ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರದಿಂದ ಚದುರಿದ ಲೋಹದ ಹಕ್ಕಿಗಳು

ರೋಮಾಂಚನಕಾರಿ ಅನುಭವ ಕಟ್ಟಿಕೊಟ್ಟ ವೈಮಾನಿಕ ಪ್ರದರ್ಶನ ಸಂಪನ್ನ
Last Updated 5 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅಂಬರದಲ್ಲಿ ಅಬ್ಬರಿಸಿದ ಯುದ್ಧ ವಿಮಾನಗಳು ತಮ್ಮ ಆರ್ಭಟ ನಿಲ್ಲಿಸಿವೆ. ರಂಗಿನಾಟಗಳ ಮೂಲದ ರಂಜನೆ ನೀಡಿದ ಹೆಲಿಕಾಪ್ಟರ್‌ಗಳು ತಮ್ಮ ಚಮತ್ಕಾರಿ ಆಟಗಳಿಂದ ವಿರಮಿಸಿವೆ.ಲೋಹದ ಹಕ್ಕಿಗಳು ಹಾರಾಟ ನಿಲ್ಲಿಸುತ್ತಿದ್ದಂತೆಯೇ ಯಲಹಂಕ ವಾಯುನೆಲೆಯ ಗಗನ ಕಿವಿಡಗಚಿಕ್ಕುವ ಶಬ್ದಗಳಿಂದ ಮುಕ್ತವಾಗಿದೆ.

ಮೂರು ದಿನಗಳ ಕಾಲ ರೋಮಾಂಚನಕಾರಿ ಅನುಭವಗಳನ್ನು ಕಟ್ಟಿಕೊಟ್ಟ ‘ಏರೊ ಇಂಡಿಯಾ 2021’ ವೈಮಾನಿಕ ಪ್ರದರ್ಶನ ಶುಕ್ರವಾರ ಸಂಪನ್ನಗೊಂಡಿತು.

ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನದಲ್ಲಿ ಈ ಬಾರಿ ವಿದೇಶಿ ವಿಮಾನಗಳ ಆಕರ್ಷಣೆಗಳು ಇರಲಿಲ್ಲ. ಆದರೂ, ಭಾರತೀಯ ವಾಯುಸೇನೆಯ ತೇಜಸ್‌, ರಫೆಲ್‌ ಹಾಗೂ ಸುಖೋಯ್‌–30 ಯುದ್ಧವಿಮಾನಗಳು ಪ್ರದರ್ಶಿಸಿದ ಮೈನವಿರೇಳಿಸುವ ಕಸರತ್ತುಗಳು, ಸಾರಂಗ ಹಾಗೂ ಸೂರ್ಯಕಿರಣ ತಂಡಗಳ ಜುಗಲ್‌ಬಂದಿ ಈ ಕೊರತೆ ಎದ್ದು ಕಾಣದಂತೆ ಮಾಡಿದವು. ಕೋವಿಡ್‌ ಹರಡುತ್ತಿರುವ ಸಂದರ್ಭದಲ್ಲೂ ನೀಲಾಗಸದಲ್ಲಿ ಉಕ್ಕಿನ ಹಕ್ಕಿಗಳು ಸೃಷ್ಟಿಸುವ ಮಾಯಾಲೋಕವನ್ನು ಕಣ್ತುಂಬಿಕೊಳ್ಳಲು ಬಂದವರು ಸ್ಮರಣೀಯ ಅನುಭವಗಳೊಂದಿಗೆ ಮರಳಿದರು.

ಕೊನೆಯ ದಿನದ ಪ್ರದರ್ಶನದಲ್ಲಿ ರಾಷ್ಟ್ರಪತಿಗಳ ಉಪಸ್ಥಿತಿ ಪೈಲಟ್‌ಗಳಲ್ಲಿ ಹೊಸ ಹುರುಪು ಮೂಡಿಸಿತ್ತು. ಶುಕ್ರವಾರ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನಗೊಂಡ ಒಂದೊಂದು ವಿನ್ಯಾಸಗಳೂ ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಲಘು ಯುದ್ಧ ಹೆಲಿಕಾಪ್ಟರ್‌ (ಎಲ್‌ಸಿಎಚ್‌) ರಾಷ್ಟ್ರಪತಿಗಳ ಎದುರು ಮೂತಿ ಕಳೆಗೆ ಮಾಡಿ ಬಾಲ ಎತ್ತಿ ನಮಿಸಿತು.

ಕೊನೆಯ ದಿನವೂ ಮನಗೆದ್ದಿದ್ದು ಮಾತ್ರ ಸೂರ್ಯಕಿರಣ ಹಾಗೂ ಸಾರಂಗ ತಂಡಗಳ ಜೊತೆಯಾಟ. ಸೂರ್ಯಕಿರಣ ತಂಡ ನಭದಲ್ಲಿ ವಜ್ರದಾಕೃತಿ ಮೂಡಿಸುತ್ತಾ ಮಿಂಚಿನ ವೇಗದಲ್ಲಿ ಸಂಚರಿಸುತ್ತಿದ್ದಂತೆಯೇ ಸಾರಂಗ ತಂಡದ ಹೆಲಿಕಾಪ್ಟರ್‌ಗಳು ಡಾಲ್ಫಿನ್‌ ಜಿಗಿತದ ಮೂಲಕ ಮನಮುದಗೊಳಿಸಿದವು. ಸೂರ್ಯಕಿರಣ ತಂಡ, ತೇಜಸ್‌, ಸುಖೋಯ್‌ ವಿಮಾನಗಳ ವಿನ್ಯಾಸ ಮೋಹಕವಾಗಿ ಮೂಡಿಬಂತು. ಒಟ್ಟಾಗಿ ಸಾಗಿಬಂದು ಒಮ್ಮೆಲೆ ಚದುರುವ ಮೂಲಕ ‘ಬಾಂಬ್‌ ಸ್ಫೋಟ’ದ ಅನುಭವವನ್ನು ಕಟ್ಟಿಕೊಟ್ಟವು.

ರಫೆಲ್, ತೇಜಸ್‌ ಹಾಗೂ ಸುಖೋಯ್ –30 ವಿಮಾನಗಳು ಕಿವಿಗಡಚಿಕ್ಕುವ ಸದ್ದು ಮೊಳಗಿಸುತ್ತಾ ಗಗನದಲ್ಲಿ ಕೋಲಾಹಲ ಸೃಷ್ಟಿಸಿದ ರೀತಿ ಪ್ರೇಕ್ಷಕರ ಎದೆಯಲ್ಲಿ ಕಂಪನ ಸೃಷ್ಟಿಸಿತು.

ಈ ಬಾರಿಯ ವಿಶೇಷ ಆಕರ್ಷಣೆಯಾದ ‘ಆತ್ಮನಿರ್ಭರ್‌’ ವಿನ್ಯಾಸ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ವಿದೇಶಿ ಪ್ರವಾಸಿಗರೆದುರು ತೆರೆದಿಟ್ಟಿತು. ಅಮೆರಿಕದ ಬಿ–1ಬಿ ಬಾಂಬರ್‌ ಕೊನೆಯ ದಿನವೂ ಹಾರಾಟ ನಡೆಸಿತು.

ನವೋದ್ಯಮಗಳಿಗೆ ಉತ್ತೇಜನ ನೀಡುವ ‘ಸ್ಟಾರ್ಟ್‌ ಅಪ್‌ ಮಂಥನ, ಪರಸ್ಪರ ಒಪ್ಪಂದಗಳ ಮೂಲಕ ಸಂಬಂಧ ಬೆಸೆಯುವ ‘ಬಂಧನ್‌’ ಕಾರ್ಯಕ್ರಮಗಳು ಈ ಬಾರಿಯ ಪ್ರದರ್ಶನಕ್ಕೆ ಹೊಸ ಆಯಾಮ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT