ಮಂಗಳವಾರ, ಜೂನ್ 2, 2020
27 °C
ದುಬಾರಿ ಬೆಲೆಗೆ ಥರ್ಮಾಮೀಟರ್‌ ಮಾರಾಟ

₹8 ಲಕ್ಷ ಮೌಲ್ಯದ 70 ಥರ್ಮಾಮೀಟರ್‌ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನುಷ್ಯನ ದೇಹದ ಉಷ್ಣಾಂಶ ಪತ್ತೆಹಚ್ಚುವ ‘ಇನ್ಪಾರೆಡ್‌ ಫೋರ್‌ಹೆಡ್‌ ಥರ್ಮಾ ಮೀಟರ್‌’ ಗಳನ್ನು ಕಡಿಮೆ ಬೆಲೆಗೆ ತರಿಸಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ಅಂಗಡಿಯೊಂದರ ಮೇಲೆ ಸಿಸಿಬಿ ಪೊಲೀಸರು ಮಂಗಳ ವಾರ ಮಧ್ಯಾಹ್ನ ದಾಳಿ ಮಾಡಿ ₹8 ಲಕ್ಷ ಬೆಲೆಬಾಳುವ 70 ಥರ್ಮಾ ಮೀಟರ್‌, 60 ಬ್ಯಾಟರಿಗಳನ್ನು ಜಪ್ತಿ ಮಾಡಿದ್ದಾರೆ.

ರಾಜಾಜಿನಗರ ಒಂದನೇ ಬ್ಲಾಕ್‌ನ 19ನೇ ಮುಖ್ಯರರಸ್ತೆಯಲ್ಲಿರುವ ಪ್ರಜ್ವಲ್‌ ಸರ್ಜಿಕಲ್‌ ಆ್ಯಂಡ್‌ ಸೈಂಟಿಫಿಕ್‌ ಮಳಿಗೆಯ ಮೇಲೆ ದಾಳಿ ನಡೆದಿದೆ.

ಐ–ಪುಕ್‌ ಎಂಬ ಕಂಪನಿ ತಯಾರಿ ಸಿರುವ ಈ ಥರ್ಮಾ ಮೀಟರ್‌ಗಳನ್ನು ಬಿಲ್ ಪ್ರಕಾರ ₹ 3,500. ಆದರೆ, ಅಂಗಡಿ ಮಾಲೀಕರು ಅವುಗಳನ್ನು ₹ 8,000ರಿಂದ ₹15,000ದವರೆಗಿನ ಬೆಲೆಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಇವುಗಳನ್ನು ತಲಾ ₹ 15,000 ಪಾವತಿಸಿ ಖರೀದಿಸಿದ್ದಾರೆ. ಆರೋಪಿಗಳಿಂದ ಗ್ಲೋಬಲ್‌ ಡಯಾಗ್ನಸ್ಟಿಕ್‌ ಬಿಲ್, ಮಾರಾಟದ ಇನ್‌ವಾಯ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಈ ಕುರಿತು ಮಾಹಿತಿ ತಿಳಿದ ಸಿಸಿಬಿ ಇನ್‌ಸ್ಪೆಕ್ಟರ್‌ ಎಂ.ಆರ್‌. ಹರೀಶ್‌ ನೇತೃತ್ವದ ಸಿಸಿಬಿ ಪೊಲೀಸರ ತಂಡ ಅಂಗಡಿ ಮೇಲೆ ದಾಳಿ ನಡೆಸಿದಾಗ ಥರ್ಮಾಮೀಟರ್‌ಗಳು ಪತ್ತೆ ಆದವು ಎಂದು ಸುಬ್ರಮಣ್ಯನಗರ ಪೊಲೀಸರಿಗೆ ದೂರು ನೀಡಲಾಗಿದೆ.

ಅಂಗಡಿ ವ್ಯವಸ್ಥಾಪಕ ಕುರುಬರಹಳ್ಳಿಯ ಜೆ.ಸಿ. ನಗರದ ನಿವಾಸಿ ಕೇಶವನ್‌ (32) ಅವರನ್ನು ವಶಕ್ಕೆ ಪಡೆಯಲಾಗಿದೆ. ಸರ್ಜಿಕಲ್‌ ಅಂಗಡಿ ಮಾಲೀಕರಾದ ಭರತ್‌ ಭಾಪ್ನಾ ಅವರಿಗಾಗಿ ಹುಡುಕಾಟ ನಡೆದಿದೆ.

ನಕಲಿ ಸ್ಯಾನಿಟೈಸರ್‌ ತಯಾರಿಕೆ, ಬಂಧನ
ಬೆಂಗಳೂರು: ಶ್ರೀರಾಮಪುರದ ಐದನೇ ಮುಖ್ಯರಸ್ತೆ, ಎರಡನೇ ಅಡ್ಡರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿರುವ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ಮಂಗಳವವಾರ ದಾಳಿ ಮಾಡಿ ನಕಲಿ ಸ್ಯಾನಿಟೈಸರ್‌ ತಯಾರಿಸಲು ಬಳಸುತ್ತಿದ್ದ ರಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

180 ಲೀಟರ್‌ ಐಸೊಪ್ರೊಪೈಲ್‌ ಆಲ್ಕೋಹಾಲ್‌, 10 ಲೀಟರ್‌ ಗ್ಲಿಸರಿನ್‌ ಮತ್ತು ನೆಲ ಒರೆಸಲು ಬಳಸುವ 65 ಲೀಟರ್‌ ಸ್ಯಾನಿಟೈಸರ್‌ ಪೊಲೀಸರು ಜಪ್ತಿ ಮಾಡಿದ ರಾಸಾಯನಿಕ ವಸ್ತುಗಳಲ್ಲಿ ಸೇರಿವೆ.  ಆರೋಪಿ ಬಳಿ 100 ಎಂ.ಎಲ್‌ನ 5382 ಬಾಟಲಿಗಳೂ ದೊರೆತಿವೆ. ಸ್ಯಾನಿಟೈಸರ್‌ ಅನ್ನು ಈ ಬಾಟಲಿಗಳಲ್ಲಿ ತುಂಬಿ ವಿತರಿಸಲು ಬಳಸಲಾಗುತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.