ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆಲಮಂಗಲ | ರೈತರ ಸಮಸ್ಯೆ ನಿರ್ಲಕ್ಷ್ಯ: ತಾಲ್ಲೂಕು ಕಚೇರಿಗೆ ಮುತ್ತಿಗೆ ಯತ್ನ

Published 27 ನವೆಂಬರ್ 2023, 15:45 IST
Last Updated 27 ನವೆಂಬರ್ 2023, 15:45 IST
ಅಕ್ಷರ ಗಾತ್ರ

ನೆಲಮಂಗಲ: ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದವರು ಜಂಟಿಯಾಗಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಬ್ಬು, ಭತ್ತದ ಹುಲ್ಲು, ನೇಗಿಲನ್ನು ಹೊತ್ತು ಪ್ರವಾಸಿಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ರೈತರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದನ್ನು ತಡೆಯಲು ಮುಂದಾದ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ ಉಂಟಾಯಿತು. ತಾಲ್ಲೂಕು ಕಚೇರಿಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ತಡೆದು, ಗೇಟ್‌ ಎಳೆದು ಬೀಗ ಹಾಕಿದರು. ಗೇಟ್‌ ಎದುರೇ ಕುಳಿತ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘ರೈತರನ್ನು ವಂಚಿಸುವ ದಲ್ಲಾಳಿಗಳು ಮತ್ತು ಭೂಮಾಫಿಯಾದವರೊಂದಿಗೆ ಅಧಿಕಾರಿಗಳು ಕೈ ಜೋಡಿಸುತ್ತಿದ್ದಾರೆ. ರೈತರ ಕಂದಾಯ ದಾಖಲೆಗಳನ್ನು ಸರಿಪಡಿಸುವ ಬದಲಿಗೆ, ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಅರುಂಧತಿ ಅವರನ್ನು ‘ಪ್ರತಿಭಟನೆ ಆಯೋಜಿಸಿರುವುದು ಗೊತ್ತಿದ್ದರೂ ಇದೇ ದಿನ ರಾಷ್ಟ್ರೀಯ ಕಿಸಾನ್‌ ಸಂಘದ ಜೊತೆ ಸಭೆ ಇಟ್ಟುಕೊಂಡು ನಾಟಕವಾಡುತ್ತಿದ್ದೀರಿ’ ಎಂದರು.

ನಂತರ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಎಂ.ಶ್ರೀನಿವಾಸ್‌, ’ಡಿ.4 ರಂದು ಜಿಲ್ಲಾಧಿಕಾರಿಯವರು ನೆಲಮಂಗಲದಲ್ಲಿ ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಪರಿಹರಿಸುವರು’ ಎಂದು ಭರವಸೆ ನೀಡಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ನಂತರ ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

ತಾಲೂಕು ಅಧ್ಯಕ್ಷ ರಾಜೇಶ್, ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ರವೀಂದ್ರ, ಜಗದೀಶ್, ಸೋಮಶೇಖರ್, ಅತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT