ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಾತೀತ ವಿಮರ್ಶೆ ದೂರ ಮಾಡುವುದು ಸಲ್ಲ: ಅರವಿಂದ ಮಾಲಗತ್ತಿ

’ದಲಿತ ಸಾಹಿತ್ಯ ಮತ್ತು ಚಳವಳಿ: ಎಲ್. ಹನುಮಂತಯ್ಯ’ ಕುರಿತ ವಿಚಾರ ಸಂಕಿರಣ
Published 14 ಜುಲೈ 2023, 14:18 IST
Last Updated 14 ಜುಲೈ 2023, 14:18 IST
ಅಕ್ಷರ ಗಾತ್ರ

ಬೆಂಗಳೂರು: ‘ನವೋದಯ, ನವ್ಯ ಸೇರಿದಂತೆ ಎಲ್ಲರೂ ಪಾಶ್ಚಿಮಾತ್ಯ ವಿಮರ್ಶೆಯ ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ವಿಮರ್ಶಿಸಿದರು. ಅದಕ್ಕೆ ಭಿನ್ನವಾಗಿ ದೇಸಿ ನೆಲೆಯಲ್ಲಿ ನೋಡುವ ಕ್ರಮವನ್ನು ದಲಿತ ಬಂಡಾಯ ಚಳವಳಿ ಮಾಡಿತು. ಸೀಮಾತೀತ ವಿಮರ್ಶೆ ಎಂದೂ ಕರೆಯಲಾಗುವ ಈ ದೇಸಿ ವಿಮರ್ಶೆಯನ್ನು ದೂರ ಮಾಡಬಾರದು’ ಎಂದು ಕವಿ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮತ್ತು ಶೂದ್ರ ಪ್ರತಿಷ್ಠಾನದಿಂದ ಶುಕ್ರವಾರ ನಡೆದ ’ದಲಿತ ಸಾಹಿತ್ಯ ಮತ್ತು ಚಳವಳಿ: ಎಲ್. ಹನುಮಂತಯ್ಯ’  ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯದಲ್ಲಿ ಅಂಬೇಡ್ಕರ್‌ವಾದ ಬಳಕೆಯಲ್ಲಿದೆ. ಮತ್ತೆ ಅಂಬೇಡ್ಕರ್‌ ಕಟ್ಟರ್‌ವಾದ, ಉಗ್ರವಾದ, ಸೌಮ್ಯವಾದ ಎಂದು ವಿಂಗಡಿಸುವುದು ಸರಿಯಾದ ಕ್ರಮವಲ್ಲ. ಎಲ್ಲವನ್ನು ಒಟ್ಟಾಗಿ ಗ್ರಹಿಸಬೇಕೇ ಹೊರತು, ವಿಂಗಡಿಸಿ ಗ್ರಹಿಸುವುದಲ್ಲ’ ಎಂದು ತಿಳಿಸಿದರು.

‘ಉಪನ್ಯಾಸಕರಾಗಿರುವವರು ಸಾಹಿತ್ಯ ಕ್ಷೇತ್ರಕ್ಕೆ ಬರುವುದು ಸುಲಭ. ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ಬಂದು ಸಾಮಾಜಿಕ ಶಿಕ್ಷಕನಾಗುವುದು ಸುಲಭವಲ್ಲ. ಅಂತಹ ಸಾಮಾಜಿಕ ಶಿಕ್ಷಕನಾಗಿ ಹನುಮಂತಯ್ಯ ಇದ್ದಾರೆ. ಅವರು ಕನಸಿನ ಕವಿ. ಬಿಡುಗಡೆಯ ಕವಿ. ಕನಸು ಕಾಣುತ್ತಲೇ ಬಿಡುಗಡೆಯ ದಾರಿಯನ್ನು ತೋರುವ ಕವಿ. ಭೂತಕಾಲವನ್ನು ತೋರುತ್ತಲೇ ಭವಿಷ್ಯತ್ತನ್ನು ಕಂಡುಕೊಳ್ಳುವ ಕವಿ’ ಎಂದು ಬಣ್ಣಿಸಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ಕವಿ ಎಚ್‌.ಎಸ್. ಶಿವಪ್ರಕಾಶ್‌, ‘ಲಂಕೇಶ್‌ ಅವರ ಅವ್ವ ಕವಿತೆಯು ಭೂಮಿ ಜತೆಗೆ ಸಮೀಕರಿಸುವುದರ ಜೊತೆಗೆ ಭಿನ್ನವಾಗಿ ತಾಯಿಯನ್ನು ಕಟ್ಟಿಕೊಟ್ಟರೆ, ಹನುಮಂತಯ್ಯ ಅವರ ಅವ್ವ ಕವಿತೆಯು ಬಡತನದ ಆತ್ಯಂತಿಕ ಸ್ಥಿತಿಯನ್ನು ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಹನುಮಂತಯ್ಯ ಅವರ ಎಲ್ಲ  ಬರಹಗಳು ಸಂಸ್ಕೃತಿಮುಖಿಯಾದುದು’ ಎಂದು ಹೇಳಿದರು.

ಬಳಿಕ ವಿವಿಧ ಗೋಷ್ಠಿಗಳು, ಎಲ್. ಹನುಮಂತಯ್ಯರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT