ಗುರುವಾರ , ಜನವರಿ 27, 2022
21 °C

ತೆರವಾಗದ ತ್ಯಾಜ್ಯ: ರಸ್ತೆ ಬಂದ್‌ ಮಾಡಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸುಮಾರು 6 ತಿಂಗಳಿಂದ ರಸ್ತೆ ಬದಿಯಲ್ಲೇ ಕೊಳೆತು ನಾರುತ್ತಿದ್ದ ತ್ಯಾಜ್ಯವನ್ನು ಹಲವು ಬಾರಿ ಮನವಿ ಮಾಡಿದರೂ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸದ್ದಕ್ಕೆ ಆಕ್ರೋಶಗೊಂಡ ಮೈಸೂರು ರಸ್ತೆ ಆನಂದಪುರ ನಿವಾಸಿಗಳು ಭಾನುವಾರ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಸಿಸಿಬಿ ಕಚೇರಿಯಿಂದ ಸಿರ್ಸಿ ವೃತ್ತದವರೆಗೆ ರಸ್ತೆಯ ಎರಡು ಬದಿಗಳಲ್ಲೂ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ಸಂಚಾರ ನಿರ್ಬಂಧಿಸಿದ ಪ್ರತಿಭಟನಕಾರರು ಸ್ಥಳೀಯ ಶಾಸಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿರುವುದರಿಂದ ಶಾಲೆ, ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಮಾರುದ್ದದವರೆಗೂ ಗುಂಡಿಗಳು ಬಿದ್ದಿದ್ದು, ದ್ವಿಚಕ್ರವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಹಲವರು ಗುಂಡಿ ತಪ್ಪಿಸುವ ಭರದಲ್ಲಿ ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡಿರುವ ಸಾಕಷ್ಟು ನಿದರ್ಶನಗಳೂ ಇವೆ’ ಎಂದು ಪ್ರತಿಭಟನಕಾರರು ದೂರಿದರು.

‘ಕೊಳೆಗೇರಿ ನಿವಾಸಿಗಳು ಎಂಬ ಕಾರಣಕ್ಕೆ ನಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ತಾತ್ಸಾರ ತೋರುತ್ತಾರೆ. ತ್ಯಾಜ್ಯದಿಂದ ಹೊರಸೂಸುವ ಗಬ್ಬು ವಾಸನೆಯಿಂದಾಗಿ ಉಸಿರಾಡುವುದಕ್ಕೂ ಕಷ್ಟವಾಗುತ್ತಿದೆ. ಮಕ್ಕಳು ಸಾಂಕ್ರಾಮಿಕ ರೋಗಗಳಿಗೂ ತುತ್ತಾಗುತ್ತಿದ್ದಾರೆ’ ಎಂದೂ ಆರೋಪಿಸಿದರು.

‘ಆರು ತಿಂಗಳಿಂದ ಒಳಚರಂಡಿ ಸ್ವಚ್ಛಗೊಳಿಸಿಲ್ಲ. ರಸ್ತೆಯಲ್ಲೆಲ್ಲಾ ತ್ಯಾಜ್ಯ ಹರಡಿಕೊಂಡಿದೆ. ಹೀಗಾಗಿ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಶಾಸಕರು, ಅಧಿಕಾರಿಗಳು ಈ ಮಾರ್ಗದಲ್ಲೇ ಹಾದು ಹೋಗುತ್ತಾರೆ. ಹೀಗಿದ್ದರೂ ರಸ್ತೆಯ ದುಸ್ಥಿತಿ ಅವರಿಗೆ ಕಂಡಿಲ್ಲವೆ. ಇದನ್ನು ಸರಿಪಡಿಸಲು ಅವರೇಕೆ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ಪ್ರಶ್ನಿಸಿದರು.

‘ಮೈಸೂರು ರಸ್ತೆಯಲ್ಲಿರುವ ವಿನಾಯಕ ಚಿತ್ರಮಂದಿರದ ಎದುರು ಬಿಸ್ಕಟ್‌ ತಯಾರಿಕಾ ಕಾರ್ಖಾನೆ ಇದೆ. ಅದರ ಶೌಚಾಲಯದ ನೀರೆಲ್ಲಾ ಚರಂಡಿಗೆ ನುಗ್ಗುತ್ತದೆ. ಅದು ತುಂಬಿ ರಸ್ತೆಯ ಮೇಲೇ ಹರಿಯುತ್ತಿದೆ. ಅದರಿಂದ ದುರ್ನಾತವೂ ಬೀರುತ್ತಿದೆ. ಮನೆಯಲ್ಲಿ ವಾಸಿಸುವುದಕ್ಕೂ ಆಗುವುದಿಲ್ಲ. ಇದನ್ನೆಲ್ಲಾ ಸಹಿಸಿಕೊಂಡು ನಾವು ರೋಸಿ ಹೋಗಿದ್ದೇವೆ. ಸಂಬಂಧಪಟ್ಟವರಿಗೆಲ್ಲಾ ಮನವಿ ಪತ್ರ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಿದೆವು’ ಎಂದು ಸ್ಥಳೀಯರಾದ ಸೆಲ್ವರಾಜ್‌ ಹೇಳಿದರು.

‘ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆಯೇ ರಾಶಿ ಕಸ ಹರಡಿಕೊಂಡಿದೆ. ಕಿರಾಣಿ ಅಂಗಡಿ, ಔಷಧ ಅಂಗಡಿಗಳಿಗೆ ಹೋಗುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಯಲ್ಲಿ 1,000ಕ್ಕೂ ಅಧಿಕ ಮನೆಗಳಿವೆ. ತ್ಯಾಜ್ಯದಿಂದಾಗಿ ಇಲ್ಲಿ ವಾಸಿಸುವುದೇ ಕಷ್ಟವಾಗಿದೆ. ಪ್ರತಿಭಟನೆ ಬಳಿಕ ಎಚ್ಚೆತ್ತಿರುವ ಸಿಬ್ಬಂದಿ ತ್ಯಾಜ್ಯ ತೆರವುಗೊಳಿಸಿದ್ದಾರೆ. ಈ ಕಾರ್ಯ ಒಂದು ದಿನಕ್ಕೆ ಸೀಮಿತವಾಗಬಾರದು. ಇದು ಹೀಗೆ ಮುಂದುವರಿಯಬೇಕು. ಆಗ ಮಾತ್ರ ನಾವು ನೆಮ್ಮದಿಯ ಬದುಕು ನಡೆಸಲು ಸಾಧ್ಯ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು