ಗುರುವಾರ , ಮೇ 13, 2021
39 °C
ಪೌರಕಾರ್ಮಿಕರಿಗೆ ಮುಖ್ಯಮಂತ್ರಿಯಿಂದ ಸಾಂಕೇತಿಕವಾಗಿ ಸಮವಸ್ತ್ರ, ಸುರಕ್ಷಾ ಧಿರಿಸು ವಿತರಣೆ

‘ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್‌ ಮಂತ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಮಾನತೆಯ ಸಮಾಜಕ್ಕಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದಂಥ ಮೂರು ಮಂತ್ರಗಳನ್ನು ಶೋಷಿತ ವರ್ಗಕ್ಕೆ ಅಂಬೇಡ್ಕರ್ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಡಾ. ಬಿ.ಆರ್‌ ಅಂಬೇಡ್ಕರ್‌ ಅವರ 130ನೇ ಜಯಂತಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘ಅಂಬೇಡ್ಕರ್‌ ಜಾತಿ ಮತ್ತು ಮೇಲು-ಕೀಳು ವ್ಯವಸ್ಥೆಯನ್ನು ಮೀರಿ ಆಧುನಿಕ ಭಾರತ ಕಟ್ಟುವ ಹಾಗೂ ಮಹಿಳಾ ಸಮಾನತೆ ಎತ್ತಿಡಿಯುವ ಮೂಲಕ ಸಮಾನತೆಯ ಕನಸು ಕಂಡಿದ್ದರು’ ಎಂದರು.

ಬಿಬಿಎಂಪಿ ವತಿಯಿಂದ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ಸಮವಸ್ತ್ರ ಮತ್ತು ಸುರಕ್ಷತಾ ಧಿರಿಸುಗಳನ್ನು ಮುಖ್ಯಮಂತ್ರಿ ವಿತರಿಸಿದರು. ಒಟ್ಟು 18 ಸಾವಿರ ಪೌರ ಕಾರ್ಮಿಕರಿಗೆ ಹೊಸ ಸಮವಸ್ತ್ರ ಮತ್ತು ಸುರಕ್ಷತಾ ಧಿರಿಸು ವಿತರಿಸುವ ಯೋಜನೆಯನ್ನು ಬಿಬಿಎಂಪಿ ಜಾರಿಗೊಳಿಸಿದೆ. ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಇದ್ದರು.

ಸಂವಿಧಾನವು ಭಗವದ್ಗೀತೆ, ಬೈಬಲ್, ಕುರಾನ್: ಕೆಪಿಸಿಸಿ ಕಚೇರಿಯಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಅಂಬೇಡ್ಕರ್ ಕೊಟ್ಟ ಸಂವಿಧಾನವೆ ನಮ್ಮ ಪಾಲಿಗೆ ಭಗವದ್ಗೀತೆ, ಬೈಬಲ್ ಹಾಗೂ ಕುರಾನ್. ಅದನ್ನು ಬದಲಿಸಬೇಕೆಂದು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ. ನಾವೆಲ್ಲಾ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಬದುಕಬೇಕು’ ಎಂದರು. ಪಕ್ಷದ ಮುಖಂಡ ಕೆ.ಎಚ್. ಮುನಿಯಪ್ಪ ಜೊತೆಗಿದ್ದರು.

ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಮತ್ತು ಪಕ್ಷದ ಎಸ್‌ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಭಾಗವಹಿಸಿದ್ದರು.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಮುಖ್ಯ ಆಯುಕ್ತ ಗೌರವ್ ಗುಪ್ತ ಮಾಲಾರ್ಪಣೆ ಮಾಡಿದರು. ವಲಯ ಆಯುಕ್ತರಾದ ಡಿ.ರಂದೀಪ್,  ಮನೋಜ್ ಜೈನ್, ರವೀಂದ್ರ, ರಾಜೇಂದ್ರ ಚೋಳನ್, ರೆಡ್ಡಿ ಶಂಕರ ಬಾಬು, ತುಳಸಿ ಮದ್ದಿನೇನಿ ಮತ್ತಿತರರು ಇದ್ದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲಪತಿ (ಪ್ರಭಾರ) ಪ್ರೊ.ಎನ್ ನರಸಿಂಹಮೂರ್ತಿ ಮಾತನಾಡಿ, ‘ಅಂಬೇಡ್ಕರ್ ತಮ್ಮ ಜೀವಿತ ಅವಧಿಯಲ್ಲಿ ಎಲ್ಲರನ್ನೂ ವಿಶೇಷವಾಗಿ ಮನದಲ್ಲಿ ಇಟ್ಟುಕೊಂಡು ಹೋರಾಟ ಮಾಡಿದವರು’ ಎಂದರು. ಕುಲಸಚಿವರಾದ ಆರತಿ ಆನಂದ್, ಬಿ. ರಮೇಶ್, ವಿತ್ತಾಧಿಕಾರಿ ವೆಂಕಟೇಶ ಮೂರ್ತಿ, ಸಿಂಡಿಕೇಟ್ ಸದಸ್ಯರು, ವಿಭಾಗಗಳ ಮುಖ್ಯಸ್ಥರು ಇದ್ದರು.

ಮೈಸೂರು ರಸ್ತೆಯ ಆವಲಹಳ್ಳಿ ಪಟೇಲ್ ಗುಳ್ಳಪ್ಪ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಬಿ.ಎಂ. ಪಟೇಲ್ ಪಾಂಡು ವಿಶೇಷ ಉಪನ್ಯಾಸ ನೀಡಿದರು. ಕಾಲೇಜು ವಿಶೇಷಾಧಿಕಾರಿ ಬಿ.ಪಿ. ಹರ್ಷ, ಕಾಲೇಜಿನ ಉಪನ್ಯಾಸಕರು ಇದ್ದರು.

ಮೀಸಲು ಸರ್ವ ಜನಾಂಗದ ಹಕ್ಕು: ‘ಮೀಸಲು ಕೇವಲ ಒಂದೇ ಜಾತಿಗೆ ಸೀಮಿತವಲ್ಲ. ಅದು ಈ ದೇಶದ ಪ್ರತಿಯೊಬ್ಬ ಜನಾಂಗದ ಹಕ್ಕು’ ಎಂದು ಪಾಂಚಜನ್ಯ ವಿದ್ಯಾ ಪೀಠದ ಕಾರ್ಯದರ್ಶಿ ಎ. ಆರ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪಾಂಚಜನ್ಯ ವಿದ್ಯಾಪೀಠ ಟ್ರಸ್ಟ್ ಆಯೋಜಿಸಿದ್ದ ವಿಶ್ವ ಜ್ಞಾನ ದಿನ ಹಾಗೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಟ್ರಸ್ಟ್‌ನ ಖಜಾಂಜಿ ಡಾ. ಉಮೇಶ್ ಮಾತನಾಡಿ, ‘ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿರುವುದು ನಮ್ಮ ಹೊಣೆ’ ಎಂದರು. ಪಿವಿಪಿ ಶಾಲಾ ಕಾಲೇಜು, ಪಿವಿಪಿ ಪಾಲಿಟೆಕ್ನಿಕ್, ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯ ಈ ಮೂರು ಕಡೆ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು‌. ಕಾರ್ಯಕ್ರಮದಲ್ಲಿ ಶಿವಾನಂದ್ ಅವರ 6 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು