ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಪರಿಷತ್: ’ಕೊಡತಿ’ ಕೀಟ ಲೋಕ ಅನಾವರಣ

ದೇಶದ ವಿವಿಧ ಭಾಗದಲ್ಲಿನ ಏರೋಪ್ಲೇನ್ ಚಿಟ್ಟೆಯ ಛಾಯಾಚಿತ್ರ ಪ್ರದರ್ಶನ
Published 8 ಸೆಪ್ಟೆಂಬರ್ 2023, 14:34 IST
Last Updated 8 ಸೆಪ್ಟೆಂಬರ್ 2023, 14:34 IST
ಅಕ್ಷರ ಗಾತ್ರ

ಬೆಂಗಳೂರು: ಬಣ್ಣ ಬಣ್ಣದ ರೆಕ್ಕೆಗಳು, ದೊಡ್ಡದಾದ ಕಣ್ಣುಗಳು ಹಾಗೂ ಗೋಲಾಕಾರದ ತಲೆಯ ಭಾಗವನ್ನು ಹೊಂದಿರುವ ಕೊಡತಿ ಕೀಟದ (ಏರೋಪ್ಲೇನ್ ಚಿಟ್ಟೆ) ಸುಮಾರು 180 ಪ್ರಭೇದಗಳು ಇಲ್ಲಿನ ಚಿತ್ರಕಲಾ ಪರಿಷತ್ತಿನಲ್ಲಿ ಅನಾವರಣಗೊಂಡಿವೆ. 

ಪರಿಸರ–ನಿಸರ್ಗ ಸಂರಕ್ಷಣಾ ಟ್ರಸ್ಟ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ತು ಜಂಟಿಯಾಗಿ ನಗರದಲ್ಲಿ ‘ತೇಜಸ್ವಿ ಜೀವಲೋಕ 11’ ಶೀರ್ಷಿಕೆಯಡಿ ಹಮ್ಮಿಕೊಂಡ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ‍ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಛಾಯಾಚಿತ್ರ ಪ್ರದರ್ಶನವು ಇದೇ 14ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7.30ರವರೆಗೆ ನಡೆಯಲಿದೆ. 

ಕರ್ನಾಟಕ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ ಸೇರಿ ವಿವಿಧ ರಾಜ್ಯಗಳಲ್ಲಿ ಕಾಣಸಿಗುವ ಏರೋಪ್ಲೇನ್‌ ಚಿಟ್ಟೆಯ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಈ ಕೀಟದ ಬಗ್ಗೆ ಕೊಲ್ಕತ್ತದ ಪ್ರೊಸೇನ್‌ಜಿತ್ ಅವರು ಅಧ್ಯಯನ ನಡೆಸುತ್ತಿದ್ದು, ಅವರು ಸೆರೆಹಿಡಿದ ಹಾಗೂ ಸಂಗ್ರಹಿಸಿದ ಛಾಯಾಚಿತ್ರಗಳಲ್ಲಿ 230 ಛಾಯಾಚಿತ್ರಗಳು ಇಲ್ಲಿವೆ. ವಿವಿಧ ಪ್ರಭೇದಗಳ ಏರೋಪ್ಲೇನ್ ಚಿಟ್ಟೆಗಳು ಬೇಟೆಗೆ ಹೊಂಚು ಹಾಕುತ್ತಿರುವ ಛಾಯಾಚಿತ್ರಗಳು ಪ್ರದರ್ಶನ ಕಾಣುತ್ತಿವೆ. 

‘ದೇಶದಲ್ಲಿ ಸುಮಾರು 500 ಪ್ರಭೇದಗಳ ಏರೋಪ್ಲೇನ್ ಚಿಟ್ಟೆಗಳಿವೆ. ಕೆರೆಗಳ ನೀರು ಮಲಿನ, ಗಿಡ–ಮರಗಳ ನಾಶ ಸೇರಿ ವಿವಿಧ ಕಾರಣಗಳಿಂದ ಕೆಲ ಪ್ರಭೇದಗಳು ಕಣ್ಮರೆಯಾಗುತ್ತಿವೆ. ಇವುಗಳಿಗೆ ಪ್ರದೇಶವಾರು ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ. ಈ ಕೀಟವು ಬೇಟೆಯಾಡುವುದರಲ್ಲಿ ನಿಪುಣ. ಹೇಗೆ ಬೇಕಾದರೂ ಹಾರಬಲ್ಲವು’ ಎಂದು ಪ್ರೊಸೇನ್‌ಜಿತ್ ತಿಳಿಸಿದರು. 

‘ಮಲೇರಿಯಾ, ಡೆಂಗಿಗಳಂತಹ ರೋಗಗಳನ್ನು ಹರಡುವ ಸೊಳ್ಳೆ, ನೊಣ, ಕೀಟಗಳನ್ನು ಭಕ್ಷಿಸುವ ಮೂಲಕ ಮನುಕುಲಕ್ಕೆ ಏರೋಪ್ಲೇನ್‌ ಚಿಟ್ಟೆ ರಕ್ಷಣೆ ನೀಡುತ್ತಿದೆ. ತೇಜಸ್ವಿ ಅವರ ನೆನಪಿನಲ್ಲಿ ಅವರ ಕಥೆಗಳಲ್ಲಿ ಬರುವ ಜೀವಿಯೊಂದನ್ನು ಕೇಂದ್ರವಾಗಿರಿಸಿಕೊಂಡು ಸರಣಿ ಛಾಯಾಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನಗಳನ್ನು ನಡೆಸಲಾಗುತ್ತಿದೆ’ ಎಂದು ಪರಿಸರ ನಿಸರ್ಗ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಈಶ್ವರ್ ಪ್ರಸಾದ್ ತಿಳಿಸಿದರು. 

ಛಾಯಾಚಿತ್ರ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಅಧಿಕಾರಿ ಹಾಗೂ ದೂರದರ್ಶನ ವಾರ್ತಾ ವಾಚಕ ನೂರ್ ಸಮದ್ ಅಬ್ಬಲಗೆರೆ ಅವರ ‘ವಿಸ್ಮಯ ಕೀಟ ಪ್ರಪಂಚ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT