ಗುರುವಾರ , ಸೆಪ್ಟೆಂಬರ್ 23, 2021
24 °C

ಡ್ರಗ್ಸ್ ಮಾರುತ್ತಿದ್ದ ‘ಪೊಲೀಸ್ ಮಾಹಿತಿದಾರ’ನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪೊಲೀಸ್ ಮಾಹಿತಿದಾರ’ ಎಂದು ಹೇಳಿಕೊಂಡು ತನ್ನದೇ ಜಾಲದ ಮೂಲಕ ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ರವಿ ಎಂಬಾತನನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ರವಿ, ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಮಾಹಿತಿ ಬಂದಿತ್ತು. ಆತನ ಮೇಲೆ ಕಣ್ಣಿಟ್ಟು ಬಂಧಿಸಲಾಗಿದೆ. ₹ 5 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ‘ಕೆಲ ಪೊಲೀಸರ ಜೊತೆ ಒಡನಾಟ ಹೊಂದಿದ್ದ ಆರೋಪಿ ರವಿ, ಅಪರಾಧ ಕೃತ್ಯಗಳ ಬಗ್ಗೆ ಆಗಾಗ ಮಾಹಿತಿ ನೀಡುತ್ತಿದ್ದ. ತನಗೆ ಪೊಲೀ ಸರು ಪರಿಚಯವೆಂದು ಹೇಳಿಕೊಂಡು ಓಡಾಡುತ್ತಿದ್ದ ಆರೋ‍ಪಿ, ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದ’ ಎಂದೂ ತಿಳಿಸಿದರು. ಇತ್ತೀಚೆಗಷ್ಟೇ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲೂ ಪೊಲೀಸ್ ಮಾಹಿತಿದಾರ ರತನ್‌ ಲಾಲ್‌ ಎಂಬಾತನನ್ನು ಬಂಧಿಸಲಾಗಿತ್ತು.

18 ಕೆ.ಜಿ ಗಾಂಜಾ ಜಪ್ತಿ: ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರುತ್ತಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ 18 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ. ‘ಮುಸ್ತಫಾ, ಮಾರಪ್ಪ ಹಾಗೂ ರಾಜಬಾಬು ಬಂಧಿತರು. ಹಲವು ವರ್ಷಗಳಿಂದ ಪರಿಚಯಸ್ಥರಾಗಿದ್ದ ಆರೋಪಿಗಳು, ತಮ್ಮದೇ ಜಾಲ ಸೃಷ್ಟಿಸಿಕೊಂಡು ಗಾಂಜಾ ಮಾರುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಠಾಣೆ ವ್ಯಾಪ್ತಿಯಲ್ಲಿ ಸೆ. 1ರಂದು ಗಾಂಜಾ ಮಾರಲು ಬಂದಿದ್ದ ಇಬ್ಬರು ಆರೋಪಿಗಳು, ಗಸ್ತು ಸಿಬ್ಬಂದಿ ಕೈಗೆ ಸಿಕ್ಕಿಬಿದ್ದರು. ಅವರ ಬಳಿ 2 ಕೆ.ಜಿ 500 ಗ್ರಾಂ ಗಾಂಜಾ ಸಿಕ್ಕಿತ್ತು. ಅವರಿಬ್ಬರು ನೀಡಿದ್ದ ಮಾಹಿತಿ ಆಧರಿಸಿ ಮತ್ತೊಬ್ಬನ್ನು ಇತ್ತೀಚೆಗೆ ಬಂಧಿಸಲಾಗಿದೆ. ಹೊರರಾಜ್ಯದಿಂದ ಗಾಂಜಾ ತರುತ್ತಿದ್ದ ಆರೋಪಿಗಳು, ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಕೆಲ ಕೂಲಿ ಕಾರ್ಮಿಕರಿಗೆ ಮಾರುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.