ಭಾನುವಾರ, ಆಗಸ್ಟ್ 1, 2021
27 °C
ಚಿಕಿತ್ಸೆಗಾಗಿ ಅಲೆದಾಟ * ಸ್ಪಂದಿಸದ ಬಿಬಿಎಂಪಿ –ಆರೋಪ * ತಾಯಿಯ ಕಳೆದುಕೊಂಡು ತಬ್ಬಲಿಯಾದ ಎರಡು ಮಕ್ಕಳು

ಬೆಂಗಳೂರು: ಕೋವಿಡ್‌ನಿಂದ ಪೌರಕಾರ್ಮಿಕ ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಬಿಬಿಎಂಪಿಯ ವಿ.ನಾಗೇನಹಳ್ಳಿ ವಾರ್ಡ್‌ನಲ್ಲಿ ಪೌರಕಾರ್ಮಿಕೆಯಾಗಿ ಕೆಲಸ ಮಾಡುತ್ತಿದ್ದ ರಾಮಸ್ವಾಮಿ ಪಾಳ್ಯ ವಾರ್ಡ್‌ನ ಚಿನ್ನಪ್ಪ ಗಾರ್ಡನ್‌ ಬಂಡೆ ನಿವಾಸಿ ಶಿಲ್ಪಾ (28) ಕೋವಿಡ್‌ನಿಂದಾಗಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

ಕಳೆದ ವಾರ ಗೋರಿಪಾಳ್ಯ ನಿವಾಸಿಗಳಾದ ಇಬ್ಬರು ಪೌರಕಾರ್ಮಿಕರು ಕೋವಿಡ್‌ನಿಂದಾಗಿ ಕೊನೆಯುಸಿರೆಳೆದಿದ್ದರು. ಇದರೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಮೂವರು ಪೌರಕಾರ್ಮಿಕರು ಮೃತಪಟ್ಟಂತಾಗಿದೆ.

‘ಶಿಲ್ಪಾ ಅವರಿಗೆ 10ದಿನಗಳ ಹಿಂದೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹಾಗಾಗಿ ಅವರು ಕೆಲಸಕ್ಕೆ ಹೋಗಿರಲಿಲ್ಲ. ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ಹೋದಾಗ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದ್ದರು. ಅಂದೇ ಬಾಣಸವಾಡಿಯ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿದ್ದರು. ಅವರಿಗೆ ಸೋಂಕು ಇರುವುದು ಬುಧವಾರ ಸಂಜೆ ದೃಢಪಟ್ಟಿದೆ. ಅಷ್ಟರಲ್ಲಿ ಅವರಿಗೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಳ್ಳಲಾರಂಭಿಸಿತ್ತು’ ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

‘ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಇದ್ದ ಬದ್ದ ಆಸ್ಪತ್ರೆಗಳಿಗೆಲ್ಲ ಕರೆ ಮಾಡಿ ವಿಚಾರಿಸಿದ್ದೇವೆ.  ವಿಕ್ರಮ, ಎಂ.ಎಸ್‌.ರಾಮಯ್ಯ ಹಾಗೂ ಮಣಿಪಾಲ ಆಸ್ಪತ್ರೆಗಳಲ್ಲೂ ವೆಂಟಿಲೇಟರ್‌ ಲಭ್ಯ ಇಲ್ಲ ಎಂದು ಹೇಳಿದ್ದರು. ಬಳಿಕ ಕಾವಲ್‌ಭೈರಸಂದ್ರದ ಡಾ.ಬಿ.ಆರ್‌.ಅಂಬೇಡ್ಕರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಲಭ್ಯ ಇದೆ ಎಂಬ ಮಾಹಿತಿ ಪಡೆದು ಅಲ್ಲಿಗೆ ಕರೆದೊಯ್ದೆವು’ ಎಂದು ಶಿಲ್ಪಾ ಅವರ ಬಂಧು ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಬೇಡ್ಕರ್‌ ಆಸ್ಪತ್ರೆಯಲ್ಲೂ ಒಂದೂವರೆ ಗಂಟೆ ಕಾಯಿಸಿ ಬಳಿಕ ದಾಖಲಿಸಿಕೊಂಡರು. ಇದಾಗಿ ಒಂದೆರಡು ಗಂಟೆಗಳಲ್ಲೇ ಶಿಲ್ಪಾ ಕೊನೆಯುಸಿರೆಳೆದಿರುವುದಾಗಿ ಮಾಹಿತಿ ನೀಡಿದರು’ ಎಂದರು.

ದಲಿತ ಮುಖಂಡರ ಮಗಳು

ಶಿಲ್ಪಾ ಅವರು ರಾಜ್ಯ ಮಾದಿಗ ದಂಡೋರಾದ ಹಿರಿಯ ಉಪಾಧ್ಯಕ್ಷ ಎಂ.ಸಿ.ಶ್ರೀನಿವಾಸ್‌ ಅವರ ಮಗಳು. ಅವರ ಪತಿ ಚಾಲಕ. ಅವರಿಗೆ 10 ವರ್ಷದ ಮಗಳು ಹಾಗೂ 8 ವರ್ಷದ ಮಗ ಇದ್ದಾರೆ.

‘ಸಣ್ಣ ವಯಸ್ಸನಲ್ಲೇ ತಾಯಿಯನ್ನು ಕಳೆದುಕೊಂಡ ಪುಟ್ಟ ಮಕ್ಕಳ ರೋದನ ನೋಡಲಾಗುತ್ತಿಲ್ಲ. ನಗರದ ಸ್ವಚ್ಛತೆ ಕಾಪಾಡಲು ನಮ್ಮನ್ನು ಬಳಸಿಕೊಳ್ಳುವ ಸರ್ಕಾರ ನಮ್ಮ ಸುರಕ್ಷತೆಗೆ ಎಳ್ಳಿನಿತೂ ಕಾಳಜಿ ವಹಿಸುತ್ತಿಲ್ಲ’ ಎಂದು ಬಂಧುವೊಬ್ಬರು ಅಳಲು ತೋಡಿಕೊಂಡರು.

ಸ್ಪಂದಿಸದ ಬಿಬಿಎಂಪಿ: ಆರೋಪ

‘ಶಿಲ್ಪಾ ಅವರನ್ನು ಆಸ್ಪತ್ರೆಗೆ ದಾಖಲಿಸಲು ನೆರವು ಕೋರಿ ನಾವು ಪೂರ್ವವಲಯದ ಆರೋಗ್ಯಾಧಿಕಾರಿಗೆ ಅನೇಕ ಬಾರಿ ಕರೆ ಮಾಡಿದ್ದೆವು. ಅವರ ಕರೆ ಸ್ವೀಕರಿಸಿಲ್ಲ. ನಮ್ಮ ಕ್ಷೇತ್ರದ ಆರೋಗ್ಯ ವೈದ್ಯಾಧಿಕಾರಿಗೆ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ’ ಎಂದು ಬಂಧುವೊಬ್ಬರು ಆರೋಪಿಸಿದರು.

ಈ ಆರೋಪ ಅಲ್ಲಗಳೆದ ಬಿಬಿಎಂಪಿ ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್‌ಖಾನ್‌, ‘ಕುಟುಂಬದವರು ಬಿಬಿಎಂಪಿ ಆರೋಗ್ಯ ಅಧಿಕಾರಿಗಳಿಗೆ ಕರೆ ಮಾಡಿದ ತಕ್ಷಣವೇ ಆಂಬುಲೆನ್ಸ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಕುಟುಂಬಸ್ಥರೇ ನಿರಾಕರಿಸಿದರು’ ಎಂದರು.

ಮೃತರ ಕುಟುಂಬಕ್ಕೆಕೋವಿಡ್‌ ವಿಮೆಯಡಿ ಪರಿಹಾರ ಕೊಡಿಸಲು ಕ್ರಮಕೈಗೊಳ್ಳುವುದಾಗಿ ಸರ್ಫರಾಜ್‌ ಖಾನ್‌ ತಿಳಿಸಿದರು.

ಮಾದಿಗ ದಂಡೋರಾ ಪ್ರತಿಭಟನೆ

ಪೌರಕಾರ್ಮಿಕೆ ಶಿಲ್ಪಾ ಅವರಿಗೆ ಸರ್ಕಾರ ಸಕಾಲದಲ್ಲಿ ಚಿಕಿತ್ಸೆ ಒದಗಿಸಿಲ್ಲ ಎಂದು ಆರೋಪಿಸಿದ ಮಾದಿಗ ದಂಡೋರಾ ನೇತೃತ್ವದಲ್ಲಿ ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನ ಬಳಿ ಬುಧವಾರ ಪ್ರತಿಭಟನೆ ನಡೆಯಿತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೋವಿಡ್‌ ಉಸ್ತುವಾರಿ ಸಚಿವ ಡಾ.ಸುಧಾಕರ್‌ ಹಾಗೂ ಬಿಬಿಎಂಪಿ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. 

‘ಎಲ್ಲೆಡೆ ಕೋವಿಡ್‌ ಸೋಂಕು ಹಬ್ಬಿದ ಬಳಿಕವೂ ನಗರದ ಸ್ವಚ್ಛತೆ ಕಪಾಡಲು ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ಅವರಿಗೆ ಸೊಂಕು ತಗುಲಿದಾಗ ಚಿಕಿತ್ಸೆಗೆ ಸರ್ಕಾರ ವ್ಯವಸ್ಥೆ ಕಲ್ಪಿಸದಿದ್ದರೆ ಹೇಗೆ. ಆಸ್ಪತ್ರೆಗಳಲ್ಲಿ ಈಗಲೂ ಹಾಸಿಗೆ ಲಭ್ಯ ಇದೆ ಎಂದು ಸಚಿವರು ಬೊಗಳೆ ಬಿಡುತ್ತಿದ್ದಾರೆ’ ಎಂದು ಮಾದಿಗ ದಂಡೋರಾದ ಬೆಂಗಳೂರು ನಗರದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ದಾಸ್‌ ಟೀಕಿಸಿದರು.

‘ಪೊಲೀಸರ ಹಾಗೂ ಸೈನಿಕರ ಚಿಕಿತ್ಸೆಗೆ ಸರ್ಕಾರ ಪ್ರತ್ಯೇಕ ಆಸ್ಪತ್ರೆ ನಿಗದಿ ಮಾಡಿದೆ. ಅಂತೆಯೇ ಪೌರ ಕಾರ್ಮಿಕರ ಚಿಕಿತ್ಸೆಗೂ ಪ್ರತ್ಯೇಕ ಆಸ್ಪತ್ರೆ ಕಾಯ್ದಿರಿಸಲಿ. ಆಗ ವೆಂಟಿಲೇಟರ್‌ ಹಾಗೂ ಹಾಸಿಗೆ ಅರಸಿ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಲಿದೆ’ ಎಂದರು.

‘ಸಾಂತ್ವನ ಹೇಳುವವರೂ ಇಲ್ಲ’

ಗೋರಿಪಾಳ್ಯದ ನಿವಾಸಿಗಳಾದ ನರಸಮ್ಮ ಹಾಗೂ ಶ್ರೀನಿವಾಸಲು ಅವರು ಕಳೆದ ವಾರ್ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ನರಸಮ್ಮ ಅವರು ವಿಜಯನಗರ ವಾರ್ಡ್‌ನಲ್ಲಿ ಹಾಗೂ ಶ್ರೀನಿವಾಸಲು ಕತ್ರಿಗುಪ್ಪೆ ವಾರ್ಡ್‌ನಲ್ಲಿ ಪೌರಕಾರ್ಮಿಕರಾಗಿದ್ದರು. ಇವರನ್ನು ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸವನ್ನು ಮೇಯರ್‌ ಆಗಲೀ ಬಿಬಿಎಂಪಿ ಅಧಿಕಾರಿಗಳಾಗಲೀ ಮಾಡಿಲ್ಲ. ಈ ದುಃಖ ಮಾಸುವ ಮುನ್ನವೇ ಮತ್ತೊಬ್ಬ ಪೌರಕಾರ್ಮಿಕೆಯನ್ನು ಕಳೆದುಕೊಂಡಿದ್ದೇವೆ’ ಎಂದು ದೂರುತ್ತಾರೆ ಬಿಬಿಎಂಪಿ ಪೌರಕಾರ್ಮಿಕರ ಸಂಘದ ಮುಖಂಡರು.

‘ಪೌರಕಾರ್ಮಿಕರಿಗೆ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ನೀಡಿರುವುದು ಬಿಟ್ಟರೆ ಬೇರಾವುದೇ ಸುರಕ್ಷತಾ ಕ್ರಮಗಳನ್ನು ಬಿಬಿಎಂಪಿ ಕೈಗೊಂಡಿಲ್ಲ. ನಗರದಲ್ಲಿ ಎಲ್ಲೆಡೆ ಸೋಂಕು ಪತ್ತೆಯಾದ ಕಡೆಯಲ್ಲೆಲ್ಲವೂ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಂಟೈನ್‌ಮೆಂಟ್‌ ಎಂದು ಗುರುತಿಸಿರುವ ಅನೇಕ ಪ್ರದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಆದರೂ ಅವರನ್ನು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸುತ್ತಿಲ್ಲ’ ಎಂದು ಪೌರಕಾರ್ಮಿಕರ ಸಂಘದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪಿ.ಎನ್‌.ಮುತ್ಯಾಲಪ್ಪ ಆರೋಪಿಸಿದರು. 

‘ಕೊಳೆಗೇರಿಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಿ’

ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ರಾಮಸ್ವಾಮಿಪಾಳ್ಯ, ಗೋರಿಪಾಳ್ಯ ಮತ್ತಿತರ ಪ್ರದೇಶಗಳ  ಕೊಳೆಗೇರಿಗಳಲ್ಲಿ ಸಾಮೂಹಿಕವಾಗಿ ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದು ಪೌರಕಾರ್ಮಿಕರ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

‘ರಾಮಸ್ವಾಮಿಪಾಳ್ಯದಲ್ಲಿ 2 ಸಾವಿರಕ್ಕೂ ಅಧೀಕ ಪೌರಕಾರ್ಮಿಕರು, ನೆಲೆಸಿದ್ದಾರೆ. ಅಲ್ಲಿ ಕೋವಿಡ್‌ ಪರೀಕ್ಷೆ ನಡೆಸಿದರೆ ಏನಿಲ್ಲವೆಂದರೆ 500ಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಲಿದೆ. ಸರ್ಕಾರ ಆದಷ್ಟು ಬೇಗ ಇಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂಬೈನ ಧಾರಾವಿಯ ಸ್ಥಿತಿ ನಗರದಲ್ಲೂ ಕಾಣಿಸಿಕೊಳ್ಳಲಿದೆ’ ಎಂದು ಸಿ. ದಾಸ್‌ ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು