 28 ಜನವರಿ 2024, 15:41 IST
Last Updated 28 ಜನವರಿ 2024, 15:41 IST
ಅಕ್ಷರ ಗಾತ್ರ

ಬೆಂಗಳೂರು: ಸಂಸ್ಕಾರ ಭಾರತಿ ಕರ್ನಾಟಕವು ಫೆ.1 ರಿಂದ 4ರವರೆಗೆ ನಗರದ ಆರ್ಟ್‌ ಆಫ್‌ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ‘ಅಖಿಲ ಭಾರತೀಯ ಕಲಾಸಾಧಕ ಸಂಗಮ’ ಕಾರ್ಯಕ್ರಮವನ್ನು ಆಯೋಜಿಸಿದೆ.‌

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಕಾರ ಭಾರತಿಯ ಅಖಿಲ ಭಾರತ ಮಹಾಮಂತ್ರಿ ಅಶ್ವಿನ್ ದಲ್ವಿ, ‘ಈ ಕಾರ್ಯಕ್ರಮವನ್ನು ‘ಸಮರಸತೆ’ ಎಂಬ ಪರಿಕಲ್ಪನೆಯಡಿ ಆಯೋಜಿಸಲಾಗುತ್ತಿದ್ದು, ದೇಶದ ವಿವಿಧೆಡೆಯಿಂದ 2,500ಕ್ಕೂ ಹೆಚ್ಚು ಕಲಾಸಾಧಕರು ಬರಲಿದ್ದಾರೆ. ಫೆ.1ರ ಸಂಜೆ 4.30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜನಪದ ಕಲಾವಿದೆ ಮಂಜಮ್ಮ ಜೋಗತಿ, ಇತಿಹಾಸ ತಜ್ಞ ವಿಕ್ರಮ ಸಂಪತ್ ಮತ್ತು ತಬಲಾ ವಿದ್ವಾಂಸ ಪಂಡಿತ್‌ ರವೀಂದ್ರ ಯಾವಗಲ್‌ ಮತ್ತು ವಿಜಯನಗರ ರಾಜ ವಂಶಸ್ಥ ಕೃಷ್ಣದೇವರಾಯ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಪ್ರತಿ ನಿತ್ಯ ಲೋಕನೃತ್ಯ, ವಿಚಾರ ಸಂಕಿರಣ, ಚಿತ್ರಕಲೆ, ಹಸ್ತಪ್ರತಿ, ರಂಗೋಲಿ ಕಲಾ ಪ್ರದರ್ಶನಗಳಿರುತ್ತವೆ. ಇವುಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಫೆ.3ರಂದು ಚಿತ್ರಕಲಾವಿದ ವಿಜಯ ದಶರಥ್ ಅಚ್ರೆಕರ್ ಮತ್ತು ಜನಪದ ಕಲಾವಿದ ಗಣಪತ್ ಸಖಾರಾಮ ಮಸಗೆ ಅವರಿಗೆ ‘ಭರತಮುನಿ ಸಮ್ಮಾನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದು ವಿವರಿಸಿದರು.  

‘ಫೆ.4ರ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್, ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್ ಗುರೂಜಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಸಂಸ್ಕಾರ ಭಾರತಿ–ಕರ್ನಾಟಕ ಪ್ರಾಂತಾಧ್ಯಕ್ಷ ಸುಚೇಂದ್ರ ಪ್ರಸಾದ್, ಕೋಶಾಧ್ಯಕ್ಷ ಜಗದೀಶ್ ಟಿ. ಆರ್. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT