ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡವರ ವಿರೋಧಿ ಬಜೆಟ್‌: ಮುಖಂಡರ ಟೀಕೆ

ಗುತ್ತಿಗೆದಾರರ ಕಿಸೆತುಂಬಿಸಲು ಆದ್ಯತೆ: ಕಟ್ಟಡ ಹಾಗೂ ಪೌರ ಕಾರ್ಮಿಕರ ಕಡೆಗಣನೆ
Last Updated 3 ಏಪ್ರಿಲ್ 2021, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರಸಕ್ತ ಸಾಲಿನ ಬಜೆಟ್‌ ಬಡವರ ವಿರೋಧಿಯಾಗಿದೆ. ಗುತ್ತಿಗೆದಾರರ ಕಿಸೆ ತುಂಬಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಅಭಿಪ್ರಾಯಪಟ್ಟರು.

ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಅಠವಳೆ) ಶನಿವಾರ ಆಯೋಜಿಸಿದ್ದ ‘ಬೆಂಗಳೂರಿಗರ ನಿರೀಕ್ಷೆಗಳು ಮತ್ತು ಬಿಬಿಎಂಪಿ ಬಜೆಟ್‌ ಭರವಸೆಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ಬಡವರ ನಗರ. ಸುಮಾರು 700 ಕೊಳೆಗೇರಿಗಳಲ್ಲಿ ಲಕ್ಷಾಂತರ ಮಂದಿ ವಾಸಿಸುತ್ತಿದ್ದಾರೆ. ವಲಸೆ, ಕಟ್ಟಡ ಹಾಗೂ ಪೌರ ಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ಕಡೆಗಣಿಸಲಾಗಿದೆ. ಬೆಂಗಳೂರಿನ ಜೀವನಾಡಿಗಳಾಗಿರುವ ಕೆರೆಗಳು ಹಾಗೂ ರಾಜಕಾಲುವೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿಲ್ಲ’ ಎಂದು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.

‘ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಿರುವುದು, ವಿಕೇಂದ್ರೀಕರಣಕ್ಕೆ ಒತ್ತು ನೀಡಿರುವುದು, ಅತಿ ಹೆಚ್ಚು ಅಂಕ ಗಳಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ವಿದ್ಯಾರ್ಥಿಗಳಿಗೆ ₹25 ಸಾವಿರ ಹಾಗೂ ಉತ್ತಮ ಶಿಕ್ಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ ಪ್ರಕಟಿಸಿರುವುದು ಸ್ವಾಗತಾರ್ಹ’ ಎಂದರು.

ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ವೈ.ಮರಿಸ್ವಾಮಿ ‘ಬಿಬಿಎಂಪಿ ವ್ಯಾಪ್ತಿಯ ಶಾಲಾ ಮತ್ತು ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿತ್ತು. ಈ ವಿಚಾರದಲ್ಲಿ ದೆಹಲಿ ಸರ್ಕಾರವು ನಮಗೆ ಮಾದರಿ
ಯಾಗಬೇಕು. ದೆಹಲಿಯಲ್ಲಿ ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ ನೀಡಲಾಗಿದೆ. ಮಕ್ಕಳ ಭಿಕ್ಷಾಟನೆ ತಪ್ಪಿಸಲು ಬಜೆಟ್‌ನಲ್ಲಿ ಯಾವ ಪರಿಹಾರ ಪ್ರಕಟಿಸಿಲ್ಲ’ ಎಂದರು.

ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್‌ ವಾಜಿದ್‌, ‘ಚುನಾಯಿತ ಕೌನ್ಸಿಲ್‌ನಲ್ಲಿ ಬಜೆಟ್‌ ಕುರಿತು ಸುದೀರ್ಘ ಚರ್ಚೆ ನಡೆಯುತ್ತಿತ್ತು. ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಬೇಕು, ಯಾವುದಕ್ಕೆ ನೀಡಬಾರದು ಎಂಬುದರ ಬಗ್ಗೆ ಎಲ್ಲಾ ಸದಸ್ಯರ ಅಭಿಪ್ರಾಯ ಕೇಳಲಾಗುತ್ತಿತ್ತು. ಆದರೆ ಈಗ ಯಾರೊಂದಿಗೂ ಚರ್ಚಿಸದೇ ನೇರವಾಗಿ ಬಜೆಟ್‌ ಮಂಡಿಸಲಾಗಿದೆ’ ಎಂದರು.

ಬಿಜೆಪಿ ಮುಖಂಡ ನಾರಾಯಣಸ್ವಾಮಿ, ‘ಬಜೆಟ್‌ನಲ್ಲಿ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಗಿದ್ದು, ಅಭಿವೃದ್ಧಿ ಕೆಲಸಗಳು ಸುಲಲಿತವಾಗಿ ನಡೆಯಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT