ಮಂಗಳವಾರ, ಜೂನ್ 28, 2022
20 °C

ಮಳೆ ವೇಳೆ ಡಾಂಬರೀಕರಣ: ಮುಖ್ಯ ಆಯುಕ್ತರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ವೇಳೆ ಡಾಂಬರೀಕರಣ-ಸಾಂದರ್ಭಿಕ ಚಿತ್ರ

ಬೆಂಗಳೂರು: ಯಲಹಂಕ ವಲಯದ ಸೋಮೇಶ್ವರನಗರದಲ್ಲಿ ಡಾಂಬರೀಕರಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಹಾಗೂ ಮಳೆಯ ನಡುವೆಯೇ ಡಾಂಬರೀಕರಣ ನಡೆಸಿರುವ ಬಗ್ಗೆ ಸ್ಥಳೀಯ ನಿವಾಸಿ ಡಾ.ಆನಂದ ಕುಮಾರ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಲಿಖಿತ ದೂರು ನೀಡಿದ್ದಾರೆ.

ಕಳಪೆ ಕಾಮಗಾರಿಗೆ ಕಾರಣರಾಗಿರುವ ಗುತ್ತಿಗೆದಾರರ ವಿರುದ್ಧ ಹಾಗೂ ಬಿಬಿಎಂಪಿಯ ಎಂಜಿನಿಯರ್‌ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

‘ಜೂನ್‌ 3ರಂದು ಮಧ್ಯಾಹ್ನ 3.45ರ ವೇಳೆ ಸೋಮೇಶ್ವರ ನಗರದ ಮೂರನೇ ಮುಖ್ಯರಸ್ತೆಯ ಎರಡನೇ ಅಡ್ಡರಸ್ತೆಗೆ ಮಳೆಯ ನಡುವೆಯೇ ಡಾಂಬರೀಕರಣ ನಡೆಸಲಾಗಿದೆ. ಈ ವಿಚಾರ ತಿಳಿದರೂ ಬಿಬಿಎಂಪಿ ಎಂಜಿನಿಯರ್‌ಗಳು ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ. ನಾನು ಈ ವಿಚಾರವನ್ನು ಅವರ ಗಮನಕ್ಕೆ ತಂದೆ. ಆಗ ಅವರು, ‘ಒಂದು ವೇಳೆ ರಸ್ತೆ ಹದಗೆಟ್ಟರೂ, ಕಾಮಗಾರಿಯ ಲೋಪ ನಿರ್ವಹಣೆಯ ಹೊಣೆಗಾರಿಕೆ ಅವಧಿ ಜಾರಿಯಲ್ಲಿರುವುದರಿಂದ ಸಂಬಂಧಪಟ್ಟ ಗುತ್ತಿಗೆದಾರರೇ ಅದನ್ನೇ ದುರಸ್ತಿ ಮಾಡುತ್ತಾರೆ’ ಎಂದು ಉದಾಸೀನದಿಂದ ಹೇಳಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ಇಂತಹ ಕಳಪೆ ಕಾಮಗಾರಿಗಳಿಂದಾಗಿಯೇ ರಸ್ತೆಗಳಲ್ಲಿ ಬೇಗನೇ ಗುಂಡಿಗಳು ನಿರ್ಮಾಣವಾಗುತ್ತವೆ. ಕಾಮಗಾರಿ ನಡೆಸಿದ ಬಳಿಕ ಗುತ್ತಿಗೆದಾರರು ಹೊಣೆಗಾರಿಕೆಯ ಅವಧಿಯಲ್ಲೂ ಅದರ ನಿರ್ವಹಣೆಯನ್ನು ಸರಿಯಾಗಿ ಮಾಡುವುದಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.

‘ಇದೇ ರಸ್ತೆಯಲ್ಲಿ ಇತರ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು, ಅದಕ್ಕಾಗಿ ಅಗೆದ ಮಣ್ಣನ್ನು ರಸ್ತೆಯಲ್ಲೇ ರಾಶಿ ಹಾಕಲಾಗಿದೆ. ಈ ನಡುವೆಯೇ ಕಾಮಗಾರಿ ನಡೆಸಲಾಗಿದೆ’ ಎಂದೂ ಅವರು ದೂರಿದ್ದಾರೆ.

ಯಲಹಂಕ ವಲಯದ ಜಂಟಿ ಆಯುಕ್ತರಿಗೆ, ಕಾರ್ಯಪಾಲಕ ಎಂಜಿನಿಯರ್‌ಗೆ ಹಾಗೂ ಬಿಬಿಎಂಪಿಯ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಿಗೂ ದೂರಿನ ಪ್ರತಿಯನ್ನು ಆನಂದ್‌ ಕುಮಾರ್ ಕಳುಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು