ಮಂಗಳವಾರ, ಮಾರ್ಚ್ 2, 2021
26 °C
ವಲಸಿಗರಿಗೆ ರೈಲು ನೀಡಿ– ಟ್ವಿಟರ್‌ನಲ್ಲಿ ಕೂಗು

ತಾವೇ ಕಟ್ಟಿದ ನಗರದಲ್ಲಿ ಕೈದಿಗಳಾಗಿದ್ದಾರೆ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಾವೇ ಕಟ್ಟಿದ ನಗರದಲ್ಲಿ ಕೈದಿಗಳಾಗಿದ್ದಾರೆ ಕಾರ್ಮಿಕರು. ವಲಸೆ ಕಾರ್ಮಿಕರಿಗೆ ಆಹಾರವಿಲ್ಲ, ವೇತನವಿಲ್ಲ. ಲಾಕ್‌ಡೌನ್‌ ಮಾಡಿ ಕಾರ್ಮಿಕರ ಘನತೆ ಕಿತ್ತುಕೊಂಡಿರಿ. ಈಗಲಾದರೂ ವಲಸಿಗರ ಅಳಲು ಆಲಿಸಿ, ಸಾರಿಗೆ ವ್ಯವಸ್ಥೆ ಮಾಡಿ..

ಟ್ವಿಟರ್‌ನಲ್ಲಿ ಗುರುವಾರ ಮೊಳಗಿದ ಕೂಗು ಇದು. ವಲಸೆ ಕಾರ್ಮಿಕರು ಊರಿಗೆ ಮರಳುವುದಕ್ಕೆ ವ್ಯವಸ್ಥೆಗೊಳಿಸಿದ್ದ ರೈಲನ್ನು ರದ್ದುಪಡಿಸಿದ ಹಾಗೂ ಕಾರ್ಮಿಕರು ನಗರದಲ್ಲೇ ಉಳಿಯುವಂತೆ ಒತ್ತಡ ಹೇರಿದ ಸರ್ಕಾರದ ಕ್ರಮವನ್ನು ಖಂಡಿಸಿ ಸಾವಿರಾರು ಮಂದಿ ಟ್ವಿಟರ್‌ ಮೂಲಕ ಆಕ್ರೋಶ ಹೊರಹಾಕಿದರು.

‘ನಾವು ಭಾರತೀಯರು’ ಹಾಗೂ ‘ವಲಸೆ ಕಾರ್ಮಿಕರ ಘನತೆಗಾಗಿ ಕರ್ನಾಟಕ’ದ ಆಶ್ರಯದಲ್ಲಿ ಹಮ್ಮಿಕೊಂಡ ಈ ಟ್ವಿಟರ್‌ ಅಭಿಯಾನಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಯಿತು. #ವಲಸಿಗರಿಗೆರೈಲುನೀಡಿ ಹಾಗೂ #TrainsForMigrantsNow ಹ್ಯಾಷ್‌ಟ್ಯಾಗ್‌ಗಳಲ್ಲಿ ಸಾವಿರಾರು ಟ್ವೀಟ್‌ಗಳು ಹರಿದಾಡಿದವು.

ವಲಸೆ ಕಾರ್ಮಿಕರು ಜೀತದಾಳುಗಳಲ್ಲ. ಅವರು ಈ ನಗರವನ್ನು ಕಟ್ಟಲು ಸುರಿಸಿದ ಬೆವರಿಗಾದರೂ ಬೆಲೆ ನೀಡಿ, ಅವರನ್ನು ಊರಿಗೆ ಮರಳಲು ಬಿಡಿ ಎಂದು ಅನೇಕರು ಒತ್ತಾಯಿಸಿದರು. ಕೆಲವರು ಸರ್ಕಾರದ ನಿಲುವನ್ನು ಖಂಡಿಸಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸಿ ಆ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡರು.

ಕಾರ್ಮಿಕರು ಮರಳುವುದಕ್ಕೆ ನಾವೇಕೆ ಬಿಡಬೇಕು ಎಂದು ಸುಶಿಕ್ಷಿತರು ಕೇಳುತ್ತಿದ್ದಾರೆ. ನಾವು ಆರ್ಥಿಕತೆಯನ್ನು ಮತ್ತೆ ಕಟ್ಟುವುದೆಂತು ಎಂದು ಸರ್ಕಾರ ಕೇಳುತ್ತಿದೆ. ಅಗ್ಗದ ಕೂಲಿಯೇ ಆರ್ಥಿಕತೆಯ ಬುನಾದಿ. 2020ರಲ್ಲಿ ಜೀತ ವಾಸ್ತವವಾಗುತ್ತಿದೆ ಎಂದು ಕೆಲವರು ಬೇಸರ ತೋಡಿಕೊಂಡರು.

ಒಟ್ಟು 7,254 ಮಂದಿ ಈ ಟ್ವಿಟರ್‌ ಅಭಿಯಾನಕ್ಕೆ ಕೈಜೋಡಿಸಿದ್ದರು. ಈ ಹ್ಯಾಷ್‌ಟ್ಯಾಗ್‌ಗಳಲ್ಲಿ 10 ಸಾವಿರಕ್ಕೂ ಅಧಿಕ ಟ್ವೀಟ್‌ಗಳು ಹರಿದಾಡಿದವು ಎಂದು ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ ಸಿಟಿಜನ್ಸ್‌ ಫಾರ್ ಬೆಂಗಳೂರು ಸಂಘಟನೆಯ ಶ್ರೀನಿವಾಸ ಅಲವಿಲ್ಲಿ ತಿಳಿಸಿದರು.

ಟ್ವಿಟ್ಟಿಗರ ಒತ್ತಾಯಕ್ಕೆ ಮಣಿದ ಸರ್ಕಾರ ವಿಶೇಷ ರೈಲು ರದ್ದುಪಡಿಸಿದ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕಾಯಿತು.

‘ನಾವು ಆರಂಭಿಸಿದ ಟ್ವಿಟರ್‌ ಅಭಿಯಾನಕ್ಕೆ ಇಷ್ಟೊಂದು ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಈ ಅಭಿಯಾನ ಹಾಗೂ ಕಾರ್ಮಿಕರ ಹೋರಾಟ ಯಶಸ್ವಿಯಾಗಿದೆ. ಸರ್ಕಾರ ಕೊನೆಗೂ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದೆ’ ಎಂದು ‘ನಾವು ಭಾರತೀಯರು’ ಸಂಘಟನೆಯ ವಿನಯ್‌ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಡೆದೇ ಊರಿನತ್ತ ಹೊರಟ ಕಾರ್ಮಿಕರು
ಸರ್ಕಾರ ವಿಶೇಷ ರೈಲನ್ನು ರದ್ದುಪಡಿಸಿದ್ದರಿಂದ ಆತಂಕಗೊಂಡ ಅನ್ಯರಾಜ್ಯಗಳ ನೂರಾರು ಕಾರ್ಮಿಕರು ಗಂಟು ಮೂಟೆ ಕಟ್ಟಿಕೊಂಡು ನಡೆದುಕೊಂಡೇ ಊರಿನತ್ತ ಹೊರಟರು. ಬಳ್ಳಾರಿ ರಸ್ತೆಯುದ್ದಕ್ಕೂ ಕಾರ್ಮಿಕರು ನಡೆದುಕೊಂಡು ಹೋಗುತ್ತಿರುವ ದೃಶ್ಯ ಗುರುವಾರ ಕಂಡು ಬಂತು.

ಊರು ಸೇರಲು ನೂರಾರು ಕಿಲೋಮೀಟರ್‌ ನಡೆಯಬೇಕಾಗುತ್ತದೆ ಎಂದು ತಿಳಿದಿದ್ದರೂ ಅವರು ಬೇರೆ ವಿಧಿ ಇಲ್ಲದೇ ನಡಿಗೆಯ ಮೊರೆ ಹೋದರು. ‘ನಮ್ಮ ಕೈಯಲ್ಲಿ ಕಾಸಿಲ್ಲ. ಇಲ್ಲಿ ಊಟಕ್ಕೂ ಗತಿಯಿಲ್ಲ. ಹೇಗಾದರೂ ಊರು ಸೇರಿದರೆ ಸಾಕು’ ಎಂದು ಜಾರ್ಖಂಡ್‌ನ ಕಾರ್ಮಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಸರ್ಕಾರ ವಿಶೇಷ ರೈಲು ಸೇವೆಯನ್ನು ಮತ್ತೆ ಆರಂಭಿಸಬಹುದು. ಒಂದೆರಡು ದಿನ ಕಾಯಿರಿ ಎಂದು ಸಮಾಧಾನ ಹೇಳಿದರೂ ವಲಸೆ ಕಾರ್ಮಿಕರು ನಂಬುವ ಸ್ಥಿತಿಯಲ್ಲಿಲ್ಲ. ಸರ್ಕಾರ ವಲಸೆ ಕಾರ್ಮಿಕರ ವಿಚಾರದಲ್ಲಿ ಇಷ್ಟು ಕಠೋರವಾಗಿ ನಡೆದುಕೊಳ್ಳಬಾರದಿತ್ತು’ ಎಂದು ವಿನಯ ಶ್ರೀನಿವಾಸ್‌ ಬೇಸರ ವ್ಯಕ್ತಪಡಿಸಿದರು.

ಗಮನ ಸೆಳೆದ ಟ್ವೀಟ್‌ಗಳು

ನೀವು ಹೇಳಿದಿರೆಂದು ನಾವು ದೀಪ ಬೆಳಗಿದೆವು
ನೀವು ಹೇಳಿದಿರೆಂದು ನಾವು ತಟ್ಟೆ, ಜಾಗಟೆ ಬಾರಿಸಿದೆವು
ಈಗ ನಾವು ಕೇಳುತ್ತಿದ್ದೇವೆ–ನಮ್ಮನ್ನು ಮನೆಗೆ ಮರಳಲು ಬಿಡಿ
–ಸ್ವಾತಿ ಶಿವಾನಂದ್‌

***

ತವರು ಬಿಟ್ಟು ನಾ ಬಂದೆ
ನಿಮಗೆ ಮನೆ ಕಟ್ಟಲು ಗುಡಿ ಕಟ್ಟಲು
ಕಷ್ಟಪಟ್ಟು ದುಡಿದಿರುವೆ ನಿಮ್ಮ ಆಜ್ಞೆಯಂತೆ
ನಾನೆಂದೂ ನಿಮ್ಮ ಕೇಳಲಿಲ್ಲ ಹೊಟ್ಟೆ ತುಂಬಾ ಊಟ ಮೈತುಂಬಾ ಬಟ್ಟೆ
ಇಂದು ನಾ ಕಟ್ಟಿರುವ ಈ ಕಾಂಕ್ರೀಟ್‌ ಕಾಡಿನಲ್ಲಿ ಬಂಧಿಯಾಗಿರುವೆ
ನಾನು ಕೈದಿಯಲ್ಲ, ನಾನೇನೂ ತಪ್ಪು ಮಾಡಿಲ್ಲ
ವಲಸೆ, ಕೆಲಸ ಎರಡೂ ನನ್ನ ಹಕ್ಕು
ನನ್ನ ಹಕ್ಕನ್ನು ಕಿತ್ತುಕೊಳ್ಳಬೇಡಿ
ದಯವಿಟ್ಟು ನನ್ನ ತವರಿಗೆ ಮರಳಲು ಬಿಡಿ
– ಅರ್ಚನಾ ಕೆ.ಆರ್‌.

**
ಸಾಲಿನಲ್ಲಿ ನಿಂತು ಸೋತು ಹೋಗಿದ್ದೇವೆ
ವೈರಾಣುವಿನ ಕುರಿತು ಭೀತರಾಗಿದ್ದೇವೆ
ಅದಕ್ಕಿಂತಲೂ ಹೆಚ್ಚಾಗಿ ಹಸಿವಿನಿಂದ ಕಂಗೆಟ್ಟಿದ್ದೇವೆ
ನಮ್ಮ ಪ್ರೀತಿಪಾತ್ರರ ಜೊತೆ ಇರಬಯಸುವೆವು
ಈಗಲೇ ಮನೆಗೆ ಮರಳಲು ಬಯಸುವೆವು
ಬಿಲ್ಡರ್‌ಗಳ ಲಾಬಿಗೆ ಕೊನೆ ಹೇಳಿ, ನಮ್ಮ ಹಕ್ಕು ನಮಗೆ ಕೊಡಿ
–ಶ್ರೀನಿವಾಸ ಅಲವಿಲ್ಲಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು